ಕೊಪ್ಪಳ/ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕೆಪಿಸಿಸಿ ಹಾಗೂ ಎಐಸಿಸಿ ಚುನಾವಣಾ ಸಮಿತಿ ದೂರು ಸಲ್ಲಿಕೆಯಾಗಿದೆ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದ್ದ ಕಾರ್ಯಕ್ರಮಗಳಲ್ಲಿ ಮುಂಬರುವ ಚುನಾವಣೆಯಲ್ಲಿ (Election 2023) ಕೊಪ್ಪಳ ಜಿಲ್ಲೆಯ ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅವರು ಈಗಾಗಲೇ ಘೋಷಣೆ ಮಾಡಿದ್ದಾರೆ ಎಂಬ ವಿಚಾರವಾಗಿ ದೂರು ಸಲ್ಲಿಕೆಯಾಗಿದೆ. ಕಾಂಗ್ರೆಸ್ ಮುಖಂಡ ಮುಕುಂದರಾವ್ ಭವಾನಿಮಠ ಎಂಬುವವರು ದೂರು ನೀಡಿದ್ದಾಗಿ ಹೇಳಿಕೊಂಡಿದ್ದಾರೆ.
ಈ ಕುರಿತು ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಕುಂದರಾವ್ ಭವಾನಿಮಠ, ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅದರದ್ದೇ ಆದ ನಿಯಮಗಳು ಇವೆ. ರೀತಿ-ನೀತಿಗಳು ಇವೆ. ನಾನು ಕನಕಗಿರಿ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಅರ್ಜಿಯನ್ನೂ ಸಲ್ಲಿಸಿದ್ದೇನೆ. ಆದರೆ, ಇಷ್ಟರೊಳಗೆ ಸಿದ್ದರಾಮಯ್ಯ ಅವರು ಜಿಲ್ಲೆಯ ಐದು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಒಬ್ಬರು ಹಿರಿಯರಾಗಿ ಅವರು ಈ ರೀತಿ ಮಾಡಿರುವುದು ತಪ್ಪು ಎಂದು ಹೇಳಿದ್ದಾರೆ.
ಈ ಬಗ್ಗೆ ನಾನು ಕೆಪಿಸಿಸಿ ಹಾಗೂ ಎಐಸಿಸಿ ಚುನಾವಣಾ ಸಮಿತಿಗೆ ದೂರು ಸಲ್ಲಿಸಿದ್ದೇನೆ. ಭಾನುವಾರ ಕೊಪ್ಪಳ ತಾಲೂಕಿನ ವನಬಳ್ಳಾರಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಅವರು, ಜಿಲ್ಲೆಯ ಐವರು ಅಭ್ಯರ್ಥಿಗಳ ಹೆಸರನ್ನು ಉಲ್ಲೇಖಿಸಿ ಬೆಂಬಲಿಸುವಂತೆ ಮನವಿ ಮಾಡಿದ್ದರು ಎಂದು ಹೇಳಲಾಗಿದ್ದು, ಈ ಸಂಬಂಧ ಈಗ ಮುಕುಂದರಾವ್ ಭವಾನಿಮಠ ಕೆಪಿಸಿಸಿ ಹಾಗೂ ಎಐಸಿಸಿಗೆ ದೂರು ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಅವರಿಂದಲೂ ವಿರೋಧ
ಕೊಪ್ಪಳದ ಐದು ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಣೆ ಮಾಡಿರುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೆಂಗಣ್ಣಿಗೆ ಗುರಿಯಾಗಿದೆ. ಟಿಕೆಟ್ ಘೋಷಣೆ ಮಾಡಲು ಸಿದ್ದರಾಮಯ್ಯ ಅವರಿಗೆ ಅಧಿಕಾರ ಇಲ್ಲ. ನನಗೂ ಅಧಿಕಾರ ಇಲ್ಲ. ಇದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಆದರೆ, ಸಿದ್ದರಾಮಯ್ಯ ಅವರು ಈ ಮಧ್ಯೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿರುವುದು ಸರಿಯಾದ ಕ್ರಮ ಅಲ್ಲ ಎಂದು ಬೆಂಗಳೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ | Election 2023 | ಕೊನೆಗೂ ಕಾಂಗ್ರೆಸ್ ಟಿಕೆಟ್ ಪಡೆಯಲು ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ: ಒಂದೇ ಕ್ಷೇತ್ರದಿಂದ ಸ್ಪರ್ಧೆ