Site icon Vistara News

Election 2023 | ಯು.ಬಿ. ಬಣಕಾರ್‌ ಕಾಂಗ್ರೆಸ್‌ ಸೇರ್ಪಡೆ, ಸಚಿವ ಬಿ.ಸಿ ಪಾಟೀಲ್‌ ವಿರುದ್ಧ ಸ್ಪರ್ಧೆಗೆ ಟಿಕೆಟ್‌ ಪಕ್ಕಾ

ಯು.ಬಿ. ಬಣಕಾರ್‌ ಕಾಂಗ್ರೆಸ್‌ ಸೇರ್ಪಡೆ

ಬೆಂಗಳೂರು: ಹಿರೇಕೆರೂರು ಬಿಜೆಪಿ ಮಾಜಿ ಶಾಸಕ ಯು.ಬಿ ಬಣಕಾರ್, ಬಿಜಾಪುರದ ಮಲ್ಲಿಕಾರ್ಜುನ ರೋಣಿ ಹಾಗೂ ಕೂಡ್ಲಗಿಯ ಜೆಡಿಎಸ್ ಮುಖಂಡ ಡಾ. ಎನ್.ಟಿ ಶ್ರೀನಿವಾಸ್ ಅವರು ಸೋಮವಾರ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಸೇರಿದರು. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಹಾಗೂ ಇತರ ನಾಯಕರು ಪಕ್ಷದ ಬಾವುಟ ಹಾಗೂ ಶಾಲು ನೀಡಿ ಈ ನಾಯಕರು ಹಾಗೂ ಅವರ ಬೆಂಬಲಿಗರನ್ನು ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ (Election 2023) ಸೇರ್ಪಡೆ ಮಾಡಿಕೊಂಡರು.

ಯು.ಬಿ. ಬಣಕಾರ್‌ ಅವರು ಹಿರೇಕೆರೂರಿನ ಮಾಜಿ ಶಾಸಕರಾಗಿದ್ದು, ಕಳೆದ ೨೦೧೮ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಬಿ.ಸಿ. ಪಾಟೀಲ್‌ ಅವರ ವಿರುದ್ಧ ಸೋಲು ಕಂಡಿದ್ದರು. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿ.ಸಿ ಪಾಟೀಲ್‌ ಅವರೇ ಬಿಜೆಪಿಗೆ ಬಂದು ಮಧ್ಯಂತರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಗೆದ್ದರು. ಈ ನಡುವೆ ಪರಮ ವಿರೋಧಿ ಬಿ.ಸಿ ಪಾಟೀಲ್‌ ಅವರಿಗೆ ಬಿಜೆಪಿ ಮಣೆ ಹಾಕಿದ್ದು, ಬಿ.ಸಿ. ಪಾಟೀಲರು ಬಂದ ಮೇಲೆ ಕ್ಷೇತ್ರದಲ್ಲಿ, ಪಕ್ಷದಲ್ಲಿ ತಮ್ಮ ಪ್ರಾಮುಖ್ಯತೆ ಕಡಿಮೆ ಆಗಿದ್ದರಿಂದ ಬೇಸರಗೊಂಡಿದ್ದ ಬಣಕಾರ್‌ ಈಗ ಕಾಂಗ್ರೆಸ್‌ ಸೇರಿದ್ದಾರೆ. ಅವರಿಗೆ ಹಿರೇಕೆರೂರಿನ ಕಾಂಗ್ರೆಸ್‌ ಟಿಕೆಟ್‌ ಬಹುತೇಕ ಪಕ್ಕಾ ಆಗಿದೆ.

ತುಂಬಿದ ಮನೆಯಾಗಿದೆ ಕಾಂಗ್ರೆಸ್‌
ʻʻಬಹಳ ಜನ ಕಾಂಗ್ರೆಸ್ ಖಾಲಿಯಾಗಿರುವ ಮನೆ. ಅಲ್ಲಿಗೆ ಯಾರು ಹೋಗುತ್ತಾರೆ. ಡಿ.ಕೆ. ಶಿವಕುಮಾರ್ ಎಲ್ಲರನ್ನೂ ಕರೆಯುತ್ತಿದ್ದಾರೆ ಎಂದು ಕೆಲವು ಸ್ನೇಹಿತರು ಮಾತನಾಡುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಸೇರುವವರ ದೊಡ್ಡ ಪಟ್ಟಿ ಇದೆ. ಇದನ್ನು ಒಂದೇ ಬಾರಿ ಬಿಡುಗಡೆ ಮಾಡುವುದಿಲ್ಲ. ಇಂದು ಶುಭ ಮುಹೂರ್ತ, ಶುಭ ಗಳಿಗೆಯಲ್ಲಿ ಬೇರೆ ಪಕ್ಷದ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆʼʼ ಎಂದು ಸಮಾರಂಭದಲ್ಲಿ ಮಾಡನಾಡಿದ ಕೆಪಿಸಿಸಿಸ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ʻʻಹಿರೇಕೆರೂರಿನ ಮಾಜಿ ಶಾಸಕರಾದ ಯು.ಬಿ ಬಣಕಾರ್ ಅವರು ಬಹಳ ದಿನದಿಂದ ಪಕ್ಷ ಸೇರ್ಪಡೆಯಾಗಬೇಕಿತ್ತು. ಅವರ ತಂದೆ ಕೂಡ ಜನರ ಸೇವೆ ಮಾಡಿದ್ದು, ಇಂದು ಅವರ ಮಗ ಬಿಜೆಪಿಯಲ್ಲಿ ಅಧಿಕಾರ ತ್ಯಾಗ ಮಾಡಿ ಯಾವುದೇ ಷರತ್ತು ಇಲ್ಲದೇ ಪಕ್ಷ ಸೇರ್ಪಡೆಗೆ ಅರ್ಜಿ ಹಾಕಿದ್ದರು. ನಾನು ಪಕ್ಷದ ಹಿರಿಯ ನಾಯಕರು ಹಾಗೂ ಕೋಳಿವಾಡ ಅವರು, ಡಿ.ಆರ್. ಪಾಟೀಲ್ ಸೇರಿದಂತೆ ಆ ಭಾಗದ ಪಕ್ಷದ ಮುಖಂಡರ ಜತೆ ಚರ್ಚೆ ಮಾಡಿದ್ದೇನೆ. ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರು ಇವರ ಸೇರ್ಪಡೆಗೆ ಒಮ್ಮತದ ಒಪ್ಪಿಗೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಇಂದು ಅವರಿಗೆ ತುಂಬು ಹೃದಯದ ಸ್ವಾಗತ ಬಯಸುತ್ತೇನೆ. ಬಣಕಾರ್ ಅವರ ಜತೆ ಮಂಜಣ್ಣ, ಶಿವರಾಜ್ ಹರಿಜನ್, ಮಹೇಂದ್ರ, ಹೇಮಣ್ಣ, ಷಣ್ಮುಗಯ್ಯ ಅವರು ಸೇರಿದಂತೆ ಹಲವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆʼʼ ಎಂದರು.

ʻʻಇನ್ನು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಹಿರಿಯ ನಾಯಕರ ಎನ್. ಟಿ ಬೊಮ್ಮಣ್ಣ ಅವರ ಪುತ್ರ ಡಾ. ಶ್ರೀನಿವಾಸ್ ಅವರನ್ನೂ ಕೂಡ ನೂರಾರು ಬೆಂಬಲಿಗರೊಂದಿಗೆ ಪಕ್ಷ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ಅವರ ಜತೆ ಎನ್. ಟಿ ತಮ್ಮಣ್ಣ, ಪಂಪಾಪತಿ, ಎಂ. ಪಿ ಚಂದ್ರಣ್ಣ, ಬಸವರಾಜ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆʼʼ ಎಂದು ಶಿವಕುಮಾರ್‌ ಹೇಳಿದರು.

ಷರತ್ತುರಹಿತವಾಗಿ ಸೇರಿದ್ದೇನೆ ಎಂದ ಬಣಕಾರ್‌
ʻʻಸಾಮಾನ್ಯ ಕಾರ್ಯಕರ್ತನಾಗಿ ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ. ನಾನು ಕಳೆದ 30 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಹಲವು ಸ್ಥಾನಗಳಲ್ಲಿ ಕೆಲಸ ಮಾಡಿದ್ದೇನೆ. 2018ರಲ್ಲಿ ಬಿ.ಸಿ ಪಾಟೀಲ್ ಅವರು ಈ ಎಲ್ಲಾ ನಾಯಕರ ಬೆಂಬಲದಿಂದ ಗೆದ್ದಿದ್ದರು. ಆದರೆ ಅಧಿಕಾರ ಆಸೆಗೆ ಪಕ್ಷ ತೊರೆದರು. ಅದೇ ಹಿರೇಕೆರೂರು ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುತ್ತೇನೆ. ನನ್ನ ಗುರಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿದೆʼ ಎಂದು ಯು.ಬಿ. ಬಣಕಾರ್‌ ಹೇಳಿದರು.

ಸಿದ್ದರಾಮಯ್ಯ ಹೇಳಿದ್ದೇನು?
ʻʻಬಿ.ಸಿ ಪಾಟೀಲ್ ಆಪರೇಷನ್ ಕಮಲಕ್ಕೆ ಒಳಗಾದ ವ್ಯಕ್ತಿ. ದುಡ್ಡಿನ ಆಸೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಆತ ಜನಪ್ರತಿನಿಧಿ ಆಗಲು ಯೋಗ್ಯರಲ್ಲ. ಅವರನ್ನು ಹಿರೇಕೆರೂರಿನಲ್ಲಿ ಸೋಲಿಬೇಕು. ಬಣಕಾರ್‌ ಅವರ ಆಗಮನದಿಂದ ಕಾಂಗ್ರೆಸ್‌ ಬಲ ಹೆಚ್ಚಾಗಿದೆʼʼ ಎಂದು ಸಿದ್ದರಾಮಯ್ಯ ಹೇಳಿದರು.

ಶ್ರೀನಿವಾಸ್ ಅವರದು ರಾಜಕೀಯ ಮನೆತನ. ಕೂಡ್ಲಿಗಿ ಯಲ್ಲಿ ಅವರ ತಂದೆ ನಾಯಕರಾಗಿದ್ದರು. ಅಲ್ಲಿಯೂ ಈ ಬಾರಿ ಕಾಂಗ್ರೆಸ್ ಗೆಲ್ಲಬೇಕು. ಕೋಮುವಾದಿ ಬಿಜೆಪಿ ಮಣಿಸಲು ಕಾಯಾ ವಾಚಾ ಮನಸಾ ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು. ಮಲ್ಲಿಕಾರ್ಜುನ ರೊಣಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು. ಈಗ ಮತ್ತೆ ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜಾಪುರದಲ್ಲಿ ಗಾಣಿಗ ಸಮಾಜ ರಾಜ್ಯ ಕಾರ್ಯಾಧ್ಯಕ್ಷರಾಗಿದ್ದಾರೆ. ಇವರ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ ಹೆಚ್ಚಿದೆ ಎಂದರು.

ಇದನ್ನೂ ಓದಿ Election 2023 | ಕೊಪ್ಪಳದ 5 ಕ್ಷೇತ್ರದಲ್ಲಿ ಅಭ್ಯರ್ಥಿ ಹೆಸರು ಘೋಷಿಸಿದ್ದ ಸಿದ್ದು ವಿರುದ್ಧ ಎಐಸಿಸಿಗೆ ದೂರು; ಡಿಕೆಶಿ ಅಸಮಾಧಾನ

Exit mobile version