ನವದೆಹಲಿ: ಕರ್ನಾಟಕ ಸಾರ್ವಭೌಮತ್ವ ಕುರಿತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ನೀಡಿದ ಹೇಳಿಕೆ ಖಂಡಿಸಿ ಬಿಜೆಪಿ ದೂರು ದಾಖಲಿಸಿದ ಬೆನ್ನಲ್ಲೇ, ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಚುನಾವಣೆ ಆಯೋಗ ನೋಟಿಸ್ ನೀಡಿದೆ. “ಸೋನಿಯಾ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಟ್ವಿಟರ್ ಖಾತೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಕುರಿತು ಸ್ಪಷ್ಟನೆ ನೀಡಬೇಕು” ಎಂದು ಚುನಾವಣೆ ಆಯೋಗ ಸೂಚಿಸಿದೆ.
ಕೇಂದ್ರ ಸಚಿವ ಭೂಪೇಂದ್ರ ಯಾದವ್ ನೇತೃತ್ವದ ನಿಯೋಗವು ದಿಲ್ಲಿಯ ಚುನಾವಣಾ ಆಯೋಗದ ಕೇಂದ್ರ ಕಚೇರಿಗೆ ತೆರಳಿ, ಸೋನಿಯಾ ಗಾಂಧಿ ಅವರು ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದಾರೆ. ಇದು ಭಾರತದ ಅಖಂಡತೆಗೆ ಧಕ್ಕೆ ತರುವ ವಿಚಾರ ಎಂದು ಬಿಜೆಪಿ ಟೀಕಿಸಿದೆ.
ಕಾಂಗ್ರೆಸ್ ಟ್ವೀಟ್
ಸೋನಿಯಾ ಗಾಂಧಿ ಅವರು ಹೇಳಿದ್ದೇನು?
ಶನಿವಾರ ಹುಬ್ಬಳ್ಳಿಯಲ್ಲಿ ಭಾಷಣ ಮಾಡಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು, ಕರ್ನಾಟಕದ ಪ್ರತಿಷ್ಠೆ, ಸಾರ್ವಭೌಮತ್ವ ಅಥವಾ ಸಮಗ್ರತೆಗೆ ಯಾರಾದರೂ ಬೆದರಿಕೆಯೊಡ್ಡಲು ಕಾಂಗ್ರೆಸ್ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಭಾಷಣದ ತುಣಕನ್ನು ಕಾಂಗ್ರೆಸ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಷೇರ್ ಮಾಡಿತ್ತು. ಅದೇ ಟ್ವೀಟ್ ಉಲ್ಲೇಖಿಸಿ ಈಗ ಬಿಜೆಪಿಯು ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದೆ.
ನರೇಂದ್ರ ಮೋದಿ ಟೀಕೆ
ಭಾನುವಾರ ಮೈಸೂರಿನಲ್ಲಿ ನಂಜನಗೂಡಿನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯವನ್ನು ಪ್ರಸ್ತಾಪಿಸಿ, ಆಕ್ರೋಶಭರಿತರಾಗಿ ಮಾತನಾಡಿದ್ದರು. ಕರ್ನಾಟಕದಲ್ಲಿ ಮಾತ್ರವಲ್ಲ, ನಾನು ಇಡೀ ದೇಶಕ್ಕೆ ಈ ಮಾತನ್ನು ಬಹಳ ನೋವಿನಿಂದ ಹೇಳಲು ಇಚ್ಛಿಸುತ್ತೇನೆ. ನಿನ್ನೆ ಕರ್ನಾಟಕಕ್ಕೆ ಬಂದ ಕಾಂಗ್ರೆಸ್‌ನ ಶಾಹಿ ಪರಿವಾರವು ಕರ್ನಾಟಕದ ಸಾರ್ವಭೌಮತ್ವವನ್ನು ಕಾಪಾಡುತ್ತೇನೆ ಹೇಳಿದೆ. ಇದರ ಅರ್ಥ ಏನು ಗೊತ್ತಾ..? ಯಾವಾಗ ದೇಶ ಸ್ವತಂತ್ರವಾಗುತ್ತದೋ ಆಗ ಆ ದೇಶವನ್ನು ಸಾರ್ವಭೌಮರಾಷ್ಟ್ರ ಎಂದು ಕರೆಯುತ್ತಾರೆ. ಈಗ ಕಾಂಗ್ರೆಸ್ ಹೇಳುತ್ತಿರುವ ಮಾತಿನ ಅರ್ಥ ಏನೆಂದರೆ, ಭಾರತದಿಂದ ಕರ್ನಾಟಕವು ಪ್ರತ್ಯೇಕವಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದರು.
ಇದನ್ನೂ ಓದಿ: ‘ಕರ್ನಾಟಕ ಸಾರ್ವಭೌಮ’ ಹೇಳಿಕೆ: ಕಾಂಗ್ರೆಸ್ ಮಾನ್ಯತೆ ರದ್ದು ಕೋರಿ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು