Site icon Vistara News

Election Gamble : ಕಡೂರಿನಲ್ಲಿ ಬೆಳ್ಳಿ ಪ್ರಕಾಶ್‌ ಗೆದ್ದೇ ಗೆಲ್ತಾರೆ ಅಂತ ಇಡೀ ಆಸ್ತಿಯನ್ನೇ ಬಾಜಿಗೆ ಇಟ್ಟ ಬಿಜೆಪಿ ಕಾರ್ಯಕರ್ತ

Kaduru challenge

#image_title

ಚಿಕ್ಕಮಗಳೂರು: ಚುನಾವಣೆ ಬಂತೆಂದರೆ ಪಂಥಾಹ್ವಾನ, ಬಾಜಿ ಕಟ್ಟೋದೆಲ್ಲ ತುಂಬ ಜೋರಾಗುತ್ತದೆ. ಕೆಲವರು ಯಾರೋ ಅಭ್ಯರ್ಥಿ ಮೇಲೆ ಲಕ್ಷಾಂತರ ರೂ. ಬಾಜಿ ಕಟ್ಟುತ್ತಾರೆ, ಇನ್ನು ಕೆಲವರು ಆಸ್ತಿಯನ್ನೇ ಬಾಜಿಗಿಡಲು ಮುಂದಾಗುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತೆ ಎಂದು ಸವಾಲು ಹಾಕಿರುವ ವ್ಯಕ್ತಿಯೊಬ್ಬರು ಅದಕ್ಕಾಗಿ ದೊಡ್ಡ ಮೊತ್ತದ ಬಾಜಿ ಕಟ್ಟುವ ಸವಾಲು ಹಾಕಿದ್ದಾರೆ (Election Gamble). ಹಾಲಿ ಬಿಜೆಪಿ ಶಾಸಕರಾಗಿರುವ ಬೆಳ್ಳಿ ಪ್ರಕಾಶ್ ಅವರೇ ಮುಂದೆಯೂ ಗೆಲ್ಲುತ್ತಾರೆ ಎಂದು ಅವರು ಬಾಜಿ ಕಟ್ಟಲು ಮುಂದಾಗಿದ್ದಾರೆ. ಅದಕ್ಕೆ ಅವರು ಸವಾಲಾಗಿ ಇಡಲಿರುವ ಮೊತ್ತ ಸಣ್ಣದೇನಲ್ಲ.ಅಂದಹಾಗೆ ಈ ರೀತಿ ಚಾಲೆಂಜ್‌ ಮಾಡಿರೋದು ಕಡೂರು ಕ್ಷೇತ್ರದ ಬಿಜೆಪಿ ಮುಖಂಡ ಹನುಮಂತಪ್ಪ ಎಂಬವರು. ಕಡೂರು ತಾಲೂಕಿನ ನೀಲೇ ಗೌಡಲ ಕೊಪ್ಪಲು ಗ್ರಾಮದಲ್ಲಿ ನಡೆದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದ್ದಾರೆ.

ʻʻಬೆಳ್ಳಿ ಪ್ರಕಾಶ್‌ ಅವರು ಗೆಲ್ಲೋದು ಖಚಿತ. ಅದಕ್ಕಾಗಿ ನಾನು ಬಾಜಿ ಕಟ್ತೀನಿ. ಒಂದು ಕೋಟಿ ಎರಡು ಕೋಟಿನೂ ಅಲ್ಲ, ಬಾಜಿ ಕೊಟ್ಟವರು ಬನ್ನಿ. ನನ್ನ ಇಡೀ ಆಸ್ತಿಯನ್ನು ಬಾಜಿ ಕಟ್ತೀನಿʼʼ ಎಂದು ಸವಾಲು ಹಾಕಿದ್ದಾರೆ ಹನುಮಂತಪ್ಪ.

ʻʻಯಾರು ಬೇಕಾದರೂ ಚಾಲೆಂಜ್ ಮಾಡಬಹುದು. ಚಾಲೆಂಜ್ ಮಾಡೋರು ಬರಲಿ ನನ್ನ ಆಸ್ತಿಯ ಹಕ್ಕುಪತ್ರಕ್ಕೆ ಸಹಿ ಮಾಡಿ ಕೊಡುತ್ತೇನೆʼʼ ಎಂದು ಹನುಮಂತಪ್ಪ ಹೇಳಿದ್ದಾರೆ.

ಕಡೂರು ಬಿಜೆಪಿ ಶಾಸಕರಾಗಿರುವ ಬೆಳ್ಳಿ ಪ್ರಕಾಶ್ ಅವರ ಸಮ್ಮುಖದಲ್ಲೇ ಹನುಮಂತಪ್ಪ ಅವರು ಈ ಘೋಷಣೆಯನ್ನು ಮಾಡಿದ್ದು, ಆಗ ಶಾಸಕರು ಸೇರಿದಂತೆ ನೆರೆದವರೆಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದರು.

ಹನುಮಂತಪ್ಪ ಅವರು ದೊಡ್ಡ ಮಟ್ಟದ ಹಿಡುವಳಿದಾರರೆಂದು ಹೇಳಲಾಗಿದೆ. ಆದರೆ, ಜಾಗ ಎಷ್ಟಿದೆ ಎನ್ನುವುದು ಸ್ಪಷ್ಟವಿಲ್ಲ.

ಕಡೂರು ವಿಧಾನಸಭಾ ಕ್ಷೇತ್ರಕ್ಕಾಗಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಬೆಳ್ಳಿ ಪ್ರಕಾಶ್‌ ಅವರು (62232) ಜೆಡಿಎಸ್‌ ಅಭ್ಯರ್ಥಿಯಾಗಿದ್ದ ವೈಎಸ್‌ವಿ ದತ್ತ (46,860) ಅವರನ್ನು ಸೋಲಿಸಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ಎಸ್‌ ಆನಂದ್‌ ಅವರು 46162 ಮತಗಳನ್ನು ಪಡೆದಿದ್ದರು. ಈ ಬಾರಿ ವೈಎಸ್‌ವಿ ದತ್ತ ಅವರು ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರಿದ್ದಾರೆ. ಹೀಗಾಗಿ ಸ್ಪರ್ಧೆ ಸ್ವಲ್ಪ ಮಟ್ಟಿಗೆ ಕಠಿಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಷ್ಟಾದರೂ ಹನುಮಂತಪ್ಪ ಅವರು ಭಾರಿ ಧೈರ್ಯದಿಂದ ಬಾಜಿ ಕಟ್ಟಿದ್ದಾರೆ. ಅಂದ ಹಾಗೆ, ಹನುಮಂತಪ್ಪ ಅವರ ಈ ಸವಾಲನ್ನು ಯಾರಾದರೂ ಸ್ವೀಕರಿಸುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ : Karnataka Election | ವೈಎಸ್‌ವಿ ದತ್ತ, ಎಚ್‌. ನಾಗೇಶ್‌ ಕೈ ಸೇರ್ಪಡೆ, ಇನ್ನು ನಿತ್ಯವೂ ಕಾಂಗ್ರೆಸ್‌ ಪರ್ವ ಎಂದ ಡಿಕೆಶಿ

Exit mobile version