Site icon Vistara News

ಎಲೆಕ್ಷನ್‌ ಹವಾ | ಕನಕಗಿರಿ | ದಡೇಸೂಗೂರನ್ನು ಬದಿಗೆ ಸರಿಸಿ ಮತ್ತೆ ಅಂಗಡಿ ತೆರೆಯುವ ತವಕದಲ್ಲಿ ತಂಗಡಗಿ

Election hawa farmer mla shivaraj tangadagi trying to get back constituency by basavaraj dadesurugu

ಮೌನೇಶ್‌ ಬಡಿಗೇರ್‌, ಕೊಪ್ಪಳ
ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿ ನೋಡಬೇಕು ಎಂಬ ನಾಣ್ಣುಡಿ ಹೊಂದಿರುವ ಕನಕಗಿರಿ ಕ್ಷೇತ್ರವು ಕಳೆದ ಮೂರು ಚುನಾವಣೆಗಳಿಂದ ಜಿದ್ದಾಜಿದ್ದಿನ ಕ್ಷೇತ್ರವಾಗಿ ಪರಿಗಣಿತವಾಗಿದೆ. ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ಕನಕಗಿರಿಯಲ್ಲಿ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು ಅವರನ್ನು ಸೋಲಿಸಿ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್‌ನ ಶಿವರಾಜ ತಂಗಡಗಿ ಪ್ರಯತ್ನ ನಡೆಸಿದ್ದಾರೆ. ಶಾಸಕ ಬಸವರಾಜ ದಡೇಸೂಗೂರು ಹಾಗೂ ಶಿವರಾಜ ತಂಗಡಗಿ ನಡುವಿನ ರಾಜಕೀಯ ಕೆಸರೆರೆಚಾಟವನ್ನು ಕ್ಷೇತ್ರದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಶಾಸಕ ಬಸವರಾಜ ದಡೇಸೂಗೂರು ಅವರ ಕೆಲ ಅವಾಂತರಗಳು ತಮ್ಮ ಗೆಲುವಿಗೆ ನೆರವಾಗಲಿದೆ ಎಂದು ಶಿವರಾಜ ತಂಗಡಗಿ ಕಾಯುತ್ತಿದ್ದಾರೆ.

ಚುನಾವಣಾ ಇತಿಹಾಸ

ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಕನಕಗಿರಿ ಕ್ಷೇತ್ರವೂ ಒಂದಾಗಿದೆ. ಮಳೆಯಾಧಾರಿತ ಬಹುಪಾಲು ಪ್ರದೇಶವನ್ನೇ ಹೊಂದಿರುವ ಕ್ಷೇತ್ರವಾನಗಿರುವ ಕನಕಗಿರಿ ನೂತನ ಕನಕಗಿರಿ, ಕಾರಟಗಿಯ ತಾಲೂಕಿನ ಕೆಲ ಪ್ರದೇಶಗಳ ವ್ಯಾಪ್ತಿಯನ್ನು ಹೊಂದಿದೆ. ಕಾರಟಗಿ ತಾಲೂಕಿನ ಭಾಗದಲ್ಲಿ ಒಂದಿಷ್ಟು ಪ್ರದೇಶ ನೀರಾವರಿಯಾಗಿದೆ. ಉಳಿದಂತೆ ಕನಕಗಿರಿ ಕ್ಷೇತ್ರ ಡ್ರೈಲ್ಯಾಂಡ್. ಪ್ರಸಿದ್ದ ಕನಕಗಿರಿಯ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನವಿರುವ ಕ್ಷೇತ್ರ.

2008ರಿಂದ ಎಸ್‌ಸಿ ಮೀಸಲು ಕ್ಷೇತ್ರವಾಗಿ ಮಾರ್ಪಾಡಾಯಿತು. ಇದಕ್ಕೂ ಮೊದಲು ಸಾಮಾನ್ಯ ಕ್ಷೇತ್ರವಾಗಿತು. 2008ರಲ್ಲಿ ಬಾಗಲಕೋಟೆ ಜಿಲ್ಲೆಯಿಂದ ಕನಕಗಿರಿ ಕ್ಷೇತ್ರಕ್ಕೆ ವಲಸೆ ಬಂದ ಶಿವರಾಜ ತಂಗಡಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಶಿವರಾಜ ತಂಗಡಗಿ ಪಾತ್ರವೂ ಬಹುಮುಖ್ಯವಾಯಿತು. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕನಕಗಿರಿ ಕ್ಷೇತ್ರದ ಕೊಡುಗೆಯೂ ಇದೆ. 2008ರಿಂದ 2018ರವರೆಗೆ ನಡೆದ ಚುನಾವಣೆಯಲ್ಲಿ ಶಿವರಾಜ ತಂಗಡಗಿ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಒಂದು ಬಾರಿ ಸೋಲನ್ನುಂಡಿದ್ದಾರೆ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಅತ್ಯಾಪ್ತ ಎಂದೇ ಗುರುತಿಸಿಕೊಂಡಿರುವ ಪ್ರಸ್ತುತ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು ಎರಡು ಬಾರಿ ಸ್ಪರ್ಧಿಸಿ ಒಂದು ಬಾರಿ ಸೋಲು, ಮತ್ತೊಂದು ಬಾರಿ ಗೆಲುವು ಕಂಡಿದ್ದಾರೆ. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಬಸವರಾಜ ದಡೇಸೂಗೂರು ಸೋಲನ್ನುಂಡಿದ್ದರು. ಬಳಿಕ 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕ್ಷೇತ್ರದ ಮತದಾರರ ಅನುಕಂಪ ಗಿಟ್ಟಿಸಿಕೊಂಡು ಶಾಸಕರಾಗಿ ಆಯ್ಕೆಯಾದರು. ಈ ಬಾರಿ ಪ್ರಸ್ತುತ ಶಾಸಕ ಬಸವರಾಜ ದಡೇಸೂಗುರುಗೆ ಬಿಜೆಪಿ ಟಿಕೆಟ್ ನೀಡಿದರೆ ಸಾಂಪ್ರದಾಯಿಕ ಎದುರಾಳಿಯಾಗಿರುವ ಶಿವರಾಜ ತಂಗಡಗಿ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಲಿದ್ದಾರೆ. ಕಳೆದ ಬಾರಿಯ ಸೋಲಿನಿಂದ ಕಂಗೆಟ್ಟಿರುವ ತಂಗಡಗಿ ಗೆದ್ದೇ ಗೆಲ್ಲಬೇಕು ಎಂಬ ಪಣದೊಂದಿಗೆ ಚುನಾವಣಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಇಬ್ಬರ ನಡುವೆ ಆಗಾಗ ನಡೆಯುವ ರಾಜಕೀಯ ಆರೋಪ, ಪ್ರತ್ಯಾರೋಪಗಳು ಮನರಂಜನೆ ನೀಡುವಂತಿರುತ್ತವೆ.

ಎಡ, ಬಲದ ಲೆಕ್ಕಾಚಾರ

ಕನಕಗಿರಿ ವಿಧಾನಸಭಾ ಕ್ಷೇತ್ರ 2008ರಿಂದ ಎಸ್‌ಸಿ ಮೀಸಲು ಕ್ಷೇತ್ರವಾದ ಬಳಿಕ ಕ್ಷೇತ್ರದ ಜನರು ಎಸ್‌ಸಿ ಎಡಗೈ-ಬಲಗೈ ಬಗ್ಗೆ ಲೆಕ್ಕಾಚಾರ ಮಾಡುತ್ತಾರೆ. ಇದರ ಆಧಾರದ ಮೇಲೆ ಅಲ್ಲಿನ ಸೋಲು ಗೆಲುವು ನಿರ್ಧಾರವಾಗಲಿದೆ. ಶಿವರಾಜ ತಂಗಡಗಿ ಬಲಗೈ ಸಮುದಾಯದವರಾದರೆ, ಇತ್ತ ಬಸವರಾಜ ದಡೇಸೂಗೂರು ಎಡಗೈ ಸಮುದಾಯದವರು. ಎಸ್‌ಸಿ ಜತೆಗೆ ಲಿಂಗಾಯತ ಸಮುದಾಯದ ಮತಗಳು ಇಲ್ಲಿ ನಿರ್ಣಾಯಕವಾಗಿವೆ. ಹೀಗಾಗಿ ಲಿಂಗಾಯತ ಸಮುದಾಯ ಯಾರನ್ನು ಬೆಂಬಲಿಸುತ್ತಾರೋ ಅವರು ಗೆಲುವು ಸಹ ಸುಲಭವಾಗಲಿದೆ. ತಮ್ಮ ಕ್ಷೇತ್ರದ ಶಾಸಕರಾಗುವವರು ಸ್ಪೃಶ್ಯ ಜನಾಂಗದವರಾಗಿದ್ದರೆ ಒಳಿತು ಎಂಬ ಭಾವನೆ ಹೆಚ್ಚಾಗಿ ಇರುವುದರಿಂದ ಚುನಾವಣೆಯ ಸಂದರ್ಭದಲ್ಲಿ ಎಡಗೈ-ಬಲಗೈ ಲೆಕ್ಕಾಚಾರವೂ ವರ್ಕೌಟ್ ಆಗುತ್ತದೆ.‌ ಈ ನಡುವೆ ತಂಗಡಗಿಗೆ ಟಿಕೆಟ್‌ ತಪ್ಪಿಸಲು ಮುಕುಂದ ರಾವ್‌ ಭವಾನಿಮಠ ಅವರನ್ನು ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ ಹಾಕಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

2023ರಲ್ಲಿ ಮುಖಾಮುಖಿ

ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯದ ಟ್ರೆಂಡ್ ಪ್ರಕಾರ 2023ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಮಾಜಿ ಸಚಿವ ಶಿವರಾಜ ತಂಗಡಗಿ ಹಾಗೂ ಬಿಜೆಪಿಯಿಂದ ಬಸವರಾಜ ದಡೇಸೂಗೂರು ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಕೊನೆ ಕ್ಷಣದಲ್ಲಿ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಅಚ್ಚರಿಪಡಬೇಕಾಗಿಲ್ಲ. ಕನಕಗಿರಿ ಕ್ಷೇತ್ರದಲ್ಲಿ ನವಲಿ ಸಮಾನಾಂತರ ಜಲಾಶಯಕ್ಕೆ ಪ್ರಸ್ತುತ ಸರ್ಕಾರ ಬಜೆಟ್‍ನಲ್ಲಿ ಅನುದಾನ ಘೋಷಣೆ ಮಾಡಿದೆ, ಈ ಯೋಜನೆಯ ಬಗ್ಗೆ ಸ್ವತಃ ಶಾಸಕ ಬಸವರಾಜ ದಡೇಸೂಗೂರು ಅವರಿಗೆ ಸ್ಪಷ್ಟತೆ ಇಲ್ಲ. ಅವರಿಗೆ ದೂರದೃಷ್ಠಿ ಇಲ್ಲ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.

ಅಲ್ಲದೆ ಬಸವರಾಜ ದಡೇಸೂಗೂರು ಮಹಿಳಾ ಅಧಿಕಾರಿಯೊಂದಿಗೆ ಮಾಡಿಕೊಂಡ ಎಡವಟ್ಟುಗಳನ್ನು ಮುಂದಿಟ್ಟುಕೊಂಡು ಶಿವರಾಜ ತಂಗಡಗಿ ತಮ್ಮ ಗೆಲುವಿಗೆ ಮೆಟ್ಟಿಲಾಗಿ ಬಳಸಿಕೊಳ್ಳಬಹುದು. ಇನ್ನು ತಂಗಡಗಿ ಅಧಿಕಾರದಲ್ಲಿದ್ದಾಗ ಕಾರಟಗಿಯಲ್ಲಿ ರೈಸ್ ಟೆಕ್ನಾಲಜಿ ಪಾರ್ಕ್ ಸೇರಿದಂತೆ ಫ್ಲಡ್‍ಫ್ಲೋ ಕೆನಾಲ್ಸ್ ಡಿಪಿಆರ್ ಮಾಡಿಸಿದ್ದು ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ಮತ ಕೇಳಬಹುದು. ಇದೆಲ್ಲದಕ್ಕೂ ಮುಖ್ಯವಾಗಿ ಎಡಗೈ – ಬಲಗೈ ವಿಚಾರವೂ ಚುನಾವಣೆಯಲ್ಲಿ ಕೆಲಸ ಮಾಡುತ್ತದೆ. ತಂಗಡಗಿ ಮತ್ತೊಮ್ಮೆ ತಮ್ಮ ಅಧಿಕಾರದ ಅಂಗಡಿ ತೆಗೆಯುವ ಸನ್ನಾಹದಲ್ಲಿದ್ದಾರೆ.

2023ಕ್ಕೆ ಸಂಭಾವ್ಯ ಅಭ್ಯರ್ಥಿಗಳು

1. ಬಸವರಾಜ ದಡೇಸೂಗೂರ/ ಗಾಯತ್ರಿ ತಿಮ್ಮಾರೆಡ್ಡಿ (ಬಿಜೆಪಿ)

2. ಶಿವರಾಜ ತಂಗಡಗಿ/ ಮುಕುಂದರಾವ್‌ ಭವಾನಿಮಠ (ಕಾಂಗ್ರೆಸ್)

3. ಅಶೋಕ ಉಮಲೂಟಿ (ಜೆಡಿಎಸ್)

ಚುನಾವಣಾ ಫಲಿತಾಂಶಗಳು

ಮತದಾರರ ವಿವರ

ಇದನ್ನೂ ಓದಿ | ಎಲೆಕ್ಷನ್‌ ಹವಾ | ಕೊಪ್ಪಳ | ಕರಡಿ ವರ್ಸಸ್ ಹಿಟ್ನಾಳ್ ಫೈಟ್‌ ನಡುವೆ ಮೂರನೆಯವರ ಎಂಟ್ರಿ ಆಗಬಹುದೇ?

Exit mobile version