Site icon Vistara News

ಎಲೆಕ್ಷನ್‌ ಹವಾ | ದಾವಣಗೆರೆ ದಕ್ಷಿಣ | 90ರ ಸೇನಾನಿ ಶಾಮನೂರು ಶಿವಶಂಕರಪ್ಪ ಕೋಟೆಯನ್ನು ಭೇದಿಸುವುದು ಸಾಧ್ಯವೇ?

Election Hawa Political Scenario in Davanagere south constituency

ಯಶವಂತ್‌, ದಾವಣಗೆರೆ
ಕರ್ನಾಟಕದ ಮ್ಯಾಂಚೆಸ್ಟರ್‌ ಎಂದೇ ಖ್ಯಾತಿಯಾಗಿದ್ದ ದಾವಣಗೆರೆ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರ, ದಾವಣಗೆರೆ ದಕ್ಷಿಣ. ಜಿಲ್ಲೆಯಲ್ಲಿ ಗಿರಣಿಗಳು ಉತ್ತುಂಗದಲ್ಲಿದ್ದಾಗ ಸತತವಾಗಿ ಕಮ್ಯುನಿಸ್ಟ್‌ ಶಾಸಕರು ಗೆದ್ದುಬಂದ ಉದಾಹರಣೆ 70-80ರ ದಶಕದಲ್ಲಿತ್ತು. ಕಾಲಕ್ರಮೇಣ ಹತ್ತಿ ಗಿರಣಿ, ಕಾರ್ಖಾನೆಗಳು ಮುಚ್ಚುತ್ತಿದ್ದಂತೆ ಹೋರಾಟದ ಧ್ವನಿಯೂ ಅಡಗಿ ಹೋಯಿತು. ಕಮ್ಯುನಿಸ್ಟ್ ಸಿದ್ಧಾಂತ ಸೋತು ಹೋಯಿತು. ಬಳಿಕ ಕಾಂಗ್ರೆಸ್‍-ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟು ಕಾಂಗ್ರೆಸ್‍ನಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಎಸ್‌.ಎಸ್‌. ಮಲ್ಲಿಕಾರ್ಜುನ್‌(ತಂದೆ-ಮಗನ) ಕ್ಷೇತ್ರವಾಗಿ ಮಾರ್ಪಟ್ಟಿತು. ಬಿಜೆಪಿಯಲ್ಲಿ ಒಂದೊಂದು ಚುನಾವಣೆಯಲ್ಲಿ ಒಬ್ಬೊಬ್ಬರು ಸ್ಪರ್ಧಿಸಿದರೂ ಕಾಂಗ್ರೆಸ್‍ ಭದ್ರಕೋಟೆ ಭೇದಿಸುವುದು.

ಶಾಮನೂರು ವರ್ಸಸ್‌ ಬಿಜೆಪಿ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವೆಂದರೆ ಶಾಮನೂರು ಶಿವಶಂಕರಪ್ಪ ಅವರ ಶಕ್ತಿ ಕೇಂದ್ರ. 1994ರಲ್ಲಿ ಮೊದಲಬಾರಿಗೆ ಪಕ್ಷೇತರವಾಗಿ ಸ್ಪರ್ಧಿಸಿದ್ದ ಶಾಮನೂರು ಶಿವಶಂಕರಪ್ಪ ಶಾಸಕರಾಗಿ ಆಯ್ಕೆಯಾದರು. ಅಂದಿನಿಂದ ಇಲ್ಲಿಯವರೆಗೂ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ. 1999ರಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್‍ ಕಾಂಗ್ರೆಸ್‍ ಪಕ್ಷದಿಂದ ಗೆಲುವು ಸಾಧಿಸಿದ್ದರು. ನಂತರ 2004, 2008, 2013, 2018 ಸತತವಾಗಿ ಡಾ.ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿ ಸೋಲಿಲ್ಲದ ಸರದಾರರಾಗಿದ್ದಾರೆ. ಬಿಜೆಪಿಯಿಂದ ಯಶವಂತರಾವ್‍ ಜಾಧವ್‍ ಮೂರು ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಒಟ್ಟಾರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಶಾಮನೂರು ಶಿವಶಂಕರಪ್ಪಗೆ ಪ್ರಬಲ ಪ್ರತಿಸ್ಪರ್ಧಿ ಇಲ್ಲ. ಈ ಬಾರಿಗೆ ಶಾಮನೂರು ಶಿವಶಂಕರಪ್ಪ ಅವರಿಗೆ 90ವರ್ಷ ಆಗಿರುವುದರಿಂದ ಏಜ್ ಫ್ಯಾಕ್ಟರ್ ಅಡ್ಡಿ ಬರಬಹುದು ಎನ್ನಲಾಗುತ್ತಿದೆ. ಆದರೂ ಟಿಕೆಟ್​ಗಾಗಿ ಕೆಪಿಸಿಸಿಗೆ ಅರ್ಜಿ ಹಾಕಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಜತೆ ಇನ್ನೂ ಇಬ್ಬರು ಅರ್ಜಿ ಹಾಕಿದ್ದರೂ, ಶಾಮನೂರು ಶಿವಶಂಕರಪ್ಪಗೆ ಟಿಕೆಟ್​ ಫೈನಲ್​ ಎಂಬಂತಿದೆ.

ಕುಟುಂಬ ರಾಜಕಾರಣ

ಡಾ. ಶಾಮನೂರು ಶಿವಶಂಕರಪ್ಪ 1994 ರಿಂದ ಇಲ್ಲಿಯವರೆಗೂ ಕ್ಷೇತ್ರವನ್ನು ಬೇರೆಯವರಿಗೆ ಬಿಟ್ಟುಕೊಟ್ಟಿಲ್ಲ. 1999ರಲ್ಲಿ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್‍ಗೆ ಬಿಟ್ಟುಕೊಟ್ಟಿದ್ದರು. ಬಳಿಕ ಅವರೇ ಸ್ಪರ್ಧಿಸುತ್ತಿದ್ದಾರೆ. ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಮತಗಳು ನಿರ್ಣಾಯಕವಾಗಿದ್ದು, ಮುಸ್ಲಿಮರಿಗೆ ಟಿಕೆಟ್ ಕೊಡಬೇಕೆಂಬ ಕೂಗು ದಶಕಗಳಿಂದ ಕೇಳಿ ಬರುತ್ತಿದ್ದರೂ ಅದು ಫಲಿಸಿಲ್ಲ. 2023 ರ ಚುನಾವಣೆಯಲ್ಲೂ ಸ್ಪರ್ಧಿಸಲು ಡಾ.ಶಾಮನೂರು ಶಿವಶಂಕರಪ್ಪ ಅರ್ಜಿ ಸಲ್ಲಿಸಿದ್ದಾರೆ. ಶಿವಶಂಕರಪ್ಪಗೆ ಪ್ರತಿಯಾಗಿ ಮುಸ್ಲಿಂ ಸಮುದಾಯದ ನಾಲ್ಕು ಮಂದಿ ಕೆಪಿಸಿಸಿಗೆ ಅರ್ಜಿ ಹಾಕಿದ್ದಾರೆ. ಮುಖಂಡ ಬಿ.ವೀರಣ್ಣ, ವಕೀಲ ಇಬ್ರಾಹಿಂ, ಸಾಧಿಕ್​ ಫೈಲ್ವಾನ್​, ಒಂಟಿ ಅಕ್ಬಲ್​, ಖಾಲಿದ್​ ಅರ್ಜಿ ಹಾಕಿದ್ದಾರೆ. ವಯಸ್ಸಿನ ಕಾರಣದಿಂದ ಶಾಮನೂರು ಶಿವಶಂಕರಪ್ಪ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಅವರ ಪುತ್ರ ಅಥವಾ ಸೊಸೆ ಸ್ಪರ್ಧಿಸುವ ಸಾಧ್ಯತೆ ಇದೆ. ಒಂದು ವೇಳೆ ಪುತ್ರ  ಎಸ್.ಎಸ್. ಮಲ್ಲಿಕಾರ್ಜುನ್ ದಕ್ಷಿಣದಿಂದ ಸ್ಪರ್ಧಿಸಿದರೆ, ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉತ್ತರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ದಾವಣಗೆರೆ ಉತ್ತರ-ದಕ್ಷಿಣ ಕ್ಷೇತ್ರವನ್ನು ಶಾಮನೂರು ಕುಟುಂಬ ಕೈಯಲ್ಲೇ ಇಟ್ಟುಕೊಂಡಿದೆ.

ಮುಸ್ಲಿಂ ಮತಗಳು ಹೆಚ್ಚಿರುವುದನ್ನು ಕಣ್ಣಮುಂದೆ ಇರಿಸಿಕೊಂಡು ಜೆಡಿಎಸ್‌ನಿಂದ ಮುಸ್ಲಿಂ ಅಭ್ಯರ್ಥಿಗೇ ಟಿಕೆಟ್‌ ಘೋಷಣೆ ಮಾಡಲಾಗಿದೆ. ತಂಜಿಮ್‌ ಉಲ್‌ ಮುಸ್ಲಿಮನ್‌ ಫಂಡ್‌ ಅಸೋಸಿಯೇಷನ್‌ ಕಾರ್ಯದರ್ಶಿಯಾಗಿದ್ದ ಜೆ. ಅಮಾನುಲ್ಲಾ ಖಾನ್‌ ಅವರಿಗೆ ಇತ್ತೀಚೆಗೆ ಟಿಕೆಟ್‌ ನೀಡಲಾಗುತ್ತಿದೆ.

2023 ದಕ್ಷಿಣ ಮುಖಾಮುಖಿ

ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‍ನ ಶಾಮನೂರು ಶಿವಶಂಕರಪ್ಪಗೆ ಪರ್ಯಾಯ ಯಾರೂ ಇಲ್ಲ. ಈ ಬಾರಿ ಶಾಮನೂರು ಶಿವಶಂಕರಪ್ಪ ಅವರು ಸ್ಪರ್ಧಿಸದೇ ಇದ್ದರೆ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್‍ ಅಥವಾ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ್‍ ಕಣಕ್ಕಿಳಿಯುತ್ತಾರೆ ಅನ್ನೋ ಮಾತು ಕಾಂಗ್ರೆಸ್​ನಲ್ಲಿ ಇನ್ನೂ ಪ್ರಚಲಿತದಲ್ಲಿದೆ. ದಾವಣಗೆರೆ ಉತ್ತರದಲ್ಲಿ ಲಿಂಗಾಯತ ಮತ್ತು ಹಿಂದುಳಿದವರ ಮತಗಳು ನಿರ್ಣಾಯಕವಾಗಿದ್ದು, ಒಂದು ವೇಳೆ ಶಿವಶಂಕರಪ್ಪ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೆ ಸೊಸೆ ಡಾ. ಪ್ರಭಾಗೆ ಪುತ್ರನ ಕ್ಷೇತ್ರ ಬಿಡಿಸಿಕೊಟ್ಟು, ಪುತ್ರ ಮಲ್ಲಿಕಾರ್ಜುನ್‍ ಅವರನ್ನು ದಕ್ಷಿಣದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ. ಕಾಂಗ್ರೆಸ್‍ ಹೈಕಮಾಂಡ್‍ ಮಧ್ಯ ಪ್ರವೇಶಿಸಿ ಆಶ್ಚರ್ಯವೆಂಬಂತೆ ಅಲ್ಪಸಂಖ್ಯಾತ ಮುಸ್ಲಿಮರಿಗೆ ದಕ್ಷಿಣದಲ್ಲಿ ಟಿಕೆಟ್ ನೀಡಿದರೆ ಶಾಮನೂರು ಕುಟುಂಬ ರಾಜಕಾರಣಕ್ಕೆ ಬ್ರೇಕ್‍ ಹಾಕಿದಂತೆ ಆಗುತ್ತದೆ. ಕಾಂಗ್ರೆಸ್‍ನಿಂದ ಶಿವಶಂಕರಪ್ಪ ಬದಲು ಯಾರೇ ಸ್ಪರ್ಧಿಸಿದ್ರೂ ಬಿಜೆಪಿಗೆ ಪ್ಲಸ್‌ ಆಗಲಿದೆ.

2023 ಸಂಭಾವ್ಯ ಸ್ಪರ್ಧಿಗಳು

ಚುನಾವಣಾ ಇತಿಹಾಸ

ಮತದಾರರ ವಿವರ

ಇದನ್ನೂ ಓದಿ | ಎಲೆಕ್ಷನ್‌ ಹವಾ | ಚನ್ನಗಿರಿ | ಜೆ.ಎಚ್‌. ಪಟೇಲರ ಕ್ಷೇತ್ರದಲ್ಲಿ ಪೈಪೋಟಿಗೆ ಮುಂದಿನ ಪೀಳಿಗೆ ಸಜ್ಜು

Exit mobile version