ಯಶವಂತ್, ದಾವಣಗೆರೆ
ದಾವಣಗೆರೆ ಜಿಲ್ಲೆಯಲ್ಲಿ ಹರಿಹರ ವಿಧಾನಸಭಾ ಕ್ಷೇತ್ರ ಮೊದಲಿನಿಂದಲೂ ರಾಜಕೀಯವಾಗಿ ತ್ರಿಕೋನ ಸ್ಪರ್ಧೆ ಇರುವ ಕ್ಷೇತ್ರ. ಇಲ್ಲಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳು ಪ್ರಬಲ. ಮಾಜಿ ಸಚಿವ ಎಚ್. ಶಿವಪ್ಪ ಅವರಿಂದ ಈ ಕ್ಷೇತ್ರದಲ್ಲಿ ಜೆಡಿಎಸ್ ಬೇರು ಬಿಟ್ಟಿದೆ. ಇಡೀ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ, ಪ್ರಬಲ ಅಭ್ಯರ್ಥಿ ಇರುವುದು ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ.
ಮಧ್ಯ ಕರ್ನಾಟಕದ ರಾಜಕೀಯ ಮುತ್ಸದಿ ಎಚ್.ಶಿವಪ್ಪ 1994ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಜಯಶೀಲರಾದರು. ಬಳಿಕ 1999ರಲ್ಲಿ ಎಚ್. ಶಿವಪ್ಪ ಜನತಾದಳ (ಯು) ಪಕ್ಷದಿಂದ ಸ್ಪರ್ಧಿಸಿ ದ್ವಿತೀಯ ಸ್ಥಾನದಲ್ಲಿದ್ದರು. 2004ರ ಚುನಾವಣೆ ವೇಳೆಗೆ ಜೆಡಿಎಸ್‌ಗೆ ಬಂದು ಹರಿಹರ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಭದ್ರ ಬುನಾದಿ ಹಾಕಿದರು. 2004 ಚುನಾವಣೆಯಲ್ಲಿ ಕಾಂಗ್ರೆಸ್ನ ಡಾ.ವೈ. ನಾಗಪ್ಪ ವಿರುದ್ಧ ಕೇವಲ 2,942 ಮತಗಳ ಅಂತರದಿಂದ ಸೋಲು ಕಂಡರು. 2008ರಲ್ಲಿ ಬಿಜೆಪಿಯ ಬಿ.ಪಿ.ಹರೀಶ್ ವಿರುದ್ಧ ಕೇವಲ 11,018 ಮತಗಳ ಅಂತರದಲ್ಲಿ ಪರಾಜಿತಗೊಂಡರು. ಆದರೆ, ನಿರಂತರವಾಗಿ ಮೂರು ಬಾರಿ ಸೋಲು ಕಂಡರೂ ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬಿದರು. ಅದರ ಫಲವಾಗಿ 2013ರಲ್ಲಿ ಹರಿಹರ ಕ್ಷೇತ್ರದಲ್ಲಿ ಎಚ್.ಶಿವಪ್ಪ ಅವರ ಪುತ್ರ ಎಚ್.ಎಸ್.ಶಿವಶಂಕರ್ ಜೆಡಿಎಸ್ನಿಂದ ಸ್ಪರ್ಧಿಸಿ 19 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸಿದರು. ಅದಕ್ಕೆ ತಂದೆಯ ಅಕಾಲಿಕ ಸಾವಿನ ಅಲೆಯೂ ಕಾರಣವಾಗಿತ್ತು. ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ನಡುವೆ ಪೈಪೋಟೆ ಇದ್ದೇ ಇದೆ.
ತ್ರಿಕೋನ ಸ್ಪರ್ಧೆ
ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಜೆಡಿಎಸ್ನಿಂದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಸ್ಪರ್ಧೆ ಖಚಿತವಾಗಿದ್ದು, ಸೋಮವಾರವಷ್ಟೇ ಘೋಷಣೆಯಾದ 93 ಅಭ್ಯರ್ಥಿಗಳ ಪಟ್ಟಿಯಲ್ಲೂ ಹೆಸರಿದೆ. ಹಾಲಿ ಶಾಸಕ ಕಾಂಗ್ರೆಸ್ನ ಎಸ್. ರಾಮಪ್ಪ ಕೂಡ ಕಾಂಗ್ರೆಸ್ನಿಂದ ಮತ್ತೊಮ್ಮೆ ಪ್ರಬಲ ಆಕಾಂಕ್ಷಿ. ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಎಸ್. ರಾಮಪ್ಪ, ಸಿದ್ದರಾಮಯ್ಯ ಬಂದರೆ ಕ್ಷೇತ್ರ ಬಿಟ್ಟು ಕೊಡುವೆ ಎಂದಿದ್ದಾರೆ. ಅದರೆ, ರಾಜಕೀಯ ನಿವೃತ್ತಿ ಘೋಷಿಸಿಲ್ಲ. ಹಾಗಾಗಿ ರಾಮಪ್ಪನ ಜತೆ ಎಂ.ನಾಗೇಂದ್ರಪ್ಪ, ಎಚ್.ಶ್ರೀನಿವಾಸ್, ವಿಟಿಯು ವಿಶ್ರಾಂತ ಕುಲಪತಿ ದೀಟೂರು ಮಹೇಶ್ವರಪ್ಪ ಪ್ರಮುಖವಾಗಿ ರೇಸ್‌ನಲ್ಲಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ಸಿಗುವುದು ಕಷ್ಟ ಎಂದು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಪೊಲೀಸ್ ಅಧಿಕಾರಿ ಕುಣಿಬೆಳಕೆರೆ ದೇವೇಂದ್ರಪ್ಪ ಕೂಡ ಪ್ರಬಲ ಆಕಾಂಕ್ಷಿ. ಬಿಜೆಪಿಯಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ್ ಪ್ರಬಲ ಆಕಾಂಕ್ಷಿ. ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಮುಖಂಡ ಚಂದ್ರಶೇಖರ್ ಪೂಜಾರ್ ಕೂಡ ರೇಸ್ ನಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಯಾರು ಅಭ್ಯರ್ಥಿ ಆಗುತ್ತಾರೆ ಎನ್ನುವುದರ ಆಧಾರದಲ್ಲಿ ಸ್ಪರ್ಧೆ ಏರ್ಪಡಲಿದೆ.
ಜಾತಿ ಲೆಕ್ಕಾಚಾರ
ಇಲ್ಲಿ ಪಂಚಮಸಾಲಿ ಹಾಗೂ ಹಿಂದುಳಿದ ಮತಗಳೇ ನಿರ್ಣಾಯಕ. ಜೆಡಿಎಸ್ ಅಭ್ಯರ್ಥಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರೆ ಏನು ಲಾಭ ಆಗತ್ತದೆ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ. ಕಳೆದ ಬಾರಿ ಕಾಂಗ್ರೆಸ್ ಕುರುಬ ಸಮುದಾಯಕ್ಕೆ ಟಿಕೆಟ್ ನೀಡಿ ಹಿಂದುಳಿದ ಮತಗಳನ್ನು ಬುಟ್ಟಿಗೆ ಹಾಕಿಕೊಂಡಿತ್ತು. ಆದರೆ, ಈ ಬಾರಿಗೂ ಅದೇ ಲೆಕ್ಕಾಚಾರ ವರ್ಕೌಟ್ ಆಗತ್ತದೆಯೇ ಎನ್ನುವುದು ಅನುಮಾನ. ಸದ್ಯ ಬಿಜೆಪಿಯಲ್ಲಿರುವ ಪ್ರಬಲ ಅಭ್ಯರ್ಥಿಗಳು ಕೂಡ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಾಗಿದ್ದು, ಕಾಂಗ್ರೆಸ್ ಜಾತಿ ಲೆಕ್ಕಾಚಾರ ಹಾಕುತ್ತಿದೆ.
2023ಕ್ಕೆ ಸಂಭಾವ್ಯ ಸ್ಪರ್ಧಿಗಳು
1. ಎಚ್.ಎಸ್. ಶಿವಶಂಕರ್ (ಜೆಡಿಎಸ್)
2. ಎಸ್. ರಾಮಪ್ಪ , ಎಂ.ನಾಗೇಂದ್ರಪ್ಪ, ಎಚ್.ಶ್ರೀನಿವಾಸ್, ದೀಟೂರು ಮಹೇಶ್ವರಪ್ಪ (ಕಾಂಗ್ರೆಸ್)
೩. ಬಿ.ಪಿ.ಹರೀಶ್, ಎಸ್.ಎಂ. ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರ್ (ಬಿಜೆಪಿ)
ಚುನಾವಣಾ ಇತಿಹಾಸ
ಮತದಾರರ ವಿವರ
ಇದನ್ನೂ ಓದಿ | ಎಲೆಕ್ಷನ್ ಹವಾ | ಹೊನ್ನಾಳಿ | ಸದಾ ಸುದ್ದಿಯಲ್ಲಿರುವ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಯಾರು?