ಯಶವಂತ್, ದಾವಣಗೆರೆ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರ ನೀರಾವರಿ ಸಂಪದ್ಬರಿತ ಕ್ಷೇತ್ರ. ಶಿವಮೊಗ್ಗ ಜಿಲ್ಲೆಯ ಜತೆ ಗಡಿ ಹಂಚಿಕೊಂಡಿರುವ ಹೊನ್ನಾಳಿ ತಾಲೂಕು ತುಂಗಭದ್ರಾ ನದಿಯ ತಟದಲ್ಲಿದೆ. ರಾಜಕೀಯವಾಗಿ ಶಕ್ತಿ ಕೇಂದ್ರವೂ, ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಂದ ಸದಾ ಸುದ್ದಿಯಲ್ಲಿರುವ ಕ್ಷೇತ್ರ.
ಇಲ್ಲಿ ಬಿಜೆಪಿ-ಕಾಂಗ್ರೆಸ್ ನೇರ ಹಣಾಹಣಿ. 2004, 2008 ರಲ್ಲಿ ಕ್ಷೇತ್ರದ ಜನ ಎರಡು ಬಾರಿ ಬಿಜೆಪಿಯ ಎಂ.ಪಿ.ರೇಣುಕಾಚಾರ್ಯ ಅವರನ್ನು ಆಯ್ಕೆ ಮಾಡಿಕೊಂಡರೆ 2013ರಲ್ಲಿ ಕಾಂಗ್ರೆಸ್ನ ಡಿ.ಜಿ. ಶಾಂತನಗೌಡ ಅವರನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಿದರು. ಪುನಃ 2018ರಲ್ಲಿ ಡಿ.ಜಿ. ಶಾಂತನಗೌಡ ಬದಲಿಗೆ ಎಂ.ಪಿ. ರೇಣುಕಾಚಾರ್ಯ ಅವರನ್ನು ಆಯ್ಕೆ ಮಾಡಿದರು. ವಿಧಾನಸಭಾ ಕ್ಷೇತ್ರದ ಜನ ಪ್ರಜ್ಞಾವಂತರಿದ್ದು, ಕ್ಷೇತ್ರಕ್ಕೆ ಯಾರ ಕೊಡುಗೆ ಏನು, ಯಾರು ಹಿತವರು ಎಂಬುದನ್ನು ಗಮನಿಸಿ, ಲೆಕ್ಕಾಚಾರ ಹಾಕಿ ಶಕ್ತಿ ಸೌಧಕ್ಕೆ ಕಳುಹಿಸುತ್ತಾರೆ.
ಬಿಜೆಪಿ-ಕಾಂಗ್ರೆಸ್ ಹಣಾಹಣಿ
ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲಿನಿಂದಲೂ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ. ಈ ಬಾರಿ ಬಿಜೆಪಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರೇ ಬಿಜೆಪಿಯ ಅಭ್ಯರ್ಥಿ. ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳ ಪಟ್ಟಿಯೇ ಇದ್ದು, ಟಿಕೆಟ್ ವಂಚಿತರು ಈಗಿನಿಂದಲೇ ಬಿ ಫಾರಂಗೆ ಪೈಪೋಟಿ ಮಾಡುತ್ತಿದ್ದಾರೆ. ಬಿಜೆಪಿ ವರ್ಸಸ್ ಕಾಂಗ್ರೆಸ್ ಹಣಾಹಣಿ ನಡುವೆ ಸದ್ಯದ ಮಟ್ಟಿಗೆ ಬಿಜೆಪಿ ಸ್ಟ್ರಾಂಗ್ ಇದೆ.
ಈಗಾಗಲೇ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾದ ರೇಣುಕಾಚಾರ್ಯ ಸಚಿವರಾಗಿ, ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಕ್ಷೇತ್ರದ ಜನತೆ ಜತೆ ಬೆರೆತಿದ್ದಾರೆ. ಕೋವಿಡ್‌ನಂತಹ ಸಂಕಷ್ಟ ಕಾಲದಲ್ಲಿ ಜನಾನುರಾಗಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಕೈಗೊಂಡ ಆರೋಗ್ಯ ಸೇವೆ ಚುನಾವಣಾ ವೇಳೆಯ ಅಸ್ತ್ರವಾಗಲಿದೆ. ಕಾಂಗ್ರೆಸ್ನ ಡಿ.ಜಿ. ಶಾಂತನಗೌಡ 1999 ಮತ್ತು 2013ರಲ್ಲಿ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಕ್ಷೇತ್ರದ ಜನ ಒಬ್ಬರಿಗೆ ಒಮ್ಮೆ ಎನ್ನುವಂತೆ ಅವಕಾಶ ಕೊಟ್ಟುಕೊಂಡು ಬಂದಿದ್ದರು.
2018ರ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ರೇಣುಕಾಚಾರ್ಯ ಗೆಲುವು ಸಾಧಿಸಿದರು. ಈ ಬಾರಿಯೂ ರೇಣುಕಾಚಾರ್ಯ ವರ್ಸಸ್ ಶಾಂತನಗೌಡ ನಡುವೆ ಪೈಪೋಟಿ ಏರ್ಪಟ್ಟರೆ ಚುನಾವಣಾ ಕದನ ರಂಗೇರಲಿದೆ. ಡಿ.ಜಿ. ಶಾಂತನಗೌಡರು ಈಗಾಗಲೇ ಅಖಾಡ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಕಾಂಗ್ರೆಸ್ನ ಟಿಕೆಟ್ ವಂಚಿತರ ಪಟ್ಟಿ ದೊಡ್ಡದಿದ್ದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಮುಖಂಡ ಬಿ.ಸಿದ್ದಪ್ಪ ರೇಸ್ನಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಎಚ್.ಬಿ. ಮಂಜಪ್ಪ ಬಂಡಾಯ ಸ್ಪರ್ಧೆಗೆ ಸಿದ್ಧರಾಗಿದ್ದರು. ಮುಖಂಡರು ಮನವೊಲಿಸಿ ಮುಂದಿನ ಚುನಾವಣೆಗೆ ಟಿಕೆಟ್ ಕೊಡುತ್ತೇವೆ ಎಂದಿದ್ದರು. ಈ ಬಾರಿ ಲೆಕ್ಕಾಚಾರ ಉಲ್ಟಾ ಆಗಿ, ಕಾಂಗ್ರೆಸ್ ಬಂಡಾಯವೆದ್ದರೆ ಬಿಜೆಪಿಗೆ ಲಾಭವಾಗಲಿದೆ. ಟಿಕೆಟ್ಗಾಗಿ ಜಿಲ್ಲಾಧ್ಯಕ್ಷ ಮಂಜಪ್ಪ ಸೇರಿದಂತೆ 5 ಮಂದಿ ಕೆಪಿಸಿಸಿಗೆ ಅರ್ಜಿ ಹಾಕಿದ್ದಾರೆ. ಇತ್ತ ಬಿಜೆಪಿಯಲ್ಲಿ ರೇಣುಕಾರ್ಚಾರ್ಯ ಬಿಟ್ಟರೆ ಅಷ್ಟು ಪ್ರಬಲ ಅಭ್ಯರ್ಥಿ ಯಾರೂ ಇಲ್ಲ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯೂ ಕಣಕ್ಕಿಳಿಯುವ ಸಾಧ್ಯತೆ ಇದೆ.
2023ರಲ್ಲಿ ಸಂಭಾವ್ಯರು
1. ಎಂ.ಪಿ. ರೇಣುಕಾಚಾರ್ಯ(ಬಿಜೆಪಿ)
2. ಡಿ.ಜಿ. ಶಾಂತನಗೌಡ, ಎಚ್.ಬಿ. ಮಂಜಪ್ಪ, ಬಿ. ಸಿದ್ದಪ್ಪ(ಕಾಂಗ್ರೆಸ್)
ಚುನಾವಣಾ ಇತಿಹಾಸ
ಮತದಾರರ ವಿವರ
ಇದನ್ನೂ ಓದಿ | ಎಲೆಕ್ಷನ್ ಹವಾ | ಜಗಳೂರು | ಬಿಜೆಪಿಯ ರಾಮಚಂದ್ರಪ್ಪ ವಿರುದ್ಧ ಜಗಳಕ್ಕೆ ಯಾರು ನಿಲ್ಲುತ್ತಾರೆ ಎನ್ನುವುದೇ ಅಸ್ಪಷ್ಟ