ಯಶವಂತ್, ದಾವಣಗೆರೆ
ದಾವಣಗೆರೆ ಜಿಲ್ಲೆಯ ಮಯಕೊಂಡ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ. 2008ಕ್ಕೂ ಮುಂಚೆ ಸಾಮಾನ್ಯ ಕ್ಷೇತ್ರವಾಗಿದ್ದ ಮಾಯಕೊಂಡ, ದಾವಣಗೆರೆ ಉತ್ತರ ಕ್ಷೇತ್ರ ಪ್ರತ್ಯೇಕಗೊಂಡ ಬಳಿಕ ಮೀಸಲು ಕ್ಷೇತ್ರವಾಯಿತು. ಅಂದಿನಿಂದ ಈ ಕ್ಷೇತ್ರದಲ್ಲಿ ಪ್ರತಿ ಚುನಾವಣೆಯಲ್ಲೂ ಆಕಾಂಕ್ಷಿತರ ಪಟ್ಟಿ ಹನುಮನ ಬಾಲದಂತಿರುತ್ತದೆ. ಪ್ರೊ.ಎನ್. ಲಿಂಗಣ್ಣ ಹಾಲಿ ಶಾಸಕ.
ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಲಿಂಗಣ್ಣ ಕಳೆದ ಚುನಾವಣೆಯಲ್ಲಿ ಅಚ್ಚರಿಯ ಗೆಲುವು ಸಾಧಿಸಿದ್ದರು. ಪ್ರೊ. ಲಿಂಗಣ್ಣ ಸೋಲುವುದು ಖಚಿತ ಎಂಬ ಲೆಕ್ಕಾಚಾರ ತಲೆಕೆಳಗೆ ಮಾಡಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಪ್ರೊ.ಲಿಂಗಣ್ಣ ಅವರದ್ದು ಪಕ್ಷ ನಿಷ್ಠೆ ಹಾಗೂ ಬಿಎಸ್ವೈ ಆಪ್ತ. ಅದೇ ಕಾರಣಕ್ಕಾಗಿ ಬಿ.ಎಸ್.ಯಡಿಯೂರಪ್ಪ 2018ರ ಚುನಾವಣೆ ವೇಳೆ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಕೇವಲ 15 ನಿಮಿಷ ಕಾಲ ಕಳೆದ ಪರಿಣಾಮ ಕೊನೆ ಕ್ಷಣದಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಚಿತ್ರಣವೇ ಬದಲಾಯಿತು. ಇಲ್ಲಿ, ಜಾತಿ, ಉಪ ಜಾತಿಗಳ ಲೆಕ್ಕಾಚಾರ ಜೋರಾಗಿದ್ದು, 2023ರ ಚುನಾವಣೆಗೆ ಬಿಜೆಪಿ-ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಪಟ್ಟಿ ದೊಡ್ಡದಿದೆ.
ಬಿಜೆಪಿ ಪ್ರಾಬಲ್ಯ
ಮಾಯಕೊಂಡ ವಿಧಾನಸಭಾ ಕ್ಷೇತ್ರ ಬಿಜೆಪಿ ಪ್ರಾಬಲ್ಯ ಹೊಂದಿರುವ ಕ್ಷೇತ್ರ. ಇಲ್ಲಿ ವೀರಶೈವ ಲಿಂಗಾಯತ ಮತಗಳು ನಿರ್ಣಾಯಕ ಹಂತದಲ್ಲಿವೆ. ಎಸ್.ಎ. ರವೀಂದ್ರನಾಥ್ 2004ರಲ್ಲಿ ಮಾಯಕೊಂಡ ಕ್ಷೇತ್ರದಲ್ಲೇ ಗೆಲುವು ಸಾಧಿಸಿದ್ದರು. 2008ರಲ್ಲಿ ಎಸ್.ಎ. ರವೀಂದ್ರನಾಥ್ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. 2008ರಿಂದ ಮೀಸಲು ಕ್ಷೇತ್ರವಾದ ಕಾರಣ ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ ಎಂ. ಬಸವರಾಜ ನಾಯ್ಕ್ ಆಯ್ಕೆಯಾದರು. 2013ರಲ್ಲಿ ಕ್ಷೇತ್ರ ಬಿಜೆಪಿ ಕೈತಪ್ಪಿತು. ಪುನಃ 2018ರಲ್ಲಿ ಕ್ಷೇತ್ರ ಪಡೆದುಕೊಂಡ ಬಿಜೆಪಿ ಈಗಲೂ ಪ್ರಬಲವಾಗಿದೆ.
ಬಿಜೆಪಿ ವರ್ಸಸ್ ಕಾಂಗ್ರೆಸ್
ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ನಡುವೆ ಫೈಟ್ ಇದೆ. ಹಾಲಿ ಶಾಸಕ ಪ್ರೊ.ಎನ್. ಲಿಂಗಣ್ಣ ಆರೋಗ್ಯ ಮತ್ತು ವಯಸ್ಸಿನ ಕಾರಣದಿಂದ ಸ್ಪರ್ಧಿಸುವುದು ಅನುಮಾನ ಎನ್ನಲಾಗುತ್ತಿದೆ. ಹಾಗಾಗಿ ಬಿಜೆಪಿಯಲ್ಲಿ ಮಾಜಿ ಶಾಸಕ ಬಸವರಾಜ ನಾಯ್ಕ್, ಯುವ ಮುಖಂಡ ಜಿ.ಎಸ್. ಶ್ಯಾಮ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆಲೂರು ನಿಂಗರಾಜು, ಹನುಮಂತ ನಾಯ್ಕ್, ಎಚ್.ಕೆ. ಬಸವರಾಜ್, ರಮೇಶ್ ನಾಯ್ಕ್ ಮತ್ತಿತರರ ಹೆಸರು ರೇಸ್‌ನಲ್ಲಿದೆ. ಕಾಂಗ್ರೆಸ್ನಲ್ಲಿ 2018ರ ಚುನಾವಣೆಯಲ್ಲಿ ಪೈಪೋಟಿ ನೀಡಿದ್ದ ಕೆ.ಎಸ್. ಬಸವಂತಪ್ಪ, ಮಾಜಿ ಸಚಿವ ಶಿವಮೂರ್ತಿ ನಾಯ್ಕ್ ಮತ್ತೊಂದು ಅವಕಾಶಕ್ಕೆ ಕಾಯುತ್ತಿದ್ದಾರೆ. ಡಿ.ಬಸವರಾಜ್, ಡಾ.ವೈ. ರಾಮಪ್ಪ, ಬಿ.ಎಚ್. ವೀರಭದ್ರಪ್ಪ, ಸವಿತಾ ಬಾಯಿ ಮಲ್ಲೇಶ್ ಕೂಡ ರೇಸ್ನಲ್ಲಿದ್ದಾರೆ. ಇಲ್ಲಿ ಯಾರಿಗೆ ಟಿಕೆಟ್ ಸಿಕ್ಕರೂ ಬಿಜೆಪಿ ವರ್ಸಸ್ ಕಾಂಗ್ರೆಸ್ ಫೈಟ್ ಆಗಲಿದೆ. ಜೆಡಿಎಸ್‌ನಿಂದ ಶೀಲಾ ನಾಯ್ಕ್ ಸ್ಪರ್ಧಿಸಬಹುದು.
2023ರ ಸಂಭಾವ್ಯ ಸ್ಪರ್ಧಿಗಳು
1. ಪ್ರೊ.ಎನ್. ಲಿಂಗಣ್ಣ ,ಬಸವರಾಜ ನಾಯ್ಕ್, ಜಿ.ಎಸ್. ಶ್ಯಾಮ್, ಆಲೂರು ನಿಂಗರಾಜು, ಹನುಮಂತ ನಾಯ್ಕ್, ಎಚ್.ಕೆ. ಬಸವರಾಜ್, ರಮೇಶ್ ನಾಯ್ಕ್ (ಬಿಜೆಪಿ)
೨. ಕೆ.ಎಸ್. ಬಸವಂತಪ್ಪ, ಶಿವಮೂರ್ತಿ ನಾಯ್ಕ್, ಡಿ.ಬಸವರಾಜ್, ಡಾ.ವೈ. ರಾಮಪ್ಪ, ಬಿ.ಎಚ್. ವೀರಭದ್ರಪ್ಪ, ಸವಿತಾ ಬಾಯಿ ಮಲ್ಲೇಶ್ (ಕಾಂಗ್ರೆಸ್)
೩. ಶೀಲಾ ನಾಯ್ಕ್ (ಜೆಡಿಎಸ್)
ಚುನಾವಣಾ ಇತಿಹಾಸ
ಮತದಾರರ ವಿವರ
ಇದನ್ನೂ ಓದಿ | ಎಲೆಕ್ಷನ್ ಹವಾ | ಹರಿಹರ | ಜೆಡಿಎಸ್ ಅಭ್ಯರ್ಥಿ ಘೋಷಣೆಯಾಗಿದೆ, ಕಾಂಗ್ರೆಸ್-ಬಿಜೆಪಿಯಲ್ಲಿ ಪೈಪೋಟಿಯಿದೆ