ಚಿಕ್ಕಮಗಳೂರು: ಇದೇ ಮೇ 10ರಂದು ವಿಧಾನಸಭಾ ಚುನಾವಣೆ (Karnataka Election 2023) ನಡೆಯಲಿರುವುದರಿಂದ ರಾಜ್ಯಾದ್ಯಂತ ನೀತಿಸಂಹಿತೆ ಜಾರಿಯಾಗಿದ್ದು, ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್ ಬಳಿ ವಾಹನ ತಪಾಸಣೆ ಮಾಡುವಾಗ ದಾಖಲೆ ಇಲ್ಲದ ಹಣ ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಹೀಗೆ ದಾಖಲೆ ಇಲ್ಲದ ಕೋಟ್ಯಂತರ ರೂಪಾಯಿಗಳನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಇಷ್ಟಾದರೂ ಅಕ್ರಮಗಳು ನಡೆಯುತ್ತಲೇ ಇವೆ. ಈ ಮಧ್ಯೆ ದೇವಸ್ಥಾನದ ಹುಂಡಿಗೆ ಹಾಕಲು ಎಂದು ತೆಗೆದುಕೊಂಡು ಹೊರಟಿದ್ದ ವೈದ್ಯರೊಬ್ಬರ ಹಣವು ಪೊಲೀಸರ ಹುಂಡಿ ಸೇರುವಂತಾಗಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಹಣ ಪತ್ತೆಯಾಗಿದೆ. ಧರ್ಮಸ್ಥಳ-ಕಟೀಲ್ ದೇವಸ್ಥಾನದ ಹುಂಡಿಗೆ ಹಾಕಲು ತಂದಿದ್ದ 2.50 ಲಕ್ಷ ರೂಪಾಯಿಯು ಈಗ ಪೊಲೀಸರ ವಶದಲ್ಲಿದೆ. ಪಾವಗಡ ಮೂಲದ ವೈದ್ಯಾಧಿಕಾರಿಯೊಬ್ಬರು ದೇವರ ಹುಂಡಿಗಾಗಿ ಪ್ರತಿದಿನ ಸಂಗ್ರಹಿಸಿ ಇಡುತ್ತಿದ್ದ ಹಣವನ್ನು ತಮ್ಮ ಫಾರ್ಚುನರ್ ಕಾರಿನಲ್ಲಿ ಕೊಂಡೊಯ್ಯುತ್ತಿದ್ದರು.
ಇದನ್ನೂ ಓದಿ: Suicide Case: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 21ರ ಮಹಿಳೆ; ಕೌಟುಂಬಿಕ ಕಲಹ ಶಂಕೆ
ಈ ಹಣವನ್ನು ಧರ್ಮಸ್ಥಳ ಮತ್ತು ಕಟೀಲು ದೇವಸ್ಥಾನಕ್ಕೆ ತೆರಳಿ ದೇವರ ಹುಂಡಿಗೆ ಸಮರ್ಪಣೆ ಮಾಡುವವರಿದ್ದರು. ಆದರೆ, ಈ ವೇಳೆ ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಕಾರನ್ನು ತಡೆದಿದ್ದಾರೆ. ತಪಾಸಣೆ ನಡೆಸಿದಾಗ 2.50 ಲಕ್ಷ ರೂಪಾಯಿ ಇರುವುದು ಪತ್ತೆಯಾಗಿದೆ. ಇದಕ್ಕೆ ದಾಖಲೆಯನ್ನು ಪೊಲೀಸರು ಕೇಳಿದಾಗ, ಇದು ದೇವರಿಗೆ ಹಾಕಲೆಂದು ಎತ್ತಿಟ್ಟಿರುವ ಹಣವಾಗಿದ್ದು, ಇದಕ್ಕೆ ದಾಖಲೆ ಇಲ್ಲ ಎಂದು ಅವರು ಹೇಳಿದ್ದಾರೆ. ಹೀಗಾಗಿ ಸಂಪೂರ್ಣ ಹಣವನ್ನು ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Siddaramaiah: ಕೋಲಾರದಿಂದಲೂ ಸಿದ್ದರಾಮಯ್ಯ ಸ್ಪರ್ಧೆ: ರಾಹುಲ್ ಗಾಂಧಿಯಿಂದಲೇ ಘೋಷಣೆಗೆ ಮುಹೂರ್ತ?
ದಾಖಲೆ ಇಲ್ಲದೆ 50 ಸಾವಿರ ರೂಪಾಯಿವರೆಗೆ ಮಾತ್ರ ಹಣ ಸಾಗಾಟಕ್ಕೆ ಅವಕಾಶ ಇದೆ. ಆದರೆ, ಇವರ ಬಳಿ 2.50 ಲಕ್ಷ ರೂಪಾಯಿ ಇರುವುದರಿಂದ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಕಲಬುರಗಿಯಲ್ಲಿ 1 ಕೋಟಿ ರೂಪಾಯಿ ಜಪ್ತಿ
ಕಲಬುರಗಿ: ತಾಲೂಕಿನ ಅಫಜಲಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪರತಾಬಾದ್ ಚೆಕ್‌ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಾಟ ಮಾಡಲಾಗುತ್ತಿದ್ದ 1 ಕೋಟಿ ರೂಪಾಯಿ ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರದ ನಿವಾಸಿ ರವಿ ಮುಡಬೂಳ ಎಂಬುವವರು ಯಾವುದೇ ದಾಖಲೆ ಇಲ್ಲದೆ ಕಾರಿನಲ್ಲಿ ಹಣ ಕೊಂಡ್ಯೊಯುತ್ತಿದ್ದರು. ಸದ್ಯ ಒಂದು ಕೋಟಿ ರೂಪಾಯಿ ಜತೆಗೆ ರವಿ ಅವರನ್ನೂ ಚುನಾವಣಾಧಿಕಾರಿಗಳು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Siddaramaiah: ಕೋಲಾರದಿಂದಲೂ ಸಿದ್ದರಾಮಯ್ಯ ಸ್ಪರ್ಧೆ: ರಾಹುಲ್ ಗಾಂಧಿಯಿಂದಲೇ ಘೋಷಣೆಗೆ ಮುಹೂರ್ತ?
ಇಷ್ಟು ಮೊತ್ತದ ಹಣವನ್ನು ಎಲ್ಲಿಂದ, ಎಲ್ಲಿಗೆ ಸಾಗಾಟ ಮಾಡಲಾಗುತ್ತಿದೆ. ಯಾವ ಉದ್ದೇಶಕ್ಕಾಗಿ ಸಾಗಿಸಲಾಗುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಪರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.