ಹೊಸನಗರ: “ಸಾಗರದಲ್ಲಿ ಶಾಸಕ ಎಚ್. ಹರತಾಳು ಹಾಲಪ್ಪ (MLA Halappa) ಅವರ ಕಾರ‍್ಯ ವೈಖರಿಯು ಬಿಜೆಪಿ (BJP) ತತ್ತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಇದರಿಂದಾಗಿ ಪಕ್ಷದ ಕಾರ‍್ಯಕರ್ತರು ಎಂದು ಹೇಳಿಕೊಳ್ಳಲು ಕಾರ‍್ಯಕರ್ತರಿಗೆ ಮುಜುಗರವಾಗುತ್ತಿದೆ” ಎಂದು ಬಿಜೆಪಿ ಕಾರ್ಯಕರ್ತ ಆವಿನಹಳ್ಳಿ ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಆಲಗೇರಿಮಂಡ್ರಿಯ ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಗುರುವಾರ (ಮಾ.23) ಬಿಜೆಪಿಯ ಕೆಲ ಕಾರ್ಯಕರ್ತರು ಏರ್ಪಡಿಸಿದ್ದ ಶಾಸಕರಿಂದ ನೊಂದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, “ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಅದು ಪಕ್ಷಕ್ಕೆ ಹಾಗೂ ಪಕ್ಷದ ಪ್ರತಿಯೊಬ್ಬ ಕಾರ‍್ಯಕರ್ತನಿಗೆ ಹೆಮ್ಮೆಯ ವಿಷಯ. ಆದರೆ ಸಾಗರ ಕ್ಷೇತ್ರದಲ್ಲಿ ಶಾಸಕ ಹಾಲಪ್ಪ ಅವರ ಕಾರ‍್ಯವೈಖರಿ ಪಕ್ಷದ ಸಾಮಾನ್ಯ ಕಾರ‍್ಯಕರ್ತರಿಗೆ ಭ್ರಮನಿರಸನ ಉಂಟು ಮಾಡಿದೆ. ಪಕ್ಷದ ಎಲ್ಲ ಸಿದ್ಧಾಂತಗಳನ್ನು ಅವರು ಗಾಳಿಗೆ ತೂರಿ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಬಿಜೆಪಿಗೆ ತನ್ನದೇ ಆದ ಸಿದ್ಧಾಂತವಿದೆ. ಅಲ್ಲಿ ಪಕ್ಷವೇ ಎಲ್ಲಕ್ಕಿಂತ ಹಿರಿದು, ವ್ಯಕ್ತಿ ಮುಖ್ಯವಲ್ಲ. ಸಾಗರ ಕ್ಷೇತ್ರದಲ್ಲಿ ಬಿಜೆಪಿಯಲ್ಲಿಯೇ ಎರಡು ಬಣಗಳಾಗಿವೆ. ಪಕ್ಷದ ಸಿದ್ಧಾಂತ, ಹಿಂದುತ್ವಕ್ಕೆ ಬದ್ಧರಾಗಿರುವವರಿಗೆ ಶಾಸಕರಿಂದ ಯಾವುದೇ ಮಾನ್ಯತೆ ಇಲ್ಲ. ಬದಲಾಗಿ, ಅವರನ್ನು ಅತ್ಯಂತ ಕೀಳಾಗಿ ಕಾಣಲಾಗುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
ಇದನ್ನೂ ಓದಿ: Covid-19 : ಹೊಸ ಕೋವಿಡ್ ತಳಿಯ ತೀವ್ರತೆಗೆ ಯಾವುದೇ ಪುರಾವೆ ಇಲ್ಲ ಎಂದ ತಜ್ಞರು
“ದೇಶ, ರಾಜ್ಯದೆಲ್ಲೆಡೆ ನಿರಂತರವಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಹಾಗಾಗಿ ಸಾಗರ ಕ್ಷೇತ್ರದಲ್ಲಿ ನಡೆದಿರುವ ರಸ್ತೆ ಕಾಮಗಾರಿಗಳು ಏನೂ ವಿಶೇಷತೆಯಿಂದ ಕೂಡಿಲ್ಲ. ಸಿಗಂದೂರು ಸೇತುವೆ ಕಾಮಗಾರಿಯಲ್ಲಿ ಶಾಸಕರ ಪಾತ್ರವೇನೂ ಇಲ್ಲ. ಪಟಗುಪ್ಪ ಸೇತುವೆಯೊಂದೇ ಇವರ ಸಾಧನೆ. ಶಾಸಕ ಹಾಲಪ್ಪ ಅವರ ಕಾರ‍್ಯ ವೈಖರಿಯನ್ನು ಟೀಕಿಸಿದಲ್ಲಿ ಅವರನ್ನು ತಡೆಯಲು ಆಡಳಿತ ಯಂತ್ರದ ದುರುಪಯೋಗ ಆಗುತ್ತಿದೆ” ಎಂದು ವಿಷಾದಿಸಿದರು.
ಇದನ್ನೂ ಓದಿ: ಮಕ್ಕಳ ಕಥೆ: ಶಿಷ್ಯ ಕಲಿತ ಪಾಠ- ಭಾಗ 2
ಪ್ರಶಾಂತ್ ಆವಿನಹಳ್ಳಿ ಮಾತನಾಡಿ, “ಹಿಂದೆ ಅಭಿವೃದ್ಧಿಯ ಹಿತದೃಷ್ಟಿಯಿಂದ ಹಾಲಪ್ಪ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಹಗಲಿರುಳು ಶ್ರಮಿಸಿದ್ದೇವೆ. ಆದರೆ, ಶಾಸಕರಾದ ಬಳಿಕ ಪಕ್ಷದ ಸಿದ್ಧಾಂತ ಉಳಿಸಲು ಅವರು ವಿಫಲರಾಗಿದ್ದಾರೆ. ಹಿಂದುಪರ ಸಂಘಟನೆಗಳನ್ನು ಅವರು ಕಡೆಗಣಿಸಿದ್ದಾರೆ. ಜಾತಿ ಹಾಗೂ ಹಣ ಬಲದಿಂದ ರಾಜಕಾರಣ ನಡೆಸುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದವರು, ನಿಸ್ವಾರ್ಥ ಸೇವೆ ಸಲ್ಲಿಸಿದವರು ಇಂದು ಮನೆಯಲ್ಲಿ ಉಳಿಯುವಂತಾಗಿದೆ. ಸಾಗರ ಕ್ಷೇತ್ರಕ್ಕೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಹಾಗೂ ಬಿಜೆಪಿಯ ತತ್ತ್ವ ಸಿದ್ಧಾಂತಗಳಿಗೆ ಬದ್ಧರಾಗಿರುವವರು ಅಭ್ಯರ್ಥಿಯಾಗಬೇಕು. ಕಮ್ಯುನಿಸ್ಟ್ ಮನಸ್ಥಿತಿ ಇಟ್ಟುಕೊಂಡವರು ಬಿಜೆಪಿಯಲ್ಲಿ ಇರುವ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಈ ಬಾರಿ ಬದಲಾವಣೆ ಅಗತ್ಯವಿದೆ. ಪಕ್ಷದ ವರಿಷ್ಠರು ಈ ಬಗ್ಗೆ ಗಮನ ಹರಿಸುವ ವಿಶ್ವಾಸವಿದೆ” ಎಂದರು.
ಇದನ್ನೂ ಓದಿ: Pushpa 2 Movie : ಪುಷ್ಪ 2 ಸಿನಿಮಾದಲ್ಲಿ ಸಲ್ಮಾನ್, ಶಾರುಖ್ ಖಾನ್ ನಟನೆ?