Site icon Vistara News

Electric Shock: ದಾವಣಗೆರೆ ಬಳಿ ವಿದ್ಯುತ್ ತಗುಲಿ ದಂಪತಿ ದುರ್ಮರಣ

Electric Shock

ದಾವಣಗೆರೆ: ವಿದ್ಯುತ್ ತಗುಲಿ ದಂಪತಿ ದುರ್ಮರಣ ಹೊಂದಿರುವ ಘಟನೆ (Electric Shock) ತಾಲೂಕಿನ ಕಾಟೀಹಳ್ಳಿಯಲ್ಲಿ ಗುರುವಾರ ನಡೆದಿದೆ. ಜಮೀನಿಗೆ ಕೆಲಸಕ್ಕೆ ಹೋದಾಗ ವಿದ್ಯುತ್ ಗ್ರೌಂಡ್‌ ಆಗಿದ್ದರಿಂದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾಟೀಹಳ್ಳಿ ಗ್ರಾಮದ ನಾಗರಾಜ್ (37), ಲತಾ (31) ಮೃತ ದುರ್ದೈವಿಗಳು. ಮಧ್ಯಾಹ್ನ 3ಗಂಟೆ ಸುಮಾರಿಗೆ ಘಟನೆ ನಡೆದಿದೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವಘಡದಿಂದ ಅವರು ಅನಾಥರಾಗಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Wildlife: ಹುಟ್ಟಿದ ತಕ್ಷಣ ತಾಯಿಯನ್ನೇ ಕೊಂದು ತಿನ್ನುವ ಜೀವಿ ಇದು!

ಕರೆಂಟ್‌ ಶಾಕ್‌ನಿಂದ ಎಂಜಿನಿಯರ್‌ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಆನೇಕಲ್‌: ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ಶಾಕ್‌ನಿಂದ (Electric shock) ಯುವ ಎಂಜಿನಿಯರ್ ಮೃತಪಟ್ಟಿದ್ದಾರೆ. ಯಸ್ಕಾವ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಘಟನೆ ನಡೆದಿದೆ. ಬೆಂಗಳೂರಿನ ನಿವಾಸಿ ಎಂಜಿನಿಯರ್ ಕೌಶಿಕ್ (27) ಮೃತ ದುರ್ದೈವಿ.

ಪ್ಯಾನಲ್ ಬೋರ್ಡ್ ತಯಾರು ಮಾಡಬೇಕಾದರೆ ಕೌಶಿಕ್‌ಗೆ ವಿದ್ಯುತ್ ತಗುಲಿದೆ. ಕೂಡಲೇ ಅಸ್ವಸ್ಥಗೊಂಡಿದ್ದ ಅವರನ್ನು ನಾರಾಯಣ ಹೆಲ್ತ್ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡಬೇಕಾದರೆ ಯಾವುದೇ ಸುರಕ್ಷತೆ ಇಲ್ಲದಿರುವುದೇ ಈ ದುರ್ಘಟನೆ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಮೂರು ತಿಂಗಳಿಂದ ವರ್ಕ್ ಪ್ರೆಷರ್ ಜಾಸ್ತಿ ಇತ್ತು. ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹೋದರೆ ರಾತ್ರಿ 12ಕ್ಕೆ ವಾಪಸ್‌ ಆಗುತ್ತಿದ್ದರು. ವರ್ಕ್ ಲೋಡ್ ಜಾಸ್ತಿ ಇದ್ದು, ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದ. ನಿನ್ನೆ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹೋದ ಮಗ ಈಗ ಹೆಣವಾಗಿದ್ದಾನೆ. ರಾತ್ರಿ 10 ಗಂಟೆಗೆ ಫೋನ್ ಮಾಡಿದಾಗ ತಡವಾಗುತ್ತೆ ಬರುತ್ತೇನೆ ಎಂದಿದ್ದ. 11:30 ರ ಸುಮಾರಿಗೆ ಸಂಬಂಧಿಕರು ಆಸ್ಪತ್ರೆ ಬಳಿ ಕರೆ ತಂದರು. ನನಗೆ ನನ್ನ ಮಗ ಬೇಕು, ವಾಪಸ್ ತಂದು ಕೊಡಿ ಎಂದು ತಾಯಿ ಸುಜಾತಾ ಮಗನ ನೆನೆದು ಕಣ್ಣೀರು ಹಾಕಿದರು.

ಇದನ್ನೂ ಓದಿ: Physical Abuse : ಭೀಮಾ ಸಿನಿಮಾ ನೋಡಲು ಬಂದು ಲೇಡಿಸ್‌ ವಾಶ್‌ ರೂಂನಲ್ಲಿ ಮೊಬೈಲ್ ಇಟ್ಟ ಅಪ್ರಾಪ್ತ!

ದಾವಣಗೆರೆಯಲ್ಲಿ ಅನುಮಾನನಾಸ್ಪಾದ ರೀತಿಯಲ್ಲಿ ಮಹಿಳೆ ಸಾವು

ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ಇದೆ. ಸುಮಲತಾ (30) ಮೃತ ದುರ್ದೈವಿ. ದಾವಣಗೆರೆ ನಗರದ ವಿವೇಕಾನಂದ ಬಡಾವಣೆಯ ಮನೆಯಲ್ಲಿ ಘಟನೆ ನಡೆದಿದೆ. ಪತಿ ಶಿವಮೂರ್ತಿ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ. ಸುಮಲತಾಳನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಮೃತ ಸಂಬಂಧಿಕರು ಆರೋಪಿಸಿದ್ದಾರೆ. ಇತ್ತ ಪತಿ ಶಿವಮೂರ್ತಿ ಅನಾರೋಗ್ಯದ ಕಾರಣ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದು, ಶಿವಮೂರ್ತಿ ಕುಟುಂಬ ಸದಸ್ಯರು ನಾಪತ್ತೆಯಾಗಿದ್ದಾರೆ.

ಕಳೆದ ಹನ್ನೆರಡು ವರ್ಷಗಳ ಹಿಂದೆ ಸುಮಲತಾ ಹಾಗೂ ಶಿವಮೂರ್ತಿ ಮದುವೆ ಆಗಿದ್ದರು. ಶಿವಮೂರ್ತಿ ಮೊದಲ ಪತ್ನಿ ನಿಧನದ ನಂತರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮೂಲದ ಸುಮಲತಾಳ ಅನ್ನು ಮದುವೆ ಆಗಿದ್ದ. ಮೊದಲ ಪತ್ನಿಯ ಮೂವರು ಮಕ್ಕಳು, ಸುಮಲತಾ ಹಾಗೂ ಪತಿ ಶಿವಮೂರ್ತಿ ಒಂದೇ ಮನೆಯಲ್ಲಿ ವಾಸವಿದ್ದರು. ಮಕ್ಕಳು ದೊಡ್ಡವರಾದ ಬಳಿಕ ಶಿವಮೂರ್ತಿ ಪತ್ನಿ ಸುಮಲತಾಳಿಗೆ ಕಿರುಕುಳ‌ ನೀಡಲು ಶುರು ಮಾಡಿದ್ದ ಎನ್ನಲಾಗಿದೆ. ಸದ್ಯ ಆತ ಬರುವ ತನಕ ಶವ ತೆಗೆದುಕೊಂಡು ಹೋಗಲ್ಲ ಎಂದು ಸುಮಲತಾಳ ಸಂಬಂಧಿಕರು ಪಟ್ಟು ಹಿಡಿದಿದ್ದರು. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version