ಬೆಂಗಳೂರು: ಇಲ್ಲಿನ ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರದಲ್ಲಿ ಟ್ರಾನ್ಸ್‌ಫಾರ್ಮರ್ ದುರಸ್ತಿ ಮಾಡಲು ಹೋದ ಬೆಸ್ಕಾಂ ಲೈನ್‌ಮ್ಯಾನ್‌ಗೆ ವಿದ್ಯುತ್ ಪ್ರವಹಿಸಿ (Electric Shock) ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಸುಂಕದಕಟ್ಟೆ ನಿವಾಸಿ ಗೌತಮ್ (26) ಮೃತ ದುರ್ದೈವಿ.
ಗೋಪಾಲಪುರ ಪೊಲೀಸ್ ಚೌಕಿ ಹತ್ತಿರ ಇರುವ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಸಾರ್ವಜನಿಕರು ಬೆಸ್ಕಾಂ ಕಚೇರಿಗೆ ಫೋನ್ ಮೂಲಕ ದೂರು ನೀಡಿದ್ದರು. ದೂರಿನ್ವಯ ರಾತ್ರಿ ಪಾಳಿಯಲ್ಲಿದ್ದ ಗೌತಮ್ ಮತ್ತು ಸಿದ್ದಾಮರ ಎಂಬುವವರು ಸೋಮವಾರ ಬೆಳಗ್ಗೆ 9.05ರ ಸುಮಾರಿಗೆ ಸ್ಥಳಕ್ಕೆ ಹೋಗಿದ್ದಾರೆ.
ಗೌತಮ್ ಟ್ರಾನ್ಸ್‌ಫಾರ್ಮರ್ ಕಂಬವನ್ನು ಹತ್ತಿ ಕೆಲಸ ಮಾಡುತಿದ್ದ ವೇಳೆ ಒಂದು ತಂತಿಯ ವಿದ್ಯುತ್ ಅನ್ನು ಮಾತ್ರ ಆಫ್ ಮಾಡಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಮತ್ತೊಂದು ಟ್ರಾನ್ಸ್‌ಫಾರ್ಮರ್‌ನ ಮತ್ತೊಂದು ಕಡೆಯ ವಿದ್ಯುತ್ ವೈರ್‌ಗೆ ಗೌತಮ್ ಅವರ ಕೈ ತಾಗಿದೆ. ಹೀಗಾಗಿ ಅವರಿಗೆ ಕರೆಂಟ್ ಶಾಕ್ ಹೊಡೆದಿದ್ದು, ಗೌತಮ್ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಜತೆಗೆ ಇದ್ದ ಸಿಬ್ಬಂದಿ ಗೌತಮ್ ಅವರನ್ನು ಸಮೀಪದ ಸುಗುಣ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಗೆ ತಡ
ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಿದ್ದು, ಇತ್ತ ಮರಣೋತ್ತರ ಪರೀಕ್ಷೆ ತಡ ಮಾಡಿದ್ದಕ್ಕೆ ಕುಟುಂಬ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಮೃತದೇಹವನ್ನು ಗೇಟ್ ಬಳಿಯೇ ನಿಲ್ಲಿಸಿದ್ದಕ್ಕೆ ಕಿಡಿಕಾರಿದರು.
ಠಾಣಾ ಮೆಟ್ಟಿಲೇರಿದ ಗೌತಮ್ ತಂದೆ
ಗೌತಮ್ ತಂದೆ ರಂಗಸ್ವಾಮಿ ನೀಡಿದ ದೂರಿನ್ವಯ ಮಾಗಡಿರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಧಿಕಾರಿಗಳೇ ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಕೆಇಬಿ ಇಂಜಿನಿಯರ್ ಹಾಗೂ ಎಇ ವಿರುದ್ಧ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Republic Day 2023: ಗಣರಾಜ್ಯೋತ್ಸವದಂದು ಕರ್ತವ್ಯ ಪಥದಲ್ಲಿ ಭಾರತೀಯ ನೌಕಾದಳ ಮುನ್ನಡೆಸಲಿರುವ ಮಂಗಳೂರಿನ ಕುವರಿ
ಮದುವೆ ತಯಾರಿಯಲ್ಲಿದ್ದ ಗೌತಮ್ ಕುಟುಂಬ
ಸುಂಕದಕಟ್ಟೆ ನಿವಾಸಿ ಆಗಿರುವ ಗೌತಮ್ ಅಂಜನಾ ಚಿತ್ರಮಂದಿರ ಹತ್ತಿರ ಇರುವ ಬೆಸ್ಕಾಂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಗೌತಮ್‌ಗೆ ಹುಡುಗಿ ಗೊತ್ತು ಮಾಡಿದ ಕುಟುಂಬಸ್ಥರು ನಿಶ್ಚಿತಾರ್ಥದ ತಯಾರಿಯಲ್ಲಿ ಇದ್ದರು. ನೂರಾರು ಕನಸು ಕಂಡಿದ್ದ ಗೌತಮ್ ದುರಂತವೊಂದರಲ್ಲಿ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.