ಬೆಳಗಾವಿ: ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದ ಜಮೀನಿನಲ್ಲಿ ಕ್ರಿಮಿನಾಶಕ ಸಿಂಪಡಣೆ ವೇಳೆ ವಿದ್ಯುತ್ ತಂತಿ ತಗುಲಿ (Electric shock) ದಂಪತಿ ದಾರುಣವಾಗಿ ಮೃತಪಟ್ಟಿದ್ದಾರೆ. ಅಮಿತ್ ದೇಸಾಯಿ (32), ಲತಾ ದೇಸಾಯಿ(26) ಮೃತ ದುರ್ದೈವಿಗಳು.
ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ದಂಪತಿ ಮೃತಪಟ್ಟಿದ್ದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಮರದಲ್ಲೇ ಸುಟ್ಟುಕರಕಲು
ಇತ್ತ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹುಯಿಲುಮನೆ ಗ್ರಾಮದಲ್ಲಿ ಮರದ ಕೊಂಬೆ ಕಡಿಯುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಮೃತಪಟ್ಟಿದ್ದಾನೆ. ಲೋಕಪ್ಪ ಗೌಡ (56) ಮೃತರು. ವಿದ್ಯುತ್ ತಂತಿಗೆ ಮರದ ಕೊಂಬೆಗಳು ತಗಲುವುದನ್ನು ತಡಿಯಲು ಹೋಗಿ ಈ ಅವಘಡ ಸಂಭವಿಸಿದೆ. ಮರದಲ್ಲಿ ಲೋಕಪ್ಪ ಗೌಡ ಮೃತದೇಹವು ನೇತಾಡುತ್ತಿದ್ದು, ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈಜಲು ಹೋದವನು ನೀರು ಪಾಲು
ಕಾವೇರಿ ನದಿಯಲ್ಲಿ ಮುಳುಗಿ ಯುವಕನೊಬ್ಬ ಜೀವ ಬಿಟ್ಟಿದ್ದಾನೆ. ಮಂಡ್ಯದ ಶ್ರೀರಂಗಪಟ್ಟಣದ ಬಲಮುರಿಯಲ್ಲಿ ಕೆಜಿಎಫ್ ಮೂಲದ ಯಶವಂತ್ (27) ಮೃತ ದುರ್ದೈವಿ. ನಾಲ್ವರು ಸ್ನೇಹಿತರ ಜತೆ ಪ್ರವಾಸಕ್ಕೆ ಬಂದಿದ್ದರು. ಬಲಮುರಿಯಲ್ಲಿ ಈಜಲು ಹೋಗಿ ನೀರುಪಾಲಾಗಿದ್ದಾನೆ. ಯಶವಂತ್ ತಂದೆ ಕೆಜಿಎಫ್ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಕೆಆರ್‌ಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ