Site icon Vistara News

Electric shock : ಬೆಕ್ಕು ರಕ್ಷಿಸಲು ಮರವೇರಿದ ಯುವಕನಿಗೆ ಕರೆಂಟ್‌ ಶಾಕ್‌!

Electric shock Roshan

ದೊಡ್ಡಬಳ್ಳಾಪುರ: ಇಲ್ಲಿನ ಹಾಲಿನ ಡೈರಿ ಬಳಿ ಕರೆಂಟ್‌ ಶಾಕ್‌ಗೆ (Electric shock) ಯುವಕನೊರ್ವ ಮೃತಪಟ್ಟಿದ್ದಾನೆ. ರೋಷನ್ (25) ಮೃತ ದುರ್ದೈವಿ.

ಡೈರಿ ಮುಂಭಾಗವೇ ಕಾರ್‌ ಗ್ಯಾರೇಜ್‌ನಲ್ಲಿ ರೋಷನ್‌ ಕೆಲಸ ಮಾಡುತ್ತಿದ್ದ. ಕೆಲಸ ಮಾಡುವಾಗ ಮರದಲ್ಲಿ ಬೆಕ್ಕೊಂದು ಸಿಲುಕಿ ನರಳಾಡುತಿತ್ತು. ಬೆಕ್ಕಿನ ಚಿರಾಟ ಕೇಳಿದ ರೋಷನ್‌ಗೆ ಕರುಳು ಚುರುಕ್‌ ಎಂದಿತ್ತು.

ಇದನ್ನೂ ಓದಿ: ಪೊಲೀಸ್‌ರಿಂದ ತಪ್ಪಿಸಿಕೊಳ್ಳಲು ಹೋಗಿ ಕೈ-ಕಾಲು ಮುರಿದುಕೊಂಡ ಬಿಜೆಪಿ ಕಾರ್ಯಕರ್ತ!

ಬೆಕ್ಕನ್ನು ಹೇಗಾದರೂ ಮಾಡಿ ರಕ್ಷಿಸಬೇಕು ಎಂದುಕೊಂಡಿದ್ದ. ಕ್ಷಣಕಾಲವು ಯೋಚಿಸದೇ ತನ್ನ ಪ್ರಾಣವನ್ನು ಲೆಕ್ಕಿಸದೆ ಮರವೇರಿದ್ದ. ಆದರೆ ಮರದ ಮೇಲೆ ಹಾದು ಹೋಗಿದ್ದ ವಿದ್ಯುತ್‌ ಲೈನ್‌ ಯಮಪಾಶದಂತೆ ಕಾದಿತ್ತು. ಮರದ ರಂಬೆ- ಕೊಂಬೆಗಳನ್ನು ಹಿಡಿದು ಇನ್ನೇನು ಬೆಕ್ಕು ರಕ್ಷಿಸಿದೆ ಎಂದುಕೊಂಡ ರೋಷನ್‌ಗೆ ವಿದ್ಯುತ್ ಪ್ರವಹಿಸಿದೆ.

ಬೆಕ್ಕಿನ ಜೀವ ಉಳಿಸಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಒಮ್ಮೆಲೆ ಪ್ರವಹಿಸಿದ ವಿದ್ಯುತ್‌ಗೆ ರೋಷನ್‌ ಮರದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ಬೆಸ್ಕಾಂ ಸಿಬ್ಬಂದಿ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರದಲ್ಲೇ ನೇತಾಡುತ್ತಿದ್ದ ಮೃತದೇಹವನ್ನು ಕೆಳಗಿಸಿ, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಸ್ಕಾಂ ಕಚೇರಿಯಿಂದ ಕಾಲ್ಕಿತ್ತಿರುವ ಸಿಬ್ಬಂದಿ

ಬೆಸ್ಕಾಂ ಕಚೇರಿ ಪಕ್ಕದಲ್ಲೆ ವಿದ್ಯುತ್ ಅವಘಡ ನಡೆದ ಕಾರಣಕ್ಕೆ ಬೆಸ್ಕಾಂ ಸಿಬ್ಬಂದಿ ಹಾಗೂ ಎಇಇ ಕಾಲ್ಕಿತ್ತಿದ್ದಾರೆ. ಮರಗಳ ಕೊಂಬೆಗಳ ನಡುವೆ ವಿದ್ಯುತ್ ತಂತಿ ಹಾದು ಹೋಗಿರುವುದು ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ವಿದ್ಯುತ್ ತಂತಿ ಕಾಣದೆ ಯುವಕ ಬೆಕ್ಕನ್ನು ರಕ್ಷಿಸಲು ಮುಂದಾಗಿದ್ದು, ಈ ವೇಳೆ ತಂತಿ ತಗುಲಿ ಮೃತಪಟ್ಟಿದ್ದಾನೆ.

ಈ ಹಿಂದೆ ಸಾರ್ವಜನಿಕರು ಹಲವು ಬಾರಿ ತಂತಿ ಬಳಿಯಿರುವ ಮರದ ಕೊಂಬೆ ತೆರವು ಮಾಡಲು ಮನವಿ ಮಾಡಿದ್ದರು. ಆದರೆ ಮನವಿಗೆ ಕ್ಯಾರೆ ಎಂದಿರಲಿಲ್ಲ. ಮರದ ಕೊಂಬೆ ಜತೆ ಹಳೆಯ ವಿದ್ಯುತ್ ಕಂಬದ ತೆರವಿಗೂ ಕೋರಿದ್ದರು.‌ ಈ ಘಟನೆ ಬೆನ್ನಲ್ಲೇ ಭಯಬೀತರಾಗಿ ಬೆಸ್ಕಾಂ ಕಚೇರಿಯಿಂದ ಎಲ್ಲಾ ಸಿಬ್ಬಂದಿ ಕಾಲ್ಕಿತ್ತಿದ್ದಾರೆ. ಸ್ಥಳದಲ್ಲಿ ಮೀಸಲು ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version