ಕೊಪ್ಪಳ: ಜನರಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲು ರಾಜ್ಯ ಸರ್ಕಾರ ಗೃಹ ಜ್ಯೋತಿ ಯೋಜನೆ ಜಾರಿ ಮಾಡಲು ಮುಂದಾಗಿದೆ. ಈ ನಡುವೆ ಪ್ರತಿ ತಿಂಗಳು 300 ರೂಪಾಯಿ ಬರುತ್ತಿದ್ದ ಕರೆಂಟ್ ಬಿಲ್ ಈಗ ಬರೋಬ್ಬರಿ 1800 ರೂಪಾಯಿಗೆ ಏರಿಕೆಯಾಗಿದೆ ಎಂದು ಗಂಗಾವತಿಯಲ್ಲಿ ಜನರು ರೊಚ್ಚಿಗೆದ್ದು, ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿರುವುದು ಕಂಡುಬಂದಿದೆ.
ಉಚಿತ ವಿದ್ಯುತ್ ಯೋಜನೆಗೆ ಹಣ ಕ್ರೋಡೀಕರಿಸಲು ಇಂಧನ ಇಲಾಖೆ ಪ್ರತಿ ಯೂನಿಟ್ ಬೆಲೆ 70 ಪೈಸೆ ಹಾಗೂ ನಿಶ್ಚಿತ ಶುಲ್ಕ (ಫಿಕ್ಸ್ಡ್ ಚಾರ್ಜಸ್) ಏರಿಕೆ ಮಾಡಿದೆ ಎಂದು ಆರೋಪಿಸಿರುವ ಗ್ರಾಹಕರು, ವಿದ್ಯುತ್ ಹೆಚ್ಚಳ ಮಾಡುವ ಮೂಲಕ ಬಡಜನರಿಗೆ ಶಾಕ್ ಕೊಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಏನೋ ಬೇಸಿಗೆಯಲ್ಲಿ 300 ಅಥವಾ 400 ರೂಪಾಯಿ ಬಂದರೆ ಬಿಲ್ ಕಟ್ಟಬಹುದು. ಆದರೆ, ಏಕಾಏಕಿ 1700ರಿಂದ 1800 ರೂಪಾಯಿ, 2000 ಹೀಗೆ ಬಿಲ್ ಬಂದರೆ ಬಡವರು ಕಟ್ಟಲು ಸಾಧ್ಯವೇ? ನಾವು ಬಿಲ್ ಕಟ್ಟೋದಿಲ್ಲ, ಏನಾದರೂ ಆಗಲಿ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ | Congress Guarantee: ಪಾರ್ಟ್ ಟೈಂ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದರಾಮಯ್ಯ!
ಗಂಗಾವತಿಯಲ್ಲಿ ಬಿಲ್ ಹಿಡಿದು ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ಮಹಿಳೆಯರು, ಬಿಲ್ ಹಿಡಿದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಸರ್ಕಾರ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ ಎಂದು ಆಕ್ರೋಶ ಹೊರಹಾಕಿ, ನಾವು ಯಾವುದೇ ಕಾರಣಕ್ಕೂ ಬಿಲ್ ಪಾವತಿಸಲ್ಲ, ಅದು ಹೇಗೆ ವಿದ್ಯುತ್ ಬಿಲ್‌ನಲ್ಲಿ ಏಕಾಏಕಿ ನೂರಾರು ರೂಪಾಯಿ ಏರಿಕೆ ಆಗಿದೆ ಎಂದು ಕಿಡಿಕಾರಿದರು.
ಬೆಳಗಾವಿಯಲ್ಲಿ ಬೀದಿಗಿಳಿದ ನೇಕಾರರು
ಬೆಳಗಾವಿ: ವಿದ್ಯುತ್ ದರ ಏರಿಕೆ ವಿರೋಧಿಸಿ ನಗರದಲ್ಲಿ ರಾಜ್ಯ ನೇಕಾರ ಸೇವಾ ಸಂಘದ ಆಶ್ರಯದಲ್ಲಿ ನೇಕಾರರು ಪ್ರತಿಭಟನಾ ಮೆರವಣಿಗೆ ನಡೆಸಿ. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.
ವಿದ್ಯುತ್ ಮಗ್ಗಗಳಿಗಿದ್ದ ಕನಿಷ್ಠ 90 ರೂಪಾಯಿ ಮಿನಿಮಮ್ ಚಾರ್ಜ್ ಅನ್ನು 140ಕ್ಕೆ ಏರಿಕೆ ಮಾಡಲಾಗಿದೆ. ಅಂದರೆ ಒಂದೇ ಬಾರಿ 50 ರೂಪಾಯಿ ಹೆಚ್ಚಳ ಮಾಡಿದಂತೆ ಆಗಿದೆ. ಇದರಿಂದ ಬಡ ನೇಕಾರರು ಹೇಗೆ ಜೀವನ ನಡೆಸುವುದು ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ | Congress Guarantee: ಆ. 1ರಂದು ಫ್ರೀ ಕರೆಂಟ್, ಆ.18ರಂದು ಮನೆಯೊಡತಿಗೆ 2000 ರೂ. ಯೋಜನೆಗೆ ಚಾಲನೆ
ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದ್ದು, ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ಮೊದಲೇ ನೇಕಾರರು ಸಂಕಷ್ಟದಲ್ಲಿದ್ದಾರೆ. ಸಾಲದ ಹೊರಗೆ ಬೇಸತ್ತು ರಾಜ್ಯದ 42 ನೇಕಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಜತೆಗೆ ವಿದ್ಯುತ್ ದರ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದಾರೆ.