ಉಳ್ಳಾಲ: ರಾಜ್ಯದಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ವಿಷಯ ಎಂದರೆ ಉಚಿತ ವಿದ್ಯುತ್ (Electricity Bill)! ರಾಜ್ಯದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯಡಿ (Gruhajyothi scheme) ಒಂದು ಮನೆಗೆ ಗರಿಷ್ಠ 200 ಯುನಿಟ್‌ಗಳಷ್ಟು ಉಚಿತ ವಿದ್ಯುತ್ ನೀಡುವ ಈ ಯೋಜನೆಯಲ್ಲಿ ಹಾಕಿರುವ ಕಂಡಿಷನ್‌ಗಳು, ಅರ್ಜಿ ಸಲ್ಲಿಕೆ ಯಾವಾಗ ಮೊದಲಾದ ಚರ್ಚೆಗಳು ಜೋರಾಗಿವೆ. ಅದರ ನಡುವೆಯೇ ಸದ್ದಿಲ್ಲದೆ ವಿದ್ಯುತ್ ದರ ಏರಿಕೆಯೂ ದೊಡ್ಡ ಸುದ್ದಿಯಲ್ಲಿದೆ. ಇಷ್ಟೆಲ್ಲದರ ನಡುವೆ ಮಂಗಳೂರಿನ ಕುಟುಂಬವೊಂದಕ್ಕೆ ಶಾಕಿಂಗ್ ಸುದ್ದಿ ಬಂದಿದೆ. ಎಲ್ಲರೂ ಉಚಿತ ವಿದ್ಯುತ್ ನಿರೀಕ್ಷೆಯಲ್ಲಿದ್ದರೆ ಈ ಕುಟುಂಬ ತಮಗೆ ಬಂದಿರುವ ಬಿಲ್ ನೋಡಿ ಕಂಗಾಲಾಗಿದೆ.
ಅಂದ ಹಾಗೆ ಈ ಸಣ್ಣ ಕುಟುಂಬದ ಸಾಮಾನ್ಯ ಮನೆಗೆ ಬಂದಿರುವ ಬಿಲ್ ಎಷ್ಟು ಗೊತ್ತೇ? 7 ಲಕ್ಷ ರೂ.!
ಉಳ್ಳಾಲಬೈಲ್ ನಿವಾಸಿ ಸದಾಶಿವ ಆಚಾರ್ಯ ಎಂಬವರಿಗೆ ಮೀಟರ್ ರೀಡರ್ ನೀಡಿರುವ ಬಿಲ್ ಗಮನಿಸಿದ ಮನೆಮಂದಿಗೆ ಒಮ್ಮೆಗೇ ಸಿಡಿಲು ಬಡಿದಂತಾಗಿದೆ.
ವಿದ್ಯುತ್ ಬಿಲ್ ರಶೀದಿಯಲ್ಲಿ ನೀವು 99,338 ಯೂನಿಟ್ ಖರ್ಚು ಮಾಡಿದ್ದೀರಿ ಎಂದು ತಿಳಿಸಲಾಗಿದೆ. 7,71,072 ರೂಪಾಯಿ ಬಿಲ್ ನಮೂದಿಸಲಾಗಿದೆ.
ತಮಗೆ ಈ ಮೊದಲು ರೂ. 3,000 ದಷ್ಟು ಮಾಸಿಕ ವಿದ್ಯುತ್ ಬಿಲ್ ಬರುತ್ತಿತ್ತು. ನಾವು ಪ್ರತಿ ತಿಂಗಳು ಬಿಲ್ಲನ್ನು ಕಟ್ಟುತ್ತೇವೆ.ಈ ತಿಂಗಳು ಬಂದ ಬಿಲ್ಲನ್ನು ನೋಡಿ ಮನೆ ಮಂದಿ ಎಲ್ಲ ನಿಜಕ್ಕೂ ಶಾಕ್ ಆದೆವು ಎಂದು ಮನೆ ಮಾಲೀಕ ಸದಾಶಿವ ಆಚಾರ್ಯ ಹೇಳಿದ್ದಾರೆ. ಬಿಲ್ ಪಡೆದ ತಕ್ಷಣ ಮನೆಮಂದಿ ರೀಡರ್ ಬಳಿ ವಿಚಾರಿಸಿದಾಗ , ಕಚೇರಿಗೆ ತೆರಳಿ ವಿಚಾರಿಸುವಂತೆ ತಿಳಿಸಿದ್ದಾರೆ.
‘ಏಜೆನ್ಸಿಗಳ ಮುಖಾಂತರ ಬಿಲ್ ಕಲೆಕ್ಷನ್ ಮಾಡಲಾಗುತ್ತದೆ. ಬಿಲ್ ರೀಡರ್‌ನ ಎಡವಟ್ಟಿನಿಂದ ತಪ್ಪಾಗಿ ವಿದ್ಯುತ್ ಬಿಲ್ ಮುದ್ರಣ ಆಗಿದೆ. ಬಿಲ್ಲಲ್ಲಿ ಲೋಪ ಕಂಡು ಬಂದರೆ ಅದನ್ನು ಗ್ರಾಹಕರಿಗೆ ಕೊಡುವಂತಿಲ್ಲ.ತಕ್ಷಣವೇ ಸದಾಶಿವ ಆಚಾರ್ಯ ಅವರ ಮನೆ ಬಾಗಿಲಿಗೆ ಪರಿಷ್ಕೃತ ಬಿಲ್ ತಲುಪಿಸುವುದಾಗಿ ಹೇಳಿದ್ದು ಗುರುವಾರ (ಜೂನ್ 16) ಮದ್ಯಾಹ್ನದ ವೇಳೆ ಪರಿಷ್ಕೃತ 2,833 ರೂಪಾಯಿಗಳ ಬಿಲ್ ಆಚಾರ್ಯ ಅವರ ಮನೆ ತಲುಪಿದೆ ಎಂದು ಮೆಸ್ಕಾಂ ಉಳ್ಳಾಲ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ ತಿಳಿಸಿದ್ದಾರೆ.
ಇದನ್ನೂ ಓದಿ : Free Electricity: ಗೃಹ ಜ್ಯೋತಿ ಅರ್ಜಿ ಸ್ವೀಕಾರ ಆರಂಭ ಮುಂದೂಡಿಕೆ; ದಿಢೀರ್ ನಿರ್ಧಾರಕ್ಕೆ ಕಾರಣವೇನು?