ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ ರಾಜ್ಯದ ಎಲ್ಲ ಕುಟುಂಬಗಳಿಗೆ 200 ಯುನಿಟ್ ಉಚಿತ ವಿದ್ಯುತ್ ಅನ್ನು ರಾಜ್ಯ ಸರ್ಕಾರ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ ಈಗ ಉಳಿದವರಿಗೆ ವಿದ್ಯುತ್ ಬಿಲ್ (Electricity bill) ಶಾಕ್ ನೀಡಿದೆ. ಜೂನ್ 1ರಿಂದಲೇ ವಿದ್ಯುತ್ ದರ ಹೆಚ್ಚಳ ಜಾರಿಯಾಗುತ್ತಿದ್ದು, ಪ್ರತಿ ಯುನಿಟ್‌ಗೆ 70 ಪೈಸೆ ದರವನ್ನು ಕೆಇಆರ್‌ಸಿ ಏರಿಸಿದೆ.
ಮೇ 12ರಂದೇ ವಿದ್ಯುತ್ ದರ ಪರಿಷ್ಕರಣೆ ಮಾಡಿದ್ದ ಕೆಇಆರ್‌ಸಿ, ಪ್ರತಿ ಯುನಿಟ್‌ಗೆ 70 ಪೈಸೆಯನ್ನು ಏರಿಸಿತ್ತು. ವಿದ್ಯುತ್ ಸರಬರಾಜು ಕಂಪನಿ ನಷ್ಟದಲ್ಲಿರುವ ಕಾರಣ ನೀಡಿ ದರ ಹೆಚ್ಚಳವನ್ನು ಮಾಡಲಾಗಿತ್ತು. ಆದರೆ, ಆಗ ಈ ಆದೇಶವನ್ನು ಜಾರಿ ಮಾಡಿರಲಿಲ್ಲ. ಆದರೆ, ಈಗ ಹೊಸ ಪರಿಷ್ಕೃತ ದರ ಜೂನ್ 1ರಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಕಳೆದ ಲೋಕಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದ್ದು ನಾವೇ: ಶಾಸಕ ನರೇಂದ್ರಸ್ವಾಮಿ
ಈ ಹಿಂದೆ ಏಪ್ರಿಲ್ 1ರಿಂದಲೇ ಹೊಸ ವಿದ್ಯುತ್ ದರ ಅನ್ವಯ ಎಂದು ಕೆಇಆರ್‌ಸಿ ಹೇಳಿತ್ತು. ಆದರೆ, ಚುನಾವಣೆಯ ಹಿನ್ನೆಲೆಯಲ್ಲಿ ಏರಿಕೆ ಆದೇಶಕ್ಕೆ ತಡೆಬಿದ್ದಿತ್ತು. ಈಗ ಚುನಾವಣೆ ಮುಗಿದು ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಪರಿಷ್ಕೃತ ದರವನ್ನು ಜಾರಿ ಮಾಡಲಾಗಿದೆ.
ಸಿದ್ದರಾಮಯ್ಯ ಸಾವಿರಾರು ಕೋಟಿ ರೂ. ಉಳಿಸಿದ್ದು ಹೇಗೆ?
ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಎಲ್ಲ ಐದು ಯೋಜನೆಗಳನ್ನು ಜಾರಿ ಮಾಡಿ ಘೋಷಣೆ ಮಾಡಿಯಾದರೂ ಅನೇಕ ನಿಬಂಧನೆಗಳನ್ನು ವಿಧಿಸಲಾಗಿದೆ. ಅದರಲ್ಲಿ ಮೊದಲನೆಯದಾಗಿ ಮಾಸಿಕ 200 ಯುನಿಟ್ ಉಚಿತ ವಿದ್ಯುತ್ ನೀಡುವ ಯೋಜನೆ. ಆದರೆ ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ಈ ವರ್ಷದಿಂದಲೇ ಸಿಗುವುದಿಲ್ಲ. ಈ ಕುರಿತ ಮಾಹಿತಿ ಇಲ್ಲಿದೆ.
ಗೃಹಜ್ಯೋತಿ ಯೋಜನೆ: ಪ್ರತಿ ಮನೆಯು ಹಿಂದಿನ 12 ತಿಂಗಳಲ್ಲಿ ಎಷ್ಟು ವಿದ್ಯುತ್ ಬಳಸಿದೆ ಎಂಬ ಲೆಕ್ಕ ತೆಗೆದುಕೊಳ್ಳಲಾಗುತ್ತದೆ. ಅಷ್ಟೂ ತಿಂಗಳ ವಿದ್ಯುತ್ ಬಳಕೆಯ ಸರಾಸರಿ ಪಡೆದುಕೊಳ್ಳಲಾಗುತ್ತದೆ. ಅದಕ್ಕೆ ಶೇ.10 ಸೇರಿಸಲಾಗುತ್ತದೆ. ಅಂದರೆ ಉದಾಹರಣೆಗೆ ಯಾವುದಾದರೂ ಮನೆಯ ವಾರ್ಷಿಕ ಸರಾಸರಿ ವಿದ್ಯುತ್ ಬಳಕೆ ಮಾಸಿಕ 170 ಯುನಿಟ್ ಆಗಿದ್ದರೆ ಅದಕ್ಕೆ ಶೇ.10 ಅಂದರೆ 17 ಯುನಿಟ್ ಸೇರಿಸಲಾಗುತ್ತದೆ. ಅಲ್ಲಿಗೆ ಒಟ್ಟು ಸರಾಸರಿ ಯುನಿಟ್ 187 ಆಗುತ್ತದೆ. ಯಾವುದೇ ತಿಂಗಳು 187 ಯುನಿಟ್ ಬಳಕೆ ಮಾಡುವವರೆಗೂ ಆ ಮನೆಯವರು ಬಿಲ್ ಕಟ್ಟುವಂತಿಲ್ಲ. ಆದರೆ ಯಾವುದಾದರೂ ಒಂದು ತಿಂಗಳು ಆ ಮನೆಯ ವಿದ್ಯುತ್ ಬಿಲ್ ಇದ್ದಕ್ಕಿದ್ದಂತೆ 190 ಯುನಿಟ್ ಬಂದರೆ ಆ ತಿಂಗಳು ಬಿಲ್ ಕಟ್ಟಬೇಕಾಗುತ್ತದೆ. ಜುಲೈವರೆಗೆ ಬಾಕಿ ಉಳಿಸಿಕೊಂಡಿರುವವರು ಅವರೇ ಕಟ್ಟಬೇಕು ಎಂದರು. ಜುಲೈ ತಿಂಗಳ ಬಿಲ್‌ನಿಂದ ಈ ಯೋಜನೆ ಜಾರಿಯಾಗುತ್ತದೆ. ಅಂದರೆ ಆಗಸ್ಟ್‌ನಲ್ಲಿ ಬರುವ ಬಿಲ್ ಮೊತ್ತ 199 ಯುನಿಟ್ ಒಳಗಿದ್ದರೆ ಅಂಥವರು ಪಾವತಿ ಮಾಡಬೇಕಾಗಿಲ್ಲ. ಇದಿಷ್ಟೂ ಯೋಜನೆಯ ಸ್ಥೂಲ ಚಿತ್ರಣ.
ಎಲ್ಲರಿಗೂ ಏಕೆ ಫ್ರೀ ಇಲ್ಲ?: ಪ್ರತಿ ತಿಂಗಳು 200 ಯುನಿಟ್ ಉಚಿತ ವಿದ್ಯುತ್ ಬಳಸಬಹುದು ಎನ್ನುವುದು ಎಲ್ಲರಿಗೂ ಅನ್ವಯ ಆಗುವುದಿಲ್ಲ. ಮುಖ್ಯವಾಗಿ ಈ ಹಿಂದಿನ 12 ತಿಂಗಳು ಎಷ್ಟು ವಿದ್ಯುತ್ ಬಳಕೆ ಮಾಡಲಾಗಿದೆ ಎನ್ನುವುದರ ಆಧಾರದಲ್ಲಿ ಉಚಿತ ವಿದ್ಯುತ್ ನಿಗದಿ ಆಗುತ್ತದೆ. ಉದಾಹರಣೆಗೆ ಒಂದು ಮನೆಯಲ್ಲಿ ಮಾಸಿಕ 60-70 ಯುನಿಟ್ ವಿದ್ಯುತ್ ಬಳಕೆ ಮಾಡಲಾಗುತ್ತಿರುತ್ತದೆ ಎಂದಿಟ್ಟುಕೊಳ್ಳೋಣ. ಆಗ ವಾರ್ಷಿಕ ಸರಾಸರಿ 65 ಯುನಿಟ್ ಎಂದಾಗುತ್ತದೆ. ಅದಕ್ಕೆ ಶೇ.10 ಹೆಚ್ಚುವರಿ ಅಂದರೆ 6 ಯುನಿಟ್‌ವರೆಗೆ ಹೆಚ್ಚುವರಿಯಾಗಿ ಬಳಸಬಹುದು. ಅಂದರೆ ಯಾವುದೇ ತಿಂಗಳು 71 (65+6) ಯುನಿಟ್‌ವರೆಗೂ ಯಾವುದೇ ತಿಂಗಳು ಬಿಲ್ ಬಂದರೂ ಅದನ್ನು ಪಾವತಿ ಮಾಡಬೇಕಿಲ್ಲ. ಆದರೆ ಉಚಿತ ವಿದ್ಯುತ್ ಸಿಗುತ್ತದೆ ಎಂಬ ಕಾರಣಕ್ಕೆ ಫ್ರಿಜ್, ವಾಷಿಂಗ್ ಮಷೀನ್, ಎಲೆಕ್ಟ್ರಿಕ್ ವಾಹನಗಳನ್ನು ಕೊಂಡುಕೊಂಡು ಬಂದರೆ ಈ ಸರಾಸರಿ ಮೀರಬಹುದು. ಹಾಗೊಂದು ವೇಳೆ ಈ ಮೇಲೆ ಉದಾಹರಣೆ ನೀಡಿದ ಮನೆಯ ವಿದ್ಯುತ್ 71 ಯುನಿಟ್ ಮೀರಿದರೆ, 71 ಯುನಿಟ್ ಮೀರಿದ ಅಷ್ಟೂ ತಿಂಗಳು ಬಿಲ್ ಕಟ್ಟಬೇಕಾಗುತ್ತದೆ.
ಮುಂದಿನ ವರ್ಷ ಉಪಯೋಗ: ಇಡೀ ವರ್ಷ ಸರಾಸರಿ ವಿದ್ಯುತ್ ಬಿಲ್ ಹೆಚ್ಚು ಆಗಬಹುದು. ಆದರೆ ಇಡೀ ವರ್ಷ ಬಿಲ್ ಕಟ್ಟಿದ ನಂತರ ಆ ಮನೆಯ ಸರಾಸರಿ ಹೆಚ್ಚಾಗುತ್ತದೆ. ಆ ಸರಾಸರಿಯು 199 ಯುನಿಟ್ ಒಳಗಿದ್ದರೆ ಆ ವರ್ಷ ಪೂರ್ತಿ ಮತ್ತೆ ಉಚಿತ ವಿದ್ಯುತ್ ಸಿಗುತ್ತದೆ. ಹೀಗೆ, ಉಚಿತ ವಿದ್ಯುತ್ ಎನ್ನುವುದು ಈ ವರ್ಷವೇ ಎಲ್ಲರಿಗೂ 200 ಯುನಿಟ್ ಉಚಿತವಾಗಿ ಸಿಗುವುದಿಲ್ಲ.
ಸರಾಸರಿಯನ್ನು ತೆಗೆಯುವ ಮೂಲಕ, ಬೊಕ್ಕಸಕ್ಕೆ ಕೋಟ್ಯಂತರ ರೂ. ಉಳಿಸುವ ಬುದ್ಧಿವಂತಿಕೆಯನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಸರಾಸರಿ ತೆಗೆಯದೇ ಪ್ರತಿ ತಿಂಗಳ ವಿದ್ಯುತ್ ಆಧಾರದಲ್ಲಿ ನೀಡುವುದಾಗಿದ್ದರೆ ಯಾವುದೇ ನಿಯಂತ್ರಣವಿಲ್ಲದೆ ಹಣ ನೀಡಬೇಕಾಗುತ್ತಿತ್ತು. ಈಗಿನ ಲೆಕ್ಕದಲ್ಲಿ, ಪ್ರತಿ ವರ್ಷ ಗರಿಷ್ಠ ಎಷ್ಟು ಮೊತ್ತವನ್ನು ಮೀಸಲಿಡಬೇಕಾಗುತ್ತದೆ ಎಂಬ ಲೆಕ್ಕವು ವರ್ಷದ ಆರಂಭದಲ್ಲೇ ಸಿಗುವುದರಿಂದ ಅಷ್ಟರ ಮಟ್ಟಿಗೆ ಬಜೆಟ್ ಮಂಡಿಸುವುದೂ ಸುಲಭವಾಗಲಿದೆ. 13 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ತಮ್ಮ ಅನುಭವ ಬಳಸಿ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ಉಳಿಸಿದ್ದಾರೆ.