ಬೆಂಗಳೂರು: ರಾಜ್ಯದ ಜನತೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಶಾಕ್ ಕೊಟ್ಟಿದೆ. 2023-24ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗಿದೆ. ಎಲ್‌ಟಿ (LT) ಮತ್ತು ಎಚ್‌ಟಿ (HT) ಗ್ರಾಹಕರಿಗೆ ಪ್ರತಿ ಯುನಿಟ್‌ಗೆ ಸರಾಸರಿ 8.42 ರೂ. ಇದ್ದು, 2022-24ನೇ ಸಾಲಿಗೆ ಇದು 9.12 ರೂಗೆ ಹೆಚ್ಚಳವಾಗಿದೆ. ಪ್ರತಿ ಯೂನಿಟ್‌ಗೆ ಸರಾಸರಿ 70 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ.
ಕಂದಾಯ ಕೊರತೆಯನ್ನು ಸರಿದೂಗಿಸಲು ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ ಅನುಮೋದನೆ ಮಾಡಿದೆ. ಶೇಕಡಾ 8.31ರಷ್ಟು ವಿದ್ಯುತ್ ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗದ ಅನುಮೋದನೆ ಮಾಡಿತ್ತು. 70 ಪೈಸೆ ಹೆಚ್ಚಳದಲ್ಲಿ 57 ಪೈಸೆ ಸ್ಥಿರ ವೆಚ್ಚ ( ಫಿಕ್ಸೆಡ್ ಚಾರ್ಜ್) ಇರಲಿದ್ದು, ಇನ್ನುಳಿದ 13 ಪೈಸೆ ಇಂಧನ ಶುಲ್ಕವಾಗಿ ವಸೂಲಿ ಮಾಡಲಾಗುತ್ತದೆ. ಈ ಪರಿಷ್ಕೃತ ದರ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಅನುಮೋದಿಸಲಾಗಿದೆ.
2022ರಲ್ಲೂ ಯೂನಿಟ್‌ಗೆ 35 ಪೈಸೆ ಹೆಚ್ಚಳ
ವಿದ್ಯುತ್ ವಿತರಣಾ ಕಂಪನಿಗಳಿಂದ ದರ ಪರಿಷ್ಕರಣೆಗೆ ಪ್ರಸ್ತಾವನೆ ಹಿನ್ನೆಲೆ ಕೆಇಆರ್‌ಸಿ (Karnataka Electricity Regulatory Commission) ಕಳೆದ ಫೆಬ್ರವರಿ 13ರಂದು ಸಾರ್ವಜನಿಕ ಅದಾಲತ್ ಕರೆಕೊಟ್ಟಿತ್ತು. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ರಾಜ್ಯದ ಬೇರೆ ಬೇರೆ ನಗರಗಳಲ್ಲಿ ಸಾರ್ವಜನಿಕ ಅದಾಲತ್ ನಡೆದಿತ್ತು.
ಸಾರ್ವಜನಿಕ ಅದಾಲತ್‌ನಲ್ಲಿನ ಆಕ್ಷೇಪ, ಸಲಹೆ, ಸೂಚನೆಗಳ ಪರಿಶೀಲನೆ ಬಳಿಕ ಇದೀಗ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನಿರ್ಧಾರ ಪ್ರಕಟಿಸಿದೆ. ಈಗಾಗಲೇ ಯುನಿಟ್‌ಗೆ 1.50 ರೂ.ನಿಂದ 2 ರೂಪಾಯಿವರೆಗೆ ದರ ಏರಿಕೆಗೆ ಪ್ರಸ್ತಾವನೆಯನ್ನು ವಿದ್ಯುತ್ ವಿತರಣ ಕಂಪನಿಗಳು ಸಲ್ಲಿಸಿದ್ದವು.
ಇದನ್ನೂ ಓದಿ: Anekal News: ಇಬ್ಬರು ಮಕ್ಕಳನ್ನು ಕೊಂದು ತಂದೆ ನೇಣಿಗೆ ಶರಣು; ಪತ್ನಿಯ ಹೈಫೈ ಜೀವನಕ್ಕೆ ಬಲಿಯಾದ ಮೂವರು
ಕಳೆದ 2022ರ ಏಪ್ರಿಲ್‌ನಲ್ಲಿ ಯೂನಿಟ್‌ಗೆ 35 ಪೈಸೆ ಹೆಚ್ಚಳ ಮಾಡಿತ್ತು. ಕಳೆದ ಸೆಪ್ಟಂಬರ್‌ನಲ್ಲಿ ಇಂಧನ ಹೊಂದಾಣಿಕೆ ಹಿನ್ನೆಲೆ ಪ್ರತಿ ಯುನಿಟ್‌ಗೆ 24 ಪೈಸೆಯಿಂದ 43 ಪೈಸೆಗೆ ಏರಿಕೆ ಮಾಡಲಾಗಿತ್ತು. ಇದೀಗ ಚುನಾವಣೆ ಮುಗಿದ ಬಳಿಕ ದರ ಪರಿಷ್ಕರಣೆ ಆಗಬಹುದು ಎನ್ನಲಾಗಿತ್ತು. ಅದರಂತೆ ಈಗ ದರ ಪರಿಷ್ಕರಣೆ ಮಾಡಲಾಗಿದೆ.
ಕೆಲವು ರಿಯಾಯಿತಿಗಳೂ ಇವೆ
-ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಇವಿ ಚಾರ್ಜಿಂಗ್ ಸ್ಟೇಷನ್‌ಗಳಿಗೆ ಪ್ರತಿ ಯುನಿಟ್‌ಗೆ ಇದ್ದ ಐದು ರೂಪಾಯಿ ದರವನ್ನು 4.50ಕ್ಕೆ ಇಳಿಸಲಾಗಿದೆ.
-ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರತಿ ಯುನಿಟ್‌ಗೆ ನೀಡಲಾಗುತ್ತಿದ್ದ 50 ಪೈಸೆ ವಿನಾಯಿತಿಯನ್ನು ಹಾಗೇ ಮುಂದುವರಿಸಲಾಗಿದೆ.
-ಕೈಗಾರಿಕೆಗಳು ಮತ್ತು ವಾಣಿಜ್ಯ ಸ್ಥಾವರಗಳು ಹೆಚ್ಚು ವಿದ್ಯುತ್ ಬಳಸುವುದನ್ನು ಉತ್ತೇಜಿಸಲು ಪ್ರತಿ ಯುನಿಟ್‌ಗೆ ಆರು ರೂ. ಇದ್ದ ದರವನ್ನು 5 ರೂ.ಗೆ ಇಳಿಸಲಾಗಿದೆ.