ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ವಿಲೇಜ್ ರೆಸ್ಟೋರೆಂಟ್‌ನಲ್ಲಿ ನವೆಂಬರ್ ೨೦ರಂದು ತಡರಾತ್ರಿ ಅವಧಿ ಮೀರಿದ ಹಿನ್ನೆಲೆಯಲ್ಲಿ ಊಟ ಕೊಡಲು ನಿರಾಕರಿಸಿದರು ಎಂಬ ಕಾರಣಕ್ಕೆ ೨೦ ಮಂದಿ ಯುವಕರ ಗುಂಪು ದಾಂಧಲೆ ನಡೆಸಿದ್ದ (Restaurant Attack) ಪ್ರಕರಣ ಸಂಬಂಧ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದ ಕೂಡಲೇ ಪೊಲೀಸ್ ದೂರು ನೀಡಲಾಗಿತ್ತು. ಅಲ್ಲದೆ, ದಾಂಧಲೆ ವಿಡಿಯೊ ವೈರಲ್ ಆಗಿತ್ತು. ಅಲ್ಲದೆ, ಪ್ರಕರಣ ನಡೆದು ಎಫ್‌ಐಆರ್ ದಾಖಲಾಗಿ ೧೦ ದಿನವಾದರೂ ಆರೋಪಿಗಳ ಬಂಧನವಾಗಿರಲಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಬಿತ್ತರವಾಗುತ್ತಿದ್ದಂತೆ ರೆಸ್ಟೋರೆಂಟ್‌ಗೆ ಪೊಲೀಸ್ ಭದ್ರತೆ ನೀಡಿದ್ದಲ್ಲದೆ, ಆರೋಪಿಗಳ ಶೋಧ ಕಾರ್ಯವನ್ನು ನಡೆಸಿದ್ದ ಪೊಲೀಸರು, ಗುರುವಾರ (ಡಿಸೆಂಬರ್ ೧) ಏಳು ಮಂದಿಯನ್ನು ಬಂಧಿಸಿದ್ದಾರೆ.
ಸಿಸಿ ಕ್ಯಾಮರಾ ಮತ್ತು ಮೊಬೈಲ್ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಶಂಕರ್ ರೂಪೇನಾ ಅಗ್ರಹಾರ, ಕೀರ್ತಿ ಗಟ್ಟಹಳ್ಳಿ,ಅಭಿಷೇಕ್ ಗಾರ್ವೆಬಾವಿಪಾಳ್ಯ, ಪ್ರವೀಣ್ ಕುಮಾರ್ ಸೋಮಸುಂದರ ಪಾಳ್ಯ, ಹೇಮಂತ್ ಕುಮಾರ್ ಲಕ್ಕಸಂದ್ರ, ಅಭಿಷೇಕ್ ಬಂಡೆಪಾಳ್ಯ, ಅಭಿಲಾಷ್ ಕೂಡ್ಲು ಬಂಧಿತ ಆರೋಪಿಗಳಾಗಿದ್ದಾರೆ. ಆದರೆ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ. ರಾಮಚಂದ್ರ ಅವರ ಪುತ್ರ ಧನುಷ್ ಬಂಧನ ಇನ್ನೂ ಆಗಿಲ್ಲ.
ಇದನ್ನೂ ಓದಿ | ಮಲಮಗಳನ್ನು ಗರ್ಭಿಣಿ ಮಾಡಿದವನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್; ಆದರೆ ಇದೊಂದು ಅಪರೂಪದ ಪ್ರಕರಣ!
ಬಂಧಿತರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸ್ನೇಹಿತನ ಬರ್ತ್ ಡೇ ಪಾರ್ಟಿಗೆಂದು ಎಲ್ಲರೂ ಒಟ್ಟಾಗಿ ವಿಲೇಜ್ ರೆಸ್ಟೋರೆಂಟ್‌ಗೆ ಹೋಗಿದ್ದರು. ಆಗ ಊಟ ಬೇಕೆಂದು ಸಿಬ್ಬಂದಿ ಬಳಿ ಕೇಳಿದ್ದೆವು. ಅವರು ಹಿಂದಿಯಲ್ಲಿ ಮಾತನಾಡಿದರು. ಅದು ನಮಗೆ ಅರ್ಥವಾಗಲಿಲ್ಲ. ಆಗ ತಳ್ಳಾಟ-ನೂಕಾಟ ನಡೆಯಿತು. ನಾವು ಯಾರಿಗೂ ಹಲ್ಲೆ ಮಾಡಿಲ್ಲ ಎಂದು ವಿಚಾರಣೆ ವೇಳೆ ಆರೋಪಿಗಳು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಎಲ್ಲ ಆರೋಪಿಗಳನ್ನೂ ಬಂಧಿಸುತ್ತೇವೆ– ಸಿ.ಕೆ. ಬಾಬಾ
ನವೆಂಬರ್ 20ರ ರಾತ್ರಿ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಸಿಟಿ ವಿಲೇಜ್ ರೆಸ್ಟೋರೆಂಟ್‌ನಲ್ಲಿ ಗಲಾಟೆಯಾಗಿದೆ. 21ನೇ ತಾರೀಕು ಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬರ್ತ್ ಡೇ ಪಾರ್ಟಿಯ ಸಲುವಾಗಿ ಆರೋಪಿಗಳು ಬಂದಿದ್ದು, ಆಗಲೇ ರಾತ್ರಿ 11.30 ಆಗಿದೆ. ಈಗಾಗಲೇ ಸಮಯ ಆಗಿದೆ. ರೆಸ್ಟೋರೆಂಟ್‌ನಲ್ಲಿ ೧೧ ಗಂಟೆವರೆಗೆ ಮಾತ್ರ ಆರ್ಡರ್ ತೆಗೆದುಕೊಳ್ಳಲಾಗುತ್ತದೆ ಎಂದು ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಆರೋಪಿಗಳು ಮತ್ತು ರೆಸ್ಟೋರೆಂಟ್‌ನವರ ನಡುವೆ ತಳ್ಳಾಟ-ನೂಕಾಟಗಳಾಗಿವೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಆರಂಭಿಸಲಾಯಿತು. ಮೊದಲು ಆರೋಪಿಗಳ ಮಾಹಿತಿ ಲಭ್ಯವಾಗಿರಲಿಲ್ಲ. ನಂತರ ಹುಡುಕಾಟ ನಡೆಸಿ ಇದುವರೆಗೂ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳಿಗಾಗಿ ಶೋಧ ಮಾಡಲಾಗುತ್ತಿದೆ. ಆರೋಪಿಗಳು ಯಾರೇ ಇರಲಿ ಕಾನೂನು ಕ್ರಮ ಜರುಗಿಸಲಾಗುವುದು. ಆದಷ್ಟು ಬೇಗ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಹೇಳಿದ್ದಾರೆ.
ಏನಿದು ಪ್ರಕರಣ?
ನವೆಂಬರ್ ೨೦ರ ರಾತ್ರಿ ೧೧.೩೦ರ ಸುಮಾರಿಗೆ ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ. ರಾಮಚಂದ್ರ ಅವರ ಪುತ್ರ ಧನುಷ್ ಮತ್ತವರ ತಂಡವು ಹುಟ್ಟುಹಬ್ಬದ ಪಾರ್ಟಿ ಮುಗಿಸಿ ವಿಲೇಜ್ ರೆಸ್ಟೋರೆಂಟ್‌ಗೆ ಬಂದಿದೆ. ಈ ವೇಳೆ ಊಟವನ್ನು ಕೇಳಿದ್ದಾರೆ. ಆದರೆ, ಅದಾಗಲೇ ರೆಸ್ಟೋರೆಂಟ್ ಅವಧಿ ಮುಕ್ತಾಯಗೊಂಡಿದ್ದು, ಅಡುಗೆ ಖಾಲಿಯಾಗಿದೆ ಎಂದು ಸೇವೆ ನೀಡಲು ರೆಸ್ಟೋರೆಂಟ್ ಸಿಬ್ಬಂದಿ ನಿರಾಕರಿಸಿದ್ದಾರೆ.
ಅದಾಗಲೇ ಪಾನಮತ್ತರಾಗಿದ್ದ ಧನುಷ್ ಮತ್ತವನ ತಂಡದವರು ಗಲಾಟೆ ಪ್ರಾರಂಭಿಸಿದ್ದಾರೆ. ತಮಗೆ ಊಟವನ್ನು ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ರೆಸ್ಟೋರೆಂಟ್ ಸಿಬ್ಬಂದಿ ಸಮಯದ ಕಾರಣ ನೀಡಿ ಸೇವೆ ನೀಡಲು ನಿರಾಕರಣೆ ಮಾಡಿದ್ದು, ಈ ವೇಳೆ ಮಾತಿನ ಚಕಮಕಿ ನಡೆದಿದೆ. ಆಗ ಧನುಷ್ ಟೀಂ ಏಕಾಏಕಿ ಸಿಬ್ಬಂದಿ ಮೇಲೆ ದಾಳಿ ನಡೆಸಿ ಹಿಗ್ಗಾಮುಗ್ಗ ಥಳಿಸಿದೆ. ಬಿಡಿಸಲು ಬಂದ ಸಿಬ್ಬಂದಿ ಮೇಲೂ ದಾಳಿ ಮಾಡಿದ್ದು, ೧೦ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗಳಾಗಿತ್ತು. ಅಲ್ಲಿದ್ದ ಮಹಿಳಾ ಸಿಬ್ಬಂದಿ ಮೇಲೆಯೂ ದಾಳಿ ನಡೆಸಿದ್ದಾರೆನ್ನಲಾಗಿದ್ದು, ಎಲ್ಲ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿತ್ತು. ಈ ವಿಡಿಯೊ ವೈರಲ್ ಆಗಿತ್ತು.
ಇದನ್ನೂ ಓದಿ | Man Slapped | ಇಂಡಿಯನ್ಸ್ ಕಂಡರೆ ನನಗೆ ಆಗಲ್ಲ; ಸೂಪರ್ ಮಾರ್ಕೆಟ್‌ನಲ್ಲಿ ಅಪರಿಚಿತನಿಂದ ವೃದ್ಧೆ ಮೇಲೆ ಹಲ್ಲೆ