Site icon Vistara News

Elephant Arjuna: ದಸರಾ ಆನೆ ಅರ್ಜುನನ ಸ್ಮಾರಕಕ್ಕೆ ಶಂಕುಸ್ಥಾಪನೆ; 50 ಲಕ್ಷ ವೆಚ್ಚದಲ್ಲಿ ನಿರ್ಮಾಣ

Elephant Arjuna

ಹಾಸನ: ದಸರಾ ಆನೆ ಅರ್ಜುನನ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ (Elephant Arjuna) ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಅರಣ್ಯ ವಲಯದ ದಬ್ಬಳ್ಳಿಕಟ್ಟೆಯ ನೆಡುತೋಪಿನಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸ್ಮಾರಕ (elephant Arjuna’s memorial) ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ.

2023ರ ಡಿ. 4ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಕ್ಯಾಪ್ಟನ್ ಅರ್ಜುನ ವೀರ ಮರಣವನ್ನಪ್ಪಿತ್ತು. ಬಳಿಕ ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಗಳು ಕೇಳಿಬಂದಿದ್ದರಿಂದ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಇದೀಗ ಅರ್ಜುನನ ಅಭಿಮಾನಿಗಳ ಆಸೆ ಈಡೇರಿದೆ.

ಮಳೆಯ ನಡುವೆಯೇ ಸ್ಮಾರಕ ನಿರ್ಮಾಣಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಸ್ಥಳೀಯ ಶಾಸಕ ಸಿಮೆಂಟ್ ಮಂಜು, ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಸಿಇಒ ಪೂರ್ಣಿಮಾ, ಸಿಸಿಎಫ್ ರವಿಶಂಕರ್ ಉಪಸ್ಥಿತರಿದ್ದರು.

ಜ.1ಕ್ಕೆ ಸ್ಮಾರಕ ಲೋಕಾರ್ಪಣೆ

ಶಂಕುಸ್ಥಾಪನೆ ಬಳಿಕ ಮಾತನಾಡಿದ ಸಚಿವ ಸಚಿವ ಈಶ್ವರ್ ಖಂಡ್ರೆ ಅವರು, ಎಂಟು ಬಾರಿ ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಎಲ್ಲರ ಗಮನ ಸೆಳೆದಿತ್ತು. ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲಿ ಸರ್ಜುನ ಸಾವನ್ನಪ್ಪಿತ್ತು, ಇದು ರಾಜ್ಯದ ಜನತೆಗೆ ಅತ್ಯಂತ ದು:ಖದ ಸಂಗತಿಯಾಗಿತ್ತು. 1968ರಲ್ಲಿ ಈ ಆನೆಯನ್ನು ಸೆರೆ ಹಿಡಿಯಲಾಗಿತ್ತು, ಆದಾದ ನಂತರ ತರಬೇತಿ ನೀಡಲಾಗಿತ್ತು. 2012ರಿಂದ ದಸರಾದಲ್ಲಿ ಅಂಬಾರಿ ಹೊತ್ತಿತ್ತು. ಅರ್ಜುನ ನಮ್ಮಿಂದ ದೂರ ಹೋಗುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ದಬ್ಬಳ್ಳಿಕಟ್ಟೆ ಹಾಗೂ ಬಳ್ಳೆ ಎರಡೂ ಕಡೆ ಸ್ಮಾರಕ ನಿರ್ಮಾಣ ಮಾಡುತ್ತೇವೆ. ಆದಷ್ಟು ಶೀಘ್ರದಲ್ಲೇ ಕಾಮಗಾರಿ ಆರಂಭವಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ | Hathras Stampede: 121 ಜನರ ಸಾವಿಗೆ ಕಾರಣನಾದ ಭೋಲೆ ಬಾಬಾ ಆಸ್ತಿ ಧ್ವಂಸಕ್ಕೆ ಮುಂದಾದ ಯೋಗಿ!

ಐವತ್ತು ಲಕ್ಷ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡುತ್ತೇವೆ. ಜ.1 ರಂದು ಸ್ಮಾರಕ ಲೋಕಾರ್ಪಣೆ ಮಾಡುತ್ತೇವೆ. ಸ್ಮಾರಕ ಅಭಿವೃದ್ಧಿ ಮಾಡಲು ಹಣದ ಸಮಸ್ಯೆ ಇಲ್ಲ, ಎಷ್ಟು ಹಣ ಬೇಕಾದರೂ ಖರ್ಚು ಮಾಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.

Exit mobile version