Site icon Vistara News

Elephant attack : ಚನ್ನಗಿರಿಯಲ್ಲಿ ಮುಂಜಾನೆಯೇ ಆನೆ ದಾಂಧಲೆಗೆ ಯುವತಿ ಬಲಿ; ಅವರೆ ಬಿಡಿಸುತ್ತಿದ್ದಾಗ ಹಿಂದಿನಿಂದ ಬಂದು ದಾಳಿ

Elephant attack channagiri

#image_title

ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಗ್ರಾಮದ ಮುಂಜಾನೆಯೇ ನಡೆದ ಆನೆ ದಾಂಧಲೆಗೆ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಸೋಮ್ಲಾಪುರದ ಕವನ (17) ಎಂಬವರು ಸಾವನ್ನಪ್ಪಿದವರು.

ಚನ್ನಗಿರಿ ತಾಲೂಕಿನ ಸೋಮ್ಲಾಪುರ ಹಾಗೂ ಕಾಶಿಪುರ ಸುತ್ತಮುತ್ತ ಶನಿವಾರ ಮುಂಜಾನೆ ಆನೆ ಓಡಾಟ ನಡೆಸಿದೆ. ಈ ನಡುವೆ, ಇದ್ಯಾವುದನ್ನೂ ಅರಿಯದ ಮಂಜುಳಾ (42) ಮತ್ತು ಮಗಳು ಕವನಾ (17) ಬೆಳಬೆಳಗ್ಗೆ ಜಮೀನಿಗೆ ಹೋಗಿದ್ದರು. ಜಮೀನಿನಲ್ಲಿ ಅವರೆಕಾಯಿ ಬಿಡಿಸುವಾಗ ಏಕಾಏಕಿ ಹಿಂದಿನಿಂದ ದಾಳಿ ಮಾಡಿದೆ.

ಗಂಭೀರವಾಗಿ ಗಾಯಗೊಂಡ ಕವನಾಳನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲೇ ಆಕೆ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡ ತಾಯಿ ಮಂಜುಳಾ ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಕಾಶಿಪುರ, ಸೋಮ್ಲಾಪುರ, ಸೂಳೆಕೆರೆ ಸುತ್ತಮುತ್ತಲು ಓಡಾಡುತ್ತಿರುವ ಆನೆಯಿಂದಾಗಿ ಹತ್ತಾರು ಗ್ರಾಮಗಳಲ್ಲಿ ಆತಂಕ ಉಂಟಾಗಿದೆ. ಯಾರೂ ಕೂಡ ಒಂಟಿಯಾಗಿ ಓಡಾಡಬಾರದು ಎಂದು ಅರಣ್ಯ ಇಲಾಖೆಯಿಂದ‌ ಜನರಿಗೆ ಎಚ್ಚರಿಕೆ ಸಂದೇಶವೂ ಬಂದಿದೆ. ಇಲ್ಲಿನ ತೋಟಗಳಲ್ಲಿ , ಕೆರೆಗಳ ಪ್ರದೇಶದಲ್ಲಿ ಓಡಾಡುತ್ತಿರುವ ಆನೆಯನ್ನು ಕಾಡಿಗಟ್ಟುವ ಪ್ರಯತ್ನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರತರಾಗಿದ್ದಾರೆ.

ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿ ಆನೆ ಬಂದಿದ್ದು, ಪೊಲೀಸರು ಕೂಡಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ. ಆನೆಯನ್ನು ನೋಡಲು ಬರುವ ಜನರನ್ನು ತಡೆಗಟ್ಟುವುದೇ ಅವರಿಗೆ ದೊಡ್ಡ ಸವಾಲಾಗಿದೆ.

ಆರಂಭದಲ್ಲಿ ತೋಟ ಮತ್ತು ಕೆರೆಯ ಭಾಗಗಳಲ್ಲಿ ಕಾಣಿಸಿಕೊಂಡಿದ್ದ ಆನೆ ಬಳಿಕ ಜನವಸತಿ ಭಾಗದತ್ತಲೂ ಬಂದಿರುವುದು ಆತಂಕವನ್ನು ಹೆಚ್ಚಿಸಿದೆ. ಇದೀಗ ಅದನ್ನು ಹಿಡಿಯುವ ಇಲ್ಲವೇ ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆ. ಆನೆ ಕೂಡಾ ಭಯಗೊಂಡಂತಿದ್ದು, ಇನ್ನೇನೇನು ಅನಾಹುತ ಮಾಡಲಿದೆಯೋ ಎಂದು ಜನರು ಭಯಗೊಂಡಿದ್ದಾರೆ.

ಇದನ್ನೂ ಓದಿ : The Elephant Whisperers: ಆಸ್ಕರ್ ಪ್ರಶಸ್ತಿ ವಿಜೇತ ಬೊಮ್ಮನ್-ಬೆಳ್ಳಿ ಆರೈಕೆ ಮಾಡುತ್ತಿದ್ದ ಆನೆ ಮರಿ ಅನಾರೋಗ್ಯದಿಂದ ಸಾವು

Exit mobile version