Site icon Vistara News

Elephant attack | ಮೂಡಿಗೆರೆಯಲ್ಲಿ ಸೆರೆಸಿಕ್ಕ ಮತ್ತೊಂದು ಕಾಡಾನೆ; ಉಳಿದಿದ್ದು ಇನ್ನೊಂದೇ ಪುಂಡಾನೆ

chikkamagaluru mudigere elephant operation

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕು ಸೇರಿದಂತೆ ಹಲವು ಕಡೆ ಕಾಡಾನೆಗಳ ಉಪಟಳ, ದಾಳಿ (Elephant attack) ಹೆಚ್ಚಾಗಿದ್ದರಿಂದ ಸರ್ಕಾರದ ಆದೇಶದ ಮೇರೆಗೆ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಸೆರೆ ಕಾರ್ಯಾಚರಣೆಗೆ ಮತ್ತೊಂದು ಯಶಸ್ಸು ಸಿಕ್ಕಿದ್ದು, ಮೂಡಿಗೆರೆಯಲ್ಲಿ ಮತ್ತೊಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ.

chikkamagaluru mudigere elephant operation

ಮೂಡಿಗೆರೆ ತಾಲೂಕಿನ ತಳವಾರ ಗ್ರಾಮದಲ್ಲಿ ಕಾಡಾನೆ ಸೆರೆಯಾಗಿದೆ. ಕಳೆದ ಮೂರು ತಿಂಗಳಲ್ಲಿ ಕಾಡಾನೆಗಳು ಮೂವರನ್ನು ಬಲಿ ತೆಗೆದುಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಕ್ರೋಶ ತೀವ್ರಗೊಂಡಿತ್ತು. ಉಪಟಳ ನೀಡುತ್ತಿದ್ದ ಮೂರು ಕಾಡಾನೆಗಳನ್ನು ಸೆರೆಹಿಡಿಯಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಹೀಗಾಗಿ ಐದು ದಿನಗಳ ಹಿಂದೆ ಆರಂಭವಾಗಿದ್ದ ಆಪರೇಶನ್‌ ಎಲಿಫೆಂಟ್‌ ಕಾರ್ಯಾಚರಣೆ ವೇಳೆ ಕುಂಡ್ರ ಗ್ರಾಮದಲ್ಲಿ ಮೊದಲ ದಿನವೇ ಪುಂಡಾನೆಯೊಂದನ್ನು ಆನೆ ಸೆರೆ ಹಿಡಿಯಲಾಗಿತ್ತು.

ಅರಣ್ಯ ಇಲಾಖೆ ಸಿಬ್ಬಂದಿ ಈ ಕಾರ್ಯಾಚರಣೆಗೆ ೬ ಸಾಕಾನೆಗಳನ್ನು ಬಳಸಿಕೊಂಡಿದ್ದು, ಕಾಡಿನ ಪ್ರದೇಶಗಳಲ್ಲಿ ಸತತವಾಗಿ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ. ಸದ್ಯ ಮೂರು ಪುಂಡಾನೆಗಳಲ್ಲಿ ಎರಡು ಸೆರೆಸಿಕ್ಕ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಇನ್ನೊಂದು ಪುಂಡಾನೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.

ಇದನ್ನೂ ಓದಿ | CT Ravi | ಸಿದ್ರಾಮುಲ್ಲಾ ಹೇಳಿಕೆಗೆ ಕಾಂಗ್ರೆಸ್‌ ಕೆಂಡ, ಸಿ.ಟಿ.ರವಿ ಮನೆಗೆ ಮುತ್ತಿಗೆ ಯತ್ನ; ತಾಕತ್ತಿದ್ದರೆ ರಸ್ತೆ ದಾಟಿ ಎಂದ ಬಿಜೆಪಿ

chikkamagaluru mudigere elephant operation

ಮೂಡಿಗೆರೆಯಿಂದ ಬಂದಿರುವ ೬ ಸಾಕಾನೆ
ಕಾರ್ಯಾಚರಣೆಗಾಗಿ ಭಾನುವಾರ (ನವೆಂಬರ್‌ ೨೭) ರಾತ್ರಿ ಮೂಡಿಗೆರೆಯ ಕುಂದೂರಿಗೆ 6 ಸಾಕಾನೆಗಳು ಬಂದಿದ್ದವು. ಅಭಿಮನ್ಯು, ಮಹಾರಾಷ್ಟ್ರದ ಭೀಮ, ಕರ್ನಾಟಕದ ಭೀಮ, ಮಹೇಂದ್ರ, ಪ್ರಶಾಂತ್, ಅಜೇಯ ಹೆಸರಿನ ಆರು ಆನೆಗಳು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ.

ಏಕೆ ಈ ಕಾರ್ಯಾಚರಣೆ?
ನವೆಂಬರ್‌ ೨೦ರಂದು ಮೂಡಿಗೆರೆಯ ಹುಲ್ಲೇಮನೆ ಗ್ರಾಮದಲ್ಲಿ ಶೋಭಾ ಎಂಬ ಮಹಿಳೆ ಮೇಲೆ ದಾಳಿ ನಡೆಸಿ ಬಲಿ ಪಡೆದಿತ್ತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಚೆಕ್ ಪೋಸ್ಟ್‌ ಅನ್ನು ಧ್ವಂಸ ಮಾಡಿ ಆಕ್ರೋಶವನ್ನು ಹೊರಹಾಕಿದ್ದರು. ಇದೇ ವೇಳೆ ಸ್ಥಳಕ್ಕೆ ತಡವಾಗಿ ಭೇಟಿ ನೀಡಿದ್ದ ಸ್ಥಳೀಯ ಶಾಸಕ ಎಂ.ಪಿ ಕುಮಾರಸ್ವಾಮಿ ಮೇಲೆ ಹಲ್ಲೆ ನಡೆಸಿದ ಆರೋಪದ ಸುದ್ದಿ ಸಹ ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಆನೆ ಸೆರೆ ಕಾರ್ಯಾಚರಣೆಗೆ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿತ್ತು.

ಮೂರು ತಿಂಗಳಲ್ಲಿ ಮೂರು ಬಲಿ
ಕಳೆದ ಆಗಸ್ಟ್ 15ರಂದು ಮೂಡಿಗೆರೆ ತಾಲೂಕಿನ ಪಲ್ಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಗೋಡು ಗ್ರಾಮದ ಆನಂದ್ ದೇವಾಡಿಗ ಎಂಬುವವರನ್ನು ಕಾಡಾನೆಯೊಂದು ತುಳಿದು ಸಾಯಿಸಿತ್ತು. ಊರುಬಗೆ ಗ್ರಾಮದ ನಿವಾಸಿ ಅರ್ಜುನ್ ಎಂಬುವವರನ್ನು ಕಾಡಾನೆ ದಾಳಿ ನಡೆಸಿ ಬಲಿ ಪಡೆದಿತ್ತು. ಒಟ್ಟು ಮೂರು ತಿಂಗಳಲ್ಲಿ ಮೂರು ಬಲಿ ಪಡೆಯುವ ಮೂಲಕ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿರುವ ಆನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿತ್ತು. ಈಗ ಮೂರು ಆನೆಯಲ್ಲಿ ಎರಡು ಸೆರೆ ಸಿಕ್ಕಂತೆ ಆಗಿದೆ.

ಇದನ್ನೂ ಓದಿ | CT Ravi v/s Siddaramaiah | ಸಿದ್ರಾಮುಲ್ಲಾ ಖಾನ್‌ ಹೇಳಿಕೆ ಸರಿ: ಸಿ.ಟಿ. ರವಿ ಬೆಂಬಲಕ್ಕೆ ನಿಂತ ಅಶ್ವತ್ಥನಾರಾಯಣ

Exit mobile version