ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಗ್ರಾಮದಲ್ಲಿ ದಾಂಧಲೆ ನಡೆಸಿ ಯುವತಿಯೊಬ್ಬಳನ್ನು ಕೊಂದು ಹಾಕಿದ ಆನೆಯನ್ನು (Elephant attack) ಸೆರೆ ಹಿಡಿಯಲು ಅರಣ್ಯ ಇಲಾಖೆ ಶತಪ್ರಯತ್ನ ನಡೆಸಿದೆ. ಈ ನಡುವೆ, ಆನೆಗೆ ಅರಿವಳಿಕೆ ಔಷಧ ನೀಡಲು ಹತ್ತಿರ ಹೋದ ವೈದ್ಯರನ್ನೇ ಅದು ಸೊಂಡಿಲಿನಿಂದ ಎತ್ತಿ ಎಸೆದಿದೆ. ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚನ್ನಗಿರಿ ತಾಲೂಕಿನ ಸೋಮ್ಲಾಪುರ ಹಾಗೂ ಕಾಶಿಪುರ ಸುತ್ತಮುತ್ತ ಶನಿವಾರ (ಮಾರ್ಚ್ 8) ಮುಂಜಾನೆ ಆನೆ ಓಡಾಟ ನಡೆಸಿದೆ. ಈ ನಡುವೆ, ಇದ್ಯಾವುದನ್ನೂ ಅರಿಯದ ಮಂಜುಳಾ (42) ಮತ್ತು ಮಗಳು ಕವನಾ (17) ಬೆಳಬೆಳಗ್ಗೆ ಜಮೀನಿಗೆ ಹೋಗಿದ್ದರು. ಜಮೀನಿನಲ್ಲಿ ಅವರೆಕಾಯಿ ಬಿಡಿಸುವಾಗ ಏಕಾಏಕಿ ಹಿಂದಿನಿಂದ ದಾಳಿ ಮಾಡಿ ಕವನಾಳನ್ನು ಕೊಂದು ಹಾಕಿತ್ತು.
ಅಂದು ದಿಕ್ಕು ತಪ್ಪಿ ನಾಡಿಗೆ ಬಂದು ದಿಕ್ಕಾಪಾಲಾಗಿ ಓಡುತ್ತಿದ್ದ ಈ ಕಾಡಾನೆ ಚನ್ನಗಿರಿಯ ಸೂಳೆಬಾವಿ ಪರಿಸರದಿಂದ ದಿಕ್ಕೆಟ್ಟು ಓಡುತ್ತಾ ನ್ಯಾಮತಿ ತಾಲುಕಿನ ಜೀನಹಳ್ಳಿ ಪರಿಸರದಲ್ಲಿ ಕಾಣಿಸಿಕೊಂಡಿತ್ತು. ಇದೀಗ ಇಲ್ಲಿ ಆನೆಯನ್ನು ಅರಿವಳಿಕೆ ಮೂಲಕ ದಿಗ್ಬಂಧಿಸಿ ಇಡಲಾಗಿದೆ.
ಮಂಗಳವಾರ ಮುಂಜಾನೆ ಈ ಆನೆ ಜೀನಹಳ್ಳಿಯಲ್ಲಿ ಪತ್ತೆಯಾಗಿದ್ದನ್ನು ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕೂಡಲೇ ಸಕ್ರೆಬೈಲು ಆನೆ ಬಿಡಾರದ ಹಿರಿಯ ವೈದ್ಯಾಧಿಕಾರಿ ಡಾ. ವಿನಯ್ ಅವರು ಸಿಬ್ಬಂದಿ ಸಮೇತವಾಗಿ ಅಲ್ಲಿಗೆ ಧಾವಿಸಿದರು. ದೂರದಿಂದಲೇ ಅರಿವಳಿಕೆ ಔಷಧವನ್ನು ಆನೆಗೆ ಹೊಡೆಯಲಾಯಿತು. ಸಾಮಾನ್ಯವಾಗಿ ಒಂದೆರಡು ಸುತ್ತಿನ ಅರಿವಳಿಕೆ ಔಷಧದಲ್ಲಿ ಆನೆ ಪ್ರಜ್ಞೆ ತಪ್ಪಿ ಬೀಳುತ್ತದೆ. ಆದರೆ, ಇಲ್ಲಿ ಆನೆ ಇನ್ನೂ ನಿಂತೇ ಇತ್ತು. ಹೀಗಾಗಿ ಅದರ ಹತ್ತಿರಕ್ಕೆ ಹೋಗಿ ಇನ್ನೊಂದು ಡೋಸ್ ಔಷಧ ನೀಡಲು ಡಾ. ವಿನಯ್ ಮುಂದಾಗಿದ್ದರು. ಆನೆ ಶಕ್ತಿ ಕಳೆದುಕೊಂಡಿದೆ ಎಂದು ಭಾವಿಸಿದ ಡಾ. ವಿನಯ್ ಅವರು ಇನ್ನೊಂದು ಸುತ್ತು ಅರಿವಳಿಕೆ ಕೊಡಲು ಮುಂದಾಗುತ್ತಿದ್ದಂತೆಯೇ ಸಿಟ್ಟಿಗೆದ್ದ ಆನೆ ಸೊಡಿಲಿನಿಂದ ಅವರಿಗೆ ಬಡಿದಿದೆ. ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ.
ಎರಡು ಕಡೆಯಿಂದ ಸಾಕಾನೆಗಳ ಆಗಮನ
ಚನ್ನಗಿರಿಯಲ್ಲಿ ಯುವತಿಯನ್ನು ಕೊಂದಿದ್ದ ಆನೆಯನ್ನು ಹಿಡಿಯಲು ಸಕ್ರೆಬೈಲು ಆನೆ ಬಿಡಾರದಿಂದ ಸಾಗರ, ಬಾಲಣ್ಣ, ಹಾಗೂ ಬಹದ್ದೂರ್ ಎಂಬ ಆನೆಗಳನ್ನು ತರಿಸಲಾಗಿತ್ತು. ಇನ್ನೊಂದೆಡೆ ನಾಗರಹೊಳೆಯಿಂದ ಅಭಿಮನ್ಯು, ಭೀಮ ಮತ್ತು ಮಹೇಂದ್ರ ಆನೆಗಳನ್ನು ಕರೆಸಲಾಗಿತ್ತು.
ಸಾಕಾನೆಗಳು ಆರಂಭದಲ್ಲಿ ಚನ್ನಗಿರಿಯ ಸೂಳೆಕೆರೆ ಪರಿಸರದಲ್ಲಿ ಹುಡುಕಾಟ ಮಾಡಿದ್ದವು. ಆದರೆ, ಅಷ್ಟು ಹೊತ್ತಿಗೆ ಈ ಕಾಡಾನೆ ನ್ಯಾಮತಿ ಪ್ರದೇಶಕ್ಕೆ ಹೋಗಿ ಆಗಿತ್ತು. ಇದೀಗ ಆನೆಗಳನ್ನು ನ್ಯಾಮತಿ ಭಾಗಕ್ಕೆ ಕರೆತರಬೇಕಾಗಿದೆ.
ಈ ನಡುವೆ, ನ್ಯಾಮತಿಯಲ್ಲಿ ಆನೆ ಕಾಣಿಸಿಕೊಂಡಾಗ ಅರಣ್ಯಾಧಿಕಾರಿಗಳು ಅಲ್ಲಿಗೆ ಧಾವಿಸಿದ್ದರು. ಡಾ. ವಿನಯ್ ಅವರು ಅರಿವಳಿಕೆ ನೀಡಿದರೂ ಆನೆ ಏನೂ ಆಗದಂತೆ ನಿಂತಿತ್ತು. ಅದನ್ನು ಹತ್ತಿರದಿಂದ ಗಮನಿಸಿ ಸೂಕ್ತ ಜಾಗಕ್ಕೆ ಇನ್ನೊಂದು ಸುತ್ತು ಅರಿವಳಿಕೆ ನೀಡಲು ಅವರು ಮುಂದಾಗಿದ್ದರು. ಆ ಸೊಂಡಿಲಿನಿಂದ ಹೊಡೆದಿದೆ.
ಇದೀಗ ಆನೆ ನಿಯಂತ್ರಣವನ್ನು ಕಳೆದುಕೊಳ್ಳುವ ಹಂತ ಬಂದಿದ್ದು, ಸಾಕಾನೆಗಳು ಬಂದ ಬಳಿಕ ಅದನ್ನು ಸಾಗಾಟ ಮಾಡುವ ಸಾಧ್ಯತೆಗಳಿವೆ.
ಇದನ್ನೂ ಓದಿ : Elephant attack : ಚನ್ನಗಿರಿಯಲ್ಲಿ ಮುಂಜಾನೆಯೇ ಆನೆ ದಾಂಧಲೆಗೆ ಯುವತಿ ಬಲಿ; ಅವರೆ ಬಿಡಿಸುತ್ತಿದ್ದಾಗ ಹಿಂದಿನಿಂದ ಬಂದು ದಾಳಿ