ದಾವಣಗೆರೆ/ಮಡಿಕೇರಿ: ದಾವಣಗೆರೆ ಮತ್ತು ಕೊಡಗು ಜಿಲ್ಲೆಯಲ್ಲಿ ಮುಂಜಾನೆಯೇ ಆನೆಯ ದಾದಾಗಿರಿ ಸುದ್ದಿ ಮಾಡಿದೆ. ಚನ್ನಗಿರಿಯಲ್ಲಿ ಇಬ್ಬರಿಗೆ ಗಾಯ ಮಾಡಿದ್ದರೆ ಕೊಡಗಿನಲ್ಲಿ ಸ್ವಿಫ್ಟ್ ಮತ್ತು ಸ್ಯಾಂಟ್ರೋ ಕಾರಿಗೆ ಹಾನಿ ಮಾಡಿದೆ.
ಚನ್ನಗಿರಿ ತಾಲೂಕಿನ ಸೋಮ್ಲಾಪುರ ಹಾಗೂ ಕಾಶಿಪುರ ಸುತ್ತಮುತ್ತ ಶನಿವಾರ ಮುಂಜಾನೆ ಆನೆ ಓಡಾಟ ನಡೆಸಿದೆ. ಕಾಡಿನಿಂದ ನಾಡಿಗೆ ಬಂದ ಒಂಟಿ ಆನೆಯ ಓಡಾಟ ಅರಿಯದೆ ಓಡಾಡಿದ ಇಬ್ಬರು ಆನೆಯನ್ನು ಕಂಡು ಓಡಿದ ಪರಿಣಾಮ ಬಿದ್ದು ಗಾಯ ಮಾಡಿಕೊಂಡಿದ್ದಾರೆ.
ಬೆಳಗಿನ ಜಾವ 6 ಗಂಟೆ ಸುಮಾರಿಗೆ ಕಾಣಿಸಿಕೊಂಡ ಆನೆ ಎಲ್ಲರಲ್ಲೂ ಭಯ ಹುಟ್ಟಿಸಿದೆ. ಓರ್ವ ಮಹಿಳೆ ಹಾಗೂ ದಾವುಜ್ ನಾಯ್ಕ್ ಎನ್ನುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಕಾಶಿಪುರ, ಸೋಮ್ಲಾಪುರ, ಸೂಳೆಕೆರೆ ಸುತ್ತಮುತ್ತಲು ಓಡಾಡುತ್ತಿರುವ ಆನೆಯಿಂದಾಗಿ ಹತ್ತಾರು ಗ್ರಾಮಗಳಲ್ಲಿ ಆತಂಕ ಉಂಟಾಗಿದೆ. ಯಾರೂ ಕೂಡ ಒಂಟಿಯಾಗಿ ಓಡಾಡಬಾರದು ಎಂದು ಅರಣ್ಯ ಇಲಾಖೆಯಿಂದ ಜನರಿಗೆ ಎಚ್ಚರಿಕೆ ಸಂದೇಶವೂ ಬಂದಿದೆ. ಇಲ್ಲಿನ ತೋಟಗಳಲ್ಲಿ , ಕೆರೆಗಳ ಪ್ರದೇಶದಲ್ಲಿ ಓಡಾಡುತ್ತಿರುವ ಆನೆಯನ್ನು ಕಾಡಿಗಟ್ಟುವ ಪ್ರಯತ್ನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರತರಾಗಿದ್ದಾರೆ.
ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿ ಆನೆ ಬಂದಿದ್ದು, ಪೊಲೀಸರು ಕೂಡಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ. ಆನೆಯನ್ನು ನೋಡಲು ಬರುವ ಜನರನ್ನು ತಡೆಗಟ್ಟುವುದೇ ಅವರಿಗೆ ದೊಡ್ಡ ಸವಾಲಾಗಿದೆ.
ನಿಲ್ಲಿಸಿದ ಕಾರಿನ ಮೇಲೆ ಕಾಡಾನೆಯ ದರ್ಪ!
ಕೊಡಗಿನಲ್ಲಿ ಕೂಡಾ ಆನೆ ಮತ್ತು ಮಾನವನ ಸಂಘರ್ಷ ಮುಂದುವರಿದಿದೆ. ನಿಲ್ಲಿಸಿದ ಕಾರಿನ ಮೇಲೆ ಕಾಡಾನೆಯ ದರ್ಪ ಜನರಿಗೆ ಭಯ ಹುಟ್ಟಿಸಿದೆ.
ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯಲ್ಲಿ ಸ್ವಿಫ್ಟ್ ಮತ್ತು ಸ್ಯಾಂಟ್ರೋ ಕಾರಿನ ಮೇಲೆ ದಾಳಿ ನಡೆಸಿದ ಪುಂಡಾನೆ ಸ್ವಿಫ್ಟ್ ಕಾರನ್ನು ಹೆದ್ದಾರಿಯವರೆಗೂ ತಳ್ಳಿಕೊಂಡು ಬಂದಿದೆ.
ಇಂದು ಬೆಳಗಿನ ಜಾವ 4:30ರ ಸಮಯಕ್ಕೆ ದಾಳಿ ನಡೆಸಿದ ಕಾಡಾನೆ ಮತ್ತೆಲ್ಲಿ ಹೋಗಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ :Elephant attack: ನೀಲಗಿರಿ ತೋಪಿನಲ್ಲಿ ಅಡ್ಡಾಡಿದ ಕಾಡಾನೆ; ತೋಟಗಳಿಗೆ ನುಗ್ಗಿ ಬೆಳೆ ಹಾನಿ