ಮೈಸೂರು: ಮೈಸೂರಿನಲ್ಲಿ ಕಾಡಾನೆ ದಾಳಿಗೆ (Elephant attack) ರೈತನೊಬ್ಬ ಬಲಿಯಾಗಿದ್ದಾನೆ. ಸರಗೂರು ತಾಲೂಕಿನ ಚನ್ನಗುಂಡಿ ಹಾಡಿಯಲ್ಲಿ ಘಟನೆ ನಡೆದಿದ್ದು, ಗ್ರಾಮದ ಮಹೇಂದ್ರ (45) ಮೃತರು.
ಮಹೇಂದ್ರ ಬೆಳಗ್ಗೆ ಎಂದಿನಂತೆ ಜಮೀನಿಗೆ ತೆರಳಿದ್ದಾರೆ. ಈ ವೇಳೆ ಕಾಡಾನೆ ಹಠಾತ್ ದಾಳಿ ಮಾಡಿದೆ. ಕಾಡಾನೆಯಿಂದ ತಪ್ಪಿಸಿಕೊಳ್ಳಲು ಆಗದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸರಗೂರು ಠಾಣೆ ಇನ್ಸ್‌ಪೆಕ್ಟರ್ ನಂದೀಶ್ ಕುಮಾರ್ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ಘಟನೆ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂತಲ್ಲೇ ಕುಳಿತ ಚಿರತೆ
ಮೈಸೂರಿನ ನಾಗರಹೊಳೆ ಅಭಯಾರಣ್ಯದಲ್ಲಿ ಚಿರತೆಯೊಂದು ದರ್ಶನ ನೀಡಿದೆ. ಕಾಕನಕೋಟೆ ಅಭಯಾರಣ್ಯದಲ್ಲಿ ಕಾಣಿಸಿಕೊಂಡ ಚಿರತೆಯು ಒಂದು ಗಂಟೆ ಕಾಲ ಕೂತಲ್ಲೇ ಕುಳಿತಿತ್ತು. ಸಫಾರಿಗೆ ಹೋದವರು ಖುಷಿಯಾಗಿ ಕೆಲವರು ಫೋಟೊ ಕ್ಲಿಕ್ಕಿಸಿದರೆ, ಉಳಿದವರು ವಿಡಿಯೊ ಮಾಡುತ್ತಾ ಕಣ್ತುಂಬಿಕೊಂಡರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ