ರಾಮನಗರ: ತೋಟಕ್ಕೆ ನೀರು ಬಿಡಲು ತೆರಳಿದ್ದ ರೈತನ ಮೇಲೆ ಆನೆ ದಾಳಿ (Elephant Attack) ಮಾಡಿದೆ. ಆನೆ ತುಳಿತಕ್ಕೆ ತಿಮ್ಮಪ್ಪ (64) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಮನಗರ (Ramanagar news) ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಹಳ್ಳಿಕೆರೆ ಗ್ರಾಮದ ಮಾವತೂರು ದಾಕ್ಲೆ ಎಂಬಲ್ಲಿ ಈ ಘಟನೆ ನಡೆದಿದೆ.
ಬೆಳಗಿನ ಜಾವ 3 ಗಂಟೆಗೆ ತಿಮ್ಮಪ್ಪ ತೋಟಕ್ಕೆ ತೆರಳಿದ್ದಾರೆ. ನೀರು ಬಿಡಲು ಮುಂದಾಗಿದ್ದು ಈ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಕಾಡಾನೆಯಿಂದ ತಪ್ಪಿಸಿಕೊಳ್ಳಲು ಆಗದೇ ಜೀವ ಬಿಟ್ಟಿದ್ದಾರೆ. ತಿಮ್ಮಪ್ಪ ಬೆಳಗಾದರೂ ಮನೆಗೆ ಬಾರದೇ ಇದ್ದಾಗ ಅನುಮಾನಗೊಂಡು ತೋಟಕ್ಕೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮೃತ ತಿಮ್ಮಪ್ಪನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Murder Case : ಮಗುವಿನ ಕಿರಿಕಿರಿಗೆ ಹಸಿ ಬಾಣಂತಿಯನ್ನೇ ಕೊಂದ ದುಷ್ಟ ಪತಿ
ಪರಿಹಾರ ನೀಡುವಂತೆ ಡಿಸಿಎಂ ಸೂಚನೆ
ಆನೆ ದಾಳಿಗೆ ರೈತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್, ಅರಣ್ಯಾಧಿಕಾರಿಗೆ ಕರೆ ಮಾಡಿ ಮಾಹಿತಿ ಪಡೆದರು. ರೈಲ್ವೆ ಬ್ಯಾರಿಕೇಟ್ ಹಾಕಿಕೊಂಡುವಂತೆ ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದಾಗ ಕೂಡಲೇ ಆ ಕೆಲಸವನ್ನು ಪೂರ್ಣಗೊಳಿಸುವಂತೆ ಸೂಚಿಸಿದರು. ಒಂಟಿ ಸಲಗದಿಂದ ಈ ದಾಳಿ ನಡೆದಿದೆ ಎಂದಾಗ, ಅದನ್ನೂ ಕಂಟ್ರೋಲ್ ಮಾಡುವುದು ತುಂಬ ಕಷ್ಟ. ಕೂಡಲೇ ಮೃತ ಕುಟುಬಸ್ಥರಿಗೆ ಪರಿಹಾರ ನೀಡಿ ಎಂದು ಡಿ.ಕೆ. ಶಿವಕುಮಾರ್ ಸೂಚನೆ ನೀಡಿದರು.
ನೀರು ಹರಿಸಲು ಮಧ್ಯರಾತ್ರಿಯೇ ಗತಿ
ಆನೆ ಕಾಟ ಇರುವುದು ತಿಳಿದಿದ್ದರೂ ನೀರು ಬಿಡಲು ತಿಮ್ಮಪ್ಪ ತೆರಳಿದ್ದರು. ತ್ರಿಫೇಸ್ ಕರೆಂಟ್ ಆ ಹೊತ್ತಲ್ಲಿ ಇರುವುದರಿಂದ ತೋಟಕ್ಕೆ ನೀರು ಹರಿಸಬೇಕಾದರೆ ಮಧ್ಯೆ ರಾತ್ರಿಯೇ ತೆರಳಬೇಕು. ಹಗಲಿನಲ್ಲಿ ಅಷ್ಟು ಕಾಲ ತ್ರಿಫೇಸ್ ಪವರ್ ಇರದ ಕಾರಣ ಜೀವದ ಹಂಗು ತೊರೆದು ತೆರಳಿದ್ದರು.
ಸ್ಥಳಕ್ಕೆ ಭೇಟಿ ಕೊಟ್ಟ ಅರಣ್ಯಾಧಿಕಾರಿಗ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಸತ್ತ ಮೇಲೆ ನೀವೆಲ್ಲ ಬಂದು ಮಾಡುವುದು ಏನಿದೆ ಎಂದು ಪ್ರಶ್ನೆ ಮಾಡಿದರು. ಕಾಡಾನೆ ಸೆರೆಗೆ ಆಗಬೇಕು, ಜತೆಗೆ ರೈಲ್ವೇ ಬ್ಯಾರಿಗೇಟ್ ಅಳವಡಿಸಬೇಕು. ಮೃತ ಕುಟುಂಬಸ್ಥರ ಒಬ್ಬರಿಗೆ ಇಲಾಖೆಯಲ್ಲಿ ಕೆಲಸವನ್ನು ಕೊಡಿಸಬೇಕೆಂದು ಪಟ್ಟು ಹಿಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ