Site icon Vistara News

Elephant attack | ಕಾಡಾನೆ ತುಳಿತಕ್ಕೆ ಅರಣ್ಯ ಇಲಾಖೆ ಕಾವಲುಗಾರ ಬಲಿ; ಇನ್ನೊಂದೆಡೆ ತೋಟ ನಾಶ

ಮೈಸೂರು/ಚಿಕ್ಕಮಗಳೂರು/ಹಾಸನ: ರಾಜ್ಯದ ಹಲವು ಕಡೆ ಕಾಡಾನೆಗಳ ದಾಳಿ ಹೆಚ್ಚುತ್ತಲಿದ್ದು, ಕಾಡಿನಿಂದ ನಾಡಿಗೆ ಬಂದು ಸಾವು-ನೋವುಗಳಿಗೆ ಕಾರಣವಾಗುತ್ತಿವೆ. ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುತ್ತಿವೆ. ಈಗ ಕಾಡಾನೆ ದಾಳಿಗೆ (Elephant attack) ಅರಣ್ಯ ಇಲಾಖೆಯ ರಾತ್ರಿ ಕಾವಲುಗಾರ ಮೃತಪಟ್ಟಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಮೇಟಿಕುಪ್ಪೆ ಅರಣ್ಯ ಪ್ರದೇಶದ ಸೊಳ್ಳಾಪುರದಲ್ಲಿ ನಡೆದಿದೆ. ಮಹದೇವಸ್ವಾಮಿ (36) ಮೃತ ದುರ್ದೈವಿ.

ಮಹದೇವಸ್ವಾಮಿ ಸುಮಾರು ಹತ್ತು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಹಂಗಾಮಿ ವಾಚರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಡರಾತ್ರಿ ಕಾವಲಿನಲ್ಲಿದ್ದಾಗ ಆನೆಯೊಂದು ದಾಳಿ ನಡೆಸಿದೆ. ಮತ್ತೊಬ್ಬ ವಾಚರ್ ರಾಜೇಶ್‌ ಎಂಬಾತ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಮಹದೇವಸ್ವಾಮಿ ಮೃತದೇಹವನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಸ್ಪತ್ರೆ ಆವರಣದಲ್ಲಿ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹಿಂಡು-ಹಿಂಡಾಗಿ ಬಂದು ಕೃಷಿ ಭೂಮಿ ದ್ವಂಸ ಮಾಡಿದ ಕಾಡಾನೆ
ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ನಂದಿಬಟ್ಲು ಗ್ರಾಮದಲ್ಲಿ ಗಜಪಡೆ ದಾಂಧಲೆಗೆ ನಾಲ್ಕು ಎಕರೆ ಅಡಿಕೆ, ಬಾಳೆ ತೋಟ ನಾಶವಾಗಿವೆ. ಕಾಡಾನೆ ದಾಳಿಯಿಂದ ಬೆಳೆ ಕಳೆದುಕೊಂಡ ರೈತರು ಕಂಗೆಟ್ಟು ಹೋಗಿದ್ದಾರೆ. ಕಾಡಾನೆಗಳು ಕೃಷಿ ಭೂಮಿಯತ್ತ ಆಗಮಿಸುತ್ತಿರುವುದಕ್ಕೆ ಅರಣ್ಯ ಇಲಾಖೆ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ. ತಣಿಗೆಬೈಲು ಭದ್ರಾ ವನ್ಯಜೀವಿ ವಿಭಾಗದ ಅಧಿಕಾರಿಗಳ ಭೇಟಿ ನೀಡಿದ್ದಾರೆ. ಬೆಳೆ ಕಳೆದುಕೊಂಡ ರೈತರು ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ನೀರಲ್ಲಿ ಕಾಡಾನೆಗೆ ಆಟ
ಹಾಸನದ ಆಲೂರು ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಹೊಳೆಯ ಹಿನ್ನೀರಿನಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿತ್ತು. ಆಳವಾದ ನೀರಿನಲ್ಲಿ ಸುಮಾರು ಹತ್ತುಕ್ಕೂ ಹೆಚ್ಚು ಕಾಡಾನೆಗಳು ಈಜಾಡಿವೆ. ಇದನ್ನು ಸ್ಥಳೀಯರು ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ | Coronavirus | ರೂಪಾಂತರಿ ಭೀತಿ; ಈ ದೇಶಗಳಿಂದ ಬರುವ ಪ್ರಯಾಣಿಕರಿಗೆ 7 ದಿನ ಕಡ್ಡಾಯ ಕ್ವಾರಂಟೈನ್‌

Exit mobile version