ಮಂಗಳೂರು: ಕಡಬ ತಾಲೂಕಿನ ಮರ್ದಾಳದಲ್ಲಿ ಸೋಮವಾರ ಮುಂಜಾನೆ ಇಬ್ಬರನ್ನು ಬಲಿ ಪಡೆದ ಕಾಡಾನೆಯನ್ನು ಸೆರೆ ಹಿಡಿಯುವ ಆಪರೇಷನ್ ಎಲಿಫೆಂಟ್ (Elephant attack) ಕಾರ್ಯಾಚರಣೆ ಮಂಗಳವಾರ ಆರಂಭಗೊಂಡಿದೆ. ದುಬಾರೆಯಿಂದ ಐದು ಸಾಕಾನೆಗಳನ್ನು ತರಿಸಿ ಪುಂಡ ಕಾಡಾನೆಯನ್ನು ಹಿಡಿಯುವ ಕೆಲಸ ಶುರುವಾಗಿದೆ.
ಸೋಮವಾರ ಮುಂಜಾನೆ ಪೇರಡ್ಕ ಹಾಲು ಸೊಸೈಟಿಯ ಸಿಬ್ಬಂದಿಯಾಗಿರುವ ರಂಜಿತಾ ಅವರು ಮನೆಯಿಂದ ಸೊಸೈಟಿಗೆ ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಇದೇ ವೇಳೆ ಸ್ಥಳದಲ್ಲಿದ್ದ ರಮೇಶ್ ರೈ ಎಂಬವರ ಮೇಲೂ ದಾಳಿ ಮಾಡಿದೆ. ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ರಂಜಿತಾ ನೆಲ್ಯಾಡಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು.
ಇದರಿಂದ ಆಕ್ರೋಶಿತರಾದ ಸ್ಥಳೀಯರು ಕೂಡಲೇ ಈ ಕಾಡಾನೆಯನ್ನು ಹಿಡಿದು ದೂರ ಒಯ್ಯಬೇಕು, ಅಲ್ಲಿಯವರೆಗೆ ಮೃತದೇಹವನ್ನು ತೆಗೆಯುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ಬಳಿಕ ಅಧಿಕಾರಿಗಳು ಕಾರ್ಯಾಚರಣೆ ನಡೆಸುವ ಭರವಸೆ ನೀಡಿದರು.
ಮುಂಜಾನೆಯಿಂದಲೇ ಕಾರ್ಯಾಚರಣೆ ಆರಂಭ
ಪುಂಡ ಕಾಡಾನೆಯನ್ನು ಸೆರೆ ಹಿಡಿಯಲು ಮಂಗಳವಾರ ಮುಂಜಾನೆಯಿಂದಲೇ ಅರಣ್ಯ ಇಲಾಖೆ ಸಿದ್ಧೆ ನಡೆಸಿದೆ. ನಾಗರಹೊಳೆ ಮತ್ತು ದುಬಾರೆ ಸಾಕಾನೆ ಶಿಬಿರದಿಂದ 5 ಆನೆಗಳು ಮುಂಜಾನೆಯೇ ನೈಲ ಸಮೀಪದ ಕಾಡಿಗೆ ಆಗಮಿಸಿವೆ. ಇವು ಕಾಡಾನೆ ಹಿಡಿಯುವುದರಲ್ಲಿ ಪಳಗಿರುವ ಆನೆಗಳಾಗಿವೆ.
ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್ ಹಾಗು ಮಹೇಂದ್ರ ಎಂಬ ಸಾಕಾನೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಇವುಗಳನ್ನು ಲಾರಿಗಳ ಮೂಲಕ ಕಡಬಕ್ಕೆ ತರಲಾಗಿದೆ. ಡ್ರೋನ್ ಬಳಸಿ ಕಾಡಾನೆಯ ಚಲನ ವಲನ ಪತ್ತೆ ಹಚ್ಚಿ ಸಾಕಾನೆಗಳ ಸಹಕಾರದಲ್ಲಿ ಕಾಡಾನೆ ಸೆರೆ ಹಿಡಿಯಲು ತಂತ್ರ ಹೆಣೆಯಲಾಗಿದೆ.
ನೂರಾರು ಅರಣ್ಯ ಅಧಿಕಾರಿಗಳು ಸಾಕಷ್ಟು ಸಿದ್ಧತೆಗಳೊಂದಿಗೆ ಬಂದಿದ್ದು, ಆನೆಗಳಿಗೆ ಪೂಜೆ ಮಾಡಿ ಕಾರ್ಯಾಚರಣೆ ಶುರು ಮಾಡಲಾಗಿದೆ.