ಚಿಕ್ಕಮಗಳೂರು/ಚಾಮರಾಜನಗರ: ಚಿಕ್ಕಮಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಾಡಾನೆ ದಾಳಿ ಪ್ರಕರಣಗಳು ಮುಂದುವರಿದಿವೆ. ಭಾನುವಾರ ನಡೆದ ವನ್ಯಮೃಗ- ಮಾನವ ಮುಖಾಮುಖಿಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್‌ನಲ್ಲಿ ರಸ್ತೆ ಬದಿ ಆಶ್ರಯ ಪಡೆದಿದ್ದವರ ಮೇಲೆ ಕಾಡಾನೆ ದಾಳಿ ಮಾಡಿದೆ. ಕೂಲಿ ಕೆಲಸಕ್ಕೆಂದು ಹಾಸನ ಜಿಲ್ಲೆ ಹಗರೆಯಿಂದ ಬಂದಿದ್ದ ದಂಪತಿ ರಾತ್ರಿ ಬಣಕಲ್‌ನ ಪಶು ಆಸ್ಪತ್ರೆ ಬಳಿ ಮಲಗಿದ್ದಾಗ ಕಾಡಾನೆ ದಾಳಿ ಮಾಡಿದೆ. ನಾಗವಲ್ಲಿ ಹಾಗು ಗಂಡುಗುಸೆ ಎಂಬವರಿಗೆ ಗಂಭೀರ ಗಾಯಗಳಾಗಿವೆ. ದಂಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಾಳುಗಳನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಡಾನೆ ಹಾವಳಿ ನಿಯಂತ್ರಣ ಮಾಡದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಚಾಮರಾಜನಗರದ ಬಿ.ಆರ್.ಟಿ. ಹುಲಿ ರಕ್ಷಿತಾರಣ್ಯದ ಬೈಲೂರು ವಲಯದಲ್ಲಿ ಕಾಡಾನೆ ತುಳಿದು ಅಂಧ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹನೂರು ತಾಲೋಕು ಕತ್ತೆಕಾಲು ಪೋಡು ಗ್ರಾಮದ ಮಾದೇಶ್(45) ಗಾಯಗೊಂಡ ವ್ಯಕ್ತಿ. ಆನೆ ದಾಳಿಯಿಂದ ಮಾದೇಶ್ ಅವರ ಕೈ ಕಾಲು ಮುರಿದಿವೆ. ಕಣ್ಣು ಕಾಣದೆ ದಿಕ್ಕುತಪ್ಪಿ ಅರಣ್ಯಪ್ರದೇಶದೊಳಗೆ ಹೊಕ್ಕಿದ್ದ ಮಾದೇಶನ ಮೇಲೆ ಆನೆ ದಾಳಿ ಮಾಡಿದೆ. ಗಾಯಗೊಂಡ ಮಾದೇಶರನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆಯಷ್ಟೇ ತರೀಕೆರೆ ತಾಲೂಕಿನ ರಾಗಿ ಬಸವನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ 65 ವರ್ಷದ ಈರಪ್ಪ ಎಂಬವರು ಕೊನೆಯುಸಿರೆಳೆದಿದ್ದ ಪ್ರಕರಣವೂ ವರದಿಯಾಗಿತ್ತು.
ಇದನ್ನೂ ಓದಿ | Elephant attack | ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ರೈತ ಬಲಿ