ರಾಮನಗರ/ಚಾಮರಾಜನಗರ: ಮಾನವ-ಕಾಡುಪ್ರಾಣಿಗಳ ಸಂಘರ್ಷ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಕಾಡಿನಿಂದ ಅನೇಕ ಪ್ರಾಣಿಗಳು ನಾಡಿನತ್ತ ಬರುತ್ತಿದ್ದು, ಜನ-ಜಾನುವಾರುಗಳ ಮೇಲೆ ದಾಳಿ ನಡೆಸಿ ಆತಂಕವನ್ನು ಹುಟ್ಟುಹಾಕುತ್ತಿವೆ. ಇತ್ತ ಗಜಪಡೆಗಳೂ ರಾಜ್ಯದ ಅಲ್ಲಲ್ಲಿ ದಾಳಿ (Elephant attack) ನಡೆಸುವ ಮೂಲಕ ಸಾಕಷ್ಟು ಬೆಳೆ ಹಾಗೂ ಪ್ರಾಣ ಹಾನಿಗಳಿಗೆ ಕಾರಣವಾಗುತ್ತಿವೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೆಟ್ಟದ ಮಾದಳ್ಳಿಯಲ್ಲಿ ಕಾಡಾನೆಯೊಂದು ರೈತರೊಬ್ಬರ ಮೇಲೆ ದಾಳಿ ನಡೆಸಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ದೇವರಾಜ್ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ.
ಸ್ಥಳೀಯರ ಸಹಾಯದಿಂದ ದೇವರಾಜ್‌ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ಆನೆಯು ಜಮೀನಿನಲ್ಲಿ ಬೀಡುಬಿಟ್ಟಿದ್ದು, ಅಕ್ಕಪಕ್ಕದ ಜಮೀನಿನ ರೈತರು ಕೆಲಸಕ್ಕೆ ಹೋಗಲು ಭಯಪಡುವಂತಾಗಿದೆ. ದಾಳಿ ವಿಚಾರ ತಿಳಿಸಿದರೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಚಾಮರಾಜನಗರ ತಾಲೂಕಿನ ಹೊನ್ನಹಳ್ಳಿ ಬಳಿ ಮರಿಗಳು ಸೇರಿ ೧೦ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷವಾಗಿವೆ. ಹರೀಶ್ ಎಂಬ ರೈತನಿಗೆ ಸೇರಿದ 500ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ನಾಶಪಡಿಸಿವೆ. ಹೊನ್ನಹಳ್ಳಿ, ವಡ್ಗಲ್‌ಪುರದ ಜಮೀನುಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವಂತೆ ರೈತರು ಆಗ್ರಹಿಸಿದ್ದಾರೆ.
ರಸ್ತೆ ತಡೆಹಿಡಿದು ರೈತರ ಪ್ರತಿಭಟನೆ
ರಾಮನಗರದ ಕನಕಪುರ ತಾಲೂಕಿನ ಶ್ರೀನಿವಾಸನಹಳ್ಳಿ ಸುತ್ತಮುತ್ತ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿವೆ. ಕಾಡು ಬಿಟ್ಟು ನಾಡಿಗೆ ಹಿಂಡು ಹಿಂಡಾಗಿ ಕಾಡಾನೆಗಳು ಬರುತ್ತಿದ್ದು, ಕಾಡಾನೆಗಳನ್ನು ಸೆರೆ ಹಿಡಿಯುವುದೇ ಅರಣ್ಯಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ತಡರಾತ್ರಿ ಗ್ರಾಮಕ್ಕೆ ಕಾಡಾನೆಗಳು ನುಗ್ಗಿದ್ದು, ಇವುಗಳ ಹಾವಳಿ ತಪ್ಪಿಸುವಂತೆ ಗ್ರಾಮಸ್ಥರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ಕನಕಪುರ-ಕೋಡಿಹಳ್ಳಿ ರಸ್ತೆ ಸಂಪೂರ್ಣ ಬಂದ್ ಮಾಡಿ ರೈತರು ಪ್ರತಿಭಟಿಸಿದರು. ಕಾಡಾನೆ ಹಾವಳಿ ತಪ್ಪಿಸುವಂತೆ ಅರಣ್ಯಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಬೆಳಗ್ಗೆ 7 ಗಂಟೆಯಿಂದ ರಸ್ತೆ ತಡೆದು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಿಂದ ಶಾಲಾ- ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಪರದಾಡಿದರು. ಸಮಸ್ಯೆ ಬಗೆಹರಿಯುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ | Elephant attack | ಕಾಡಾನೆ ತುಳಿತಕ್ಕೆ ಅರಣ್ಯ ಇಲಾಖೆ ಕಾವಲುಗಾರ ಬಲಿ; ಇನ್ನೊಂದೆಡೆ ತೋಟ ನಾಶ