Site icon Vistara News

Elephant Balarama : ಗಜರಾಜ ಬಲರಾಮನ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

Elephant Balarama: Prime Minister Narendra Modi condoles the death of Gajaraja Balarama

#image_title

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ (67) ಆನೆಯ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ತೀವ್ರ ಅನಾರೋಗ್ಯದಿಂದ ಆನೆ ಭಾನುವಾರ ಮೃತಪಟ್ಟಿತ್ತು. ಸೌಮ್ಯ ಸ್ವಭಾವದ ಆನೆ ಬಲರಾಮ ಇತ್ತೀಚೆಗೆ ಅಸ್ವಸ್ಥಗೊಂಡಿತ್ತು. ಆದರೆ, ವೈದ್ಯರ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದೆ.

ಕಳೆದ ಹಲವು ವರ್ಷಗಳಿಂದ ಗಜರಾಜ ಬಲರಾಮ ಐತಿಹಾಸಿಕ ದಸರಾ ಆಚರಣೆಯ ಪ್ರಮುಖ ಭಾಗವಾಗಿದ್ದ. ತಾಯಿ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಉತ್ಸವದಲ್ಲಿ ಹೊತ್ತು ಸಾಗುತ್ತಿದ್ದ ಬಲರಾಮ ಎಂದರೆ ಜನರಿಗೆ ಅತ್ಯಂತ ಪ್ರೀತಿ. ಬಲರಾಮನ ಅಗಲಿಕೆ ದುಃಖದ ಸಂಗತಿ ಎಂದು ಪ್ರಧಾನಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಲರಾಮನ ಬಾಯಿಯಲ್ಲಿ ಹುಣ್ಣಾಗಿದ್ದರಿಂದ ಆಹಾರ ಸೇವಿಸಲು ಹಾಗೂ ನೀರು‌ ಕುಡಿಯಲು ಆಗದೇ ಅಸ್ವಸ್ಥಗೊಂಡಿತ್ತು. ಹೀಗಾಗಿ ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬಲರಾಮ ಭಾನುವಾರ ಕೊನೆಯುಸಿರೆಳೆಯಿತು.

ಇದನ್ನೂ ಓದಿ : Balarama elephant | ದಸರಾ ಅಂಬಾರಿ ಹೊರುವ ಬಲರಾಮನಿಗೆ ಗುಂಡೇಟು, ಆರೋಪಿ ಬಂಧನ

ಸೌಮ್ಯ ಸ್ವಭಾವ, ಉದ್ದದ ದಂತ, ನೀಳ ಕಾಯ ಹೊಂದಿದ್ದ ಜಂಬೂ ಸವಾರಿಯ ಹಿರಿಯಣ್ಣ ಬಲರಾಮ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ. ಇದಕ್ಕೆ ಕಾಣಿಸುತ್ತಿದ್ದದ್ದು ಒಂದು ಕಣ್ಣು ಮಾತ್ರ. ಆದರೂ ಯಶಸ್ವಿಯಾಗಿ ಅಂಬಾರಿ ಹೊತ್ತು ಗಜಪಡೆ ನಾಯಕತ್ವ ವಹಿಸಿದ್ದ ಅಪರೂಪದ ಆನೆ ಇದಾಗಿದೆ.

ಬಲರಾಮನಿಗೆ ಕ್ಷಯ (ಟಿ.ಬಿ) ಇರಬಹುದು ಎಂದು ವೈದ್ಯರು ಶಂಕಿಸಿದ್ದರು. ಎಷ್ಟೇ ಪ್ರಯತ್ನಿಸಿದರೂ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಬಲರಾಮನನ್ನು ಬದುಕಿಸಲು ಸಾಧ್ಯವಾಗಿಲ್ಲ. ಈ ಆನೆಯ ಅಗಲಿಕೆಯಿಂದ ಭೀಮನಕಟ್ಟೆ ಆನೆ ಶಿಬಿರದ ಅಧಿಕಾರಿಗಳು ಮತ್ತು ಸಿಬ್ಬಂದಿ ತೀವ್ರ ದುಃಖತಪ್ತರಾಗಿದ್ದಾರೆ.

ಈ ಹಿಂದೆ‌ 2022ರ ಡಿಸೆಂಬರ್ ತಿಂಗಳಲ್ಲಿ ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರದ ಸಮೀಪದ ಜಮೀನಿಗೆ ಬಲರಾಮ ಹೋಗಿದ್ದಾಗ ಸುರೇಶ್‌ ಎಂಬಾತ ಗುಂಡು ಹೊಡೆದಿದ್ದ. ಈ ವೇಳೆ ಆನೆಯ ತೊಡೆ, ಕಾಲು ಸೇರಿ ವಿವಿಧೆಡೆ ಗುಂಡು ಹೊಕ್ಕಿ ಗಂಭೀರ ಗಾಯಗಳಾಗಿದ್ದವು. ಬಳಿಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶು ವೈದ್ಯಾಧಿಕಾರಿ ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಿದ್ದರು. ಅದಾದ ಬಳಿಕ ಬಲರಾಮ ಆನೆ ಚೇತರಿಸಿಕೊಂಡಿತ್ತು. ಗುಂಡು ಹಾರಿಸಿದ್ದ ಆರೋಪಿ ಸುರೇಶ್‌ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು.

ಬಲರಾಮ ಸಾವಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಬಲರಾಮನ ಸಾವು ನೋವು ತಂದಿದೆ: ಶಾಸಕ ದಿನೇಶ್‌ ಗೂಳಿಗೌಡ

ಮೈಸೂರು ದಸರಾ ಎಂದರೆ ನಮ್ಮ ನಾಡಿಗೆ ಹೆಮ್ಮೆ. ಈ ದಸರಾ ಮಹೋತ್ಸವದಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದು ಎಂದರೆ ಅಂಬಾರಿ ಆನೆ ಹಾಗೂ ಗಜಪಡೆಗಳ ಪಯಣವಾಗಿದೆ. ಇಂತಹ ವಿಶ್ವ ವಿಖ್ಯಾತ ಮೈಸೂರು ದಸರೆಯಲ್ಲಿ 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಭಾನುವಾರ ಕೊನೆಯುಸಿರೆಳೆದಿರುವುದು ನಿಜಕ್ಕೂ ದುಃಖಕರ ವಿಷಯವಾಗಿದೆ. ಇದು ನಮಗೆ ಅತೀವ ನೋವನ್ನು ತಂದಿದೆ ಎಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್‌ ಗೂಳಿಗೌಡ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

Exit mobile version