ಸುಳ್ಯ: ಮಾರ್ಚ್ 13ರಂದು (ಶುಕ್ರವಾರ) ಸುಳ್ಯದ ಅಜ್ಜಾವರದಲ್ಲಿ ಸನತ್ ರೈ ಎಂಬವರ ತೋಟದ ಕೆರೆಯಿಂದ ರಕ್ಷಿಸಲ್ಪಟ್ಟ ಆನೆಗಳ ಪೈಕಿ ಮರಿಯಾನೆಯೊಂದು ಈಗ ಕುಟುಂಬದ ಹಿರಿಯಾನೆಗಳ ಹಿಂಡು ಸೇರಲೊಪ್ಪದೆ ಮನುಷ್ಯರಿದ್ದ ಕಡೆಗೇ ಓಡಿ ಬರುತ್ತಿರುವುದು ಸಮಸ್ಯೆಯಾಗಿದೆ.
ಆಹಾರ ಹುಡುಕುತ್ತಾ ಬಂದ ಎರಡು ದೊಡ್ಡ ಕಾಡಾನೆಗಳು ಮತ್ತು ಎರಡು ಮರಿ ಆನೆಗಳು ಆಕಸ್ಮಿಕವಾಗಿ ತೋಟದ ಕೆರೆಗೆ ಬಿದ್ದಿದ್ದವು. ಇದರಲ್ಲಿ ಎರಡು ದೊಡ್ಡ ಕಾಡಾನೆಗಳು ಮತ್ತು ಒಂದು ಮರಿಯಾನೆ ಕಷ್ಟಪಟ್ಟು ಕೆರೆಯಿಂದ ಮೇಲೆ ಬಂದಿದೆ. ಆದರೆ, ಸಂಪೂರ್ಣ ಸುಸ್ತಾಗಿದ್ದ ಸುಮಾರು ಮೂರು ತಿಂಗಳ ಒಂದು ಗಂಡು ಮರಿಯಾನೆಯೊಂದು ಮೇಲೆ ಬರಲಾಗದೆ ಕುಸಿದು ಬೀಳುತ್ತಿತ್ತು. ಈ ಮರಿಯನ್ನು ಅರಣ್ಯ ಇಲಾಖೆಯವರು ಹಾಗೂ ಸ್ಥಳೀಯರು ಸೇರಿ ಕೆರೆಗಿಳಿದು ಮೇಲಕ್ಕೆ ದೂಡಿ ಹತ್ತಿಸಿದ್ದರು.
ಆದರೆ ಇದೀಗ ಆ ಮರಿ ತನ್ನ ತಂಡದೊಂದಿಗೆ ಸೇರಿಕೊಳ್ಳದೆ ದೂರವೇ ಉಳಿದಿದೆ. ಈ ಮರಿಯನ್ನು ಮನುಷ್ಯರು ಮುಟ್ಟಿ ಮೇಲಕ್ಕೆ ಹತ್ತಿಸಿದ್ದರಿಂದ ಉಳಿದ ಕಾಡಾನೆಗಳು ಅದನ್ನು ಸ್ವೀಕರಿಸುತ್ತಿಲ್ಲ ಎಂದೆಲ್ಲ ಪ್ರಚಾರವಾಗಿದೆ.
ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ ಅವರು ಮಾತನಾಡಿ, ಪ್ರಸ್ತುತ ಮರಿ ಆನೆ ದೊಡ್ಡ ಆನೆಗಳ ಹಿಂಡಿನಿಂದ ಸುಮಾರು 200 ಮೀಟರ್ ದೂರದಲ್ಲೇ ಇದೆ. ಒಮ್ಮೆ ನಾವು ಅದನ್ನು ಆನೆ ಹಿಂಡಿನ ಬಳಿಗೆ ಕರೆದೊಯ್ದು ಬಿಟ್ಟು ಬಂದೆವು. ಆದರೆ ಅದು ಮರಳಿ ವಾಪಾಸು ಬರುತ್ತಿದೆ. ಈ ಆನೆ ಮರಿ ತನ್ನ ಗುಂಪಿನೊಂದಿಗೆ ಹೋಗಲು ಮುಂದಾಗುತ್ತಿಲ್ಲ. ಈಗಾಗಲೇ ತಜ್ಞ ವೈದ್ಯರ ಸಲಹೆಗಳನ್ನು ಪಡೆಯುತ್ತಿದ್ದೇವೆ. ಅವರ ಸಲಹೆಯಂತೆ ಕಾಡಿನ ಅಂಚಿನಲ್ಲಿ ಗುಂಪಿನಿಂದ ಬೇರೆಯಾಗಿ ಇರುವ ಮರಿಯನ್ನು ಗುಂಪಿಗೆ ಸೇರಿಸಲು ಸತತ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಮರಿಯಾನೆ ಯಾವುದೇ ಆಹಾರ ಸೇವಿಸದೇ ಇರುವುದು ಸಮಸ್ಯೆಯಾಗಿದೆ. ಅದಕ್ಕೂ ತಜ್ಞರ ಸಲಹೆ ಪಡೆಯುತ್ತಿದ್ದೇವೆ. ನಮ್ಮ ಸಿಬ್ಬಂದಿ ಆನೆ ಮರಿಯಾನೆಗೆ ಕಾವಲಾಗಿ ನಿಂತಿರುತ್ತಾರೆ. ಮರಿಯಾನೆ ಗುಂಪಿಗೆ ಸೇರಿಸಲು ಸಾಧ್ಯವೇ ಆಗದಿದ್ದರೆ ಅದನ್ನು ಯಾವುದಾದರೂ ಆನೆ ಶಿಬಿರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಸಾಕುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮನುಷ್ಯರೇ ಇಷ್ಟವಾದರಾ ಮರಿಯಾನೆಗೆ?
ಗುರುವಾರ ಮುಂಜಾನೆ ಕೆರೆಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಆನೆಗಳನ್ನು ಸಾರ್ವಜನಿಕರು ಸೇರಿ ರಕ್ಷಿಸಿದ್ದರು. ಮರಿಯಾನೆಯನ್ನು ಮೇಲೆ ತರುವ ಹೊತ್ತಿಗೆ ದೊಡ್ಡ ಆನೆಗಳು ಸ್ವಲ್ಪ ದೂರ ಹೋಗಿದ್ದವು. ಆಗ ಈ ಮರಿಯಾನೆಯನ್ನು ಅವುಗಳ ಹಿಂಡಿಗೆ ಸೇರಿಸಲೆಂದು ಕರೆದೊಯ್ಯಲಾಯಿತು. ಆಗ ಈ ಮರಿಯಾನೆ ಯಾವುದೇ ಭಯ, ಆತಂಕವಿಲ್ಲದೆ ಜನರೊಂದಿಗೆ ಬೆರೆಯುತ್ತಿತ್ತು. ಆಗಾಗ ಸಣ್ಣಗೆ ಜಿಗಿಯುತ್ತಾ, ಎದುರು ಹೋಗುತ್ತಿದ್ದವರನ್ನು ಸೊಂಡಿಲಿನಿಂದ ಕೆಣಕುತ್ತಾ, ತಿರುಗಿ ನೋಡುತ್ತಾ ಆಟವಾಡುತ್ತಾ ಸಾಗಿತ್ತು. ಇದನ್ನು ಗಮನಿಸಿದಾಗ ಆನೆ ಮರಿ ಮನುಷ್ಯರೊಂದಿಗೆ ಅತ್ಯಂತ ಪ್ರೀತಿಯಿಂದ ಇರುವಂತೆ ಕಂಡಿತ್ತು. ಅಲ್ಲಿಂದಾಚೆಗೆ ಆನೆಗಳ ಹಿಂಡಿನ ಕಡೆಗೆ ಹೋಗಲು ಮಾತ್ರ ಅದು ನಿರಾಕರಿಸುತ್ತಿದೆ.
ಇದನ್ನೂ ಓದಿ : Elephant Rescue Operation: ತೋಟದ ಕಾಲುವೆಗೆ ಆಯತಪ್ಪಿ ಬಿದ್ದ ಕಾಡಾನೆಗಳು; ರಕ್ಷಿಸಿ ಮರಳಿ ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು