Site icon Vistara News

Elephant Behaviour : ತಾಯಿಯ ಜತೆಗೆ ಹೋಗಲು ಒಪ್ಪದ ಮರಿಯಾನೆ ಭಾರವಾದ ಹೃದಯದಿಂದ ಈಗ ದುಬಾರೆ ಆನೆ ಶಿಬಿರಕ್ಕೆ!

Elephant dubare

#image_title

ಸುಳ್ಯ: ಅದು ಯಾಕೆ ಹಾಗೆ ಮಾಡಿತೋ ಗೊತ್ತಿಲ್ಲ. ಎದುರಿಗೆ ತನ್ನದೇ ಗುಂಪಿನ ಇತರ ಆನೆಗಳಿದ್ದರೂ ಅದು ಅವುಗಳ ಜತೆಗೆ ಹೋಗಲು ಇಷ್ಟವೇ ಪಡುತ್ತಿರಲಿಲ್ಲ (Elephant Behaviour). ತಾಯಿಯ ಜತೆಗೂ ಇರಲೊಪ್ಪದೆ ಮರಳಿ ಮರಳಿ ಮನುಷ್ಯರ ಕಡೆಗೇ ಮರಳುತ್ತಿತ್ತು. ಆದರೆ, ಎಷ್ಟು ದಿನ ಅಂತ ಹೀಗೆ ಇಟ್ಟುಕೊಳ್ಳುವುದು? ಈಗ ಈ ಪುಟಾಣಿ ಮರಿಯನ್ನು ಅನಿವಾರ್ಯವಾಗಿ ಆನೆ ಶಿಬಿರಕ್ಕೆ ಕಳುಹಿಸಲಾಗಿದೆ.

ಇದು ಮಾರ್ಚ್‌ 13ರಂದು ಸುಳ್ಯದ ಅಜ್ಜಾವರದಲ್ಲಿ ಸನತ್ ರೈ ಎಂಬವರ ತೋಟದ ಕೆರೆಯಿಂದ ರಕ್ಷಿಸಲ್ಪಟ್ಟ ಆನೆಗಳ ಪೈಕಿ ಒಂದು ಮರಿಯಾನೆಯ ಕಥೆ. ಕುಟುಂಬದ ಹಿರಿಯಾನೆಗಳ ಹಿಂಡು ಸೇರಲೊಪ್ಪದೆ ಮನುಷ್ಯರಿದ್ದ ಕಡೆಗೇ ಓಡಿ ಬರುತ್ತಿರುವ ಇದನ್ನು ಈಗ ದುಬಾರೆಯ ಆನೆ ಕ್ಯಾಂಪ್‌ಗೆ ಒಯ್ಯಲಾಗಿದೆ.

ಕೆರೆಯ ನೀರಿನಲ್ಲಿ ಸಿಲುಕಿದ್ದ ಆನೆಗಳು

ಆವತ್ತು ಆಹಾರ ಹುಡುಕುತ್ತಾ ಬಂದ ಎರಡು ದೊಡ್ಡ ಕಾಡಾನೆಗಳು ಮತ್ತು ಎರಡು ಮರಿ ಆನೆಗಳು ಆಕಸ್ಮಿಕವಾಗಿ ತೋಟದ ಕೆರೆಗೆ ಬಿದ್ದಿದ್ದವು. ಇದರಲ್ಲಿ ಎರಡು ದೊಡ್ಡ ಕಾಡಾನೆಗಳು ಮತ್ತು ಒಂದು ಮರಿಯಾನೆ ಕಷ್ಟಪಟ್ಟು ಕೆರೆಯಿಂದ ಮೇಲೆ ಬಂದಿದೆ. ಆದರೆ, ಸಂಪೂರ್ಣ ಸುಸ್ತಾಗಿದ್ದ ಸುಮಾರು ಮೂರು ತಿಂಗಳ ಒಂದು ಗಂಡು ಮರಿಯಾನೆಯೊಂದು ಮೇಲೆ ಬರಲಾಗದೆ ಕುಸಿದು ಬೀಳುತ್ತಿತ್ತು. ಈ ಮರಿಯನ್ನು ಅರಣ್ಯ ಇಲಾಖೆಯವರು ಹಾಗೂ ಸ್ಥಳೀಯರು ಸೇರಿ ಕೆರೆಗಿಳಿದು ಮೇಲಕ್ಕೆ ದೂಡಿ ಹತ್ತಿಸಿದ್ದರು.

ಆದರೆ, ಈ ಆನೆಯನ್ನು ಹೇಗೆ ಹೇಗೆ ಹಿಂಡು ಸೇರಿಸಲು ಯತ್ನಿಸಿದರೂ ಅದು ಹಿಂದೆಯೇ ಬರುತ್ತಿತ್ತು. ಎರಡು ದಿನ ನೋಡಿದ ಹಿರಿಯಾನೆಗಳು ಕೂಡಾ ಈಗ ಕೇರಳದ ಕಡೆ ತಮ್ಮ ದಾರಿ ಹಿಡಿದಿವೆ. ಹೀಗಾಗಿ ಈಗ ಅವುಗಳನ್ನು ಹುಡುಕುವುದು ಕೂಡಾ ಕಷ್ಟದ ಕೆಲಸವೆ. ಹೀಗಾಗಿ ಈಗ ಈ ಆನೆಮರಿಯನ್ನು ಭಾರವಾದ ಮನಸಿನೊಂದಿಗೆ ಶಿಬಿರಕ್ಕೆ ಒಯ್ಯಲಾಗಿದೆ.

ಈ ಮರಿಯಾನೆಯನ್ನು ಮನುಷ್ಯರು ಮುಟ್ಟಿ ಮೇಲಕ್ಕೆ ಹತ್ತಿಸಿದ್ದರಿಂದ ಉಳಿದ ಕಾಡಾನೆಗಳು ಅದನ್ನು ಸ್ವೀಕರಿಸುತ್ತಿಲ್ಲ ಎಂದೆಲ್ಲ ಸುದ್ದಿಯಾಗಿತ್ತು. ಆದರೆ, ನಿಜವಾಗಿ ನಡೆದುದೇನೆಂದರೆ, ಈ ಮರಿಯೇ ಹಿಂಡು ಸೇರಲು ಒಪ್ಪದೆ ಮರಳಿ ಬರುತ್ತಿತ್ತು.

ಕೆರೆಯಿಂದ ಮೇಲೆತ್ತಲಾದ ಮರಿಯನ್ನು ಹಿಂಡಿನ ಜತೆ ಸೇರಿಸಲು ಕರೆದೊಯ್ದ ದೃಶ್ಯಾವಳಿ

ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ಅವರ ಪ್ರಕಾರ, ಮರಿಯಾನೆಯನ್ನು ದೊಡ್ಡ ಆನೆಗಳ ಹಿಂಡಿಗೆ ಒಂದು ಬಾರಿ ಸೇರಿಸಲಾಗಿತ್ತು. ಒಮ್ಮೆ ನಾವು ಅದನ್ನು ಆನೆ ಹಿಂಡಿನ ಬಳಿಗೆ ಕರೆದೊಯ್ದು ಬಿಟ್ಟು ಬಂದೆವು. ಆದರೆ ಅದು ಮತ್ತೆ ಮರಳಿ ವಾಪಾಸು ಬರುತ್ತಿದೆ. ಈ ಆನೆ ಮರಿ ತನ್ನ ಗುಂಪಿನೊಂದಿಗೆ ಹೋಗಲು ಮುಂದಾಗುತ್ತಿಲ್ಲ. ಈಗಾಗಲೇ ತಜ್ಞ ವೈದ್ಯ ಸುಳ್ಯದ ಡಾ. ನಿತಿನ್ ಪ್ರಭು ಅವರಿಂದ ಸಲಹೆಗಳನ್ನು ಪಡೆದಿದ್ದೇವೆ. ಅವರ ಸಲಹೆಯಂತೆ ಕಾಡಿನ ಅಂಚಿನಲ್ಲಿ ಗುಂಪಿನಿಂದ ಬೇರೆಯಾಗಿ ಇರುವ ಮರಿಯನ್ನು ಗುಂಪಿಗೆ ಸೇರಿಸಲು ಸತತ ಪ್ರಯತ್ನವೂ ನಡೆಯಿತು. ಆದರೂ ಸಫಲವಾಗಲಿಲ್ಲ.

ದುಬಾರೆ ಕ್ಯಾಂಪ್‌ಗೆ ಹೋಗುವುದಿಲ್ಲ.. ನಿಮ್ಮ ಜತೆಗೇ ಇರುತ್ತೇನೆ ಎಂದು ಹಠ ಹಿಡಿಯುತ್ತಿರುವ ಮರಿಯಾನೆ
ಬೇಸರದ ನಿರ್ಗಮನ

ಅದೇ ಹೊತ್ತಿಗೆ, ಮರಿಯಾನೆ ಯಾವುದೇ ಆಹಾರ ಸೇವಿಸದೇ ಇದ್ದುದು ನಮಗೂ ದೊಡ್ಡ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮರಿಯಾನೆಗೆ ತಜ್ಞರ ಸಲಹೆ ಪಡೆದು ಲ್ಯಾಕ್ಟೋಜನ್ ಸೇರಿದಂತೆ ಗ್ಲೂಕೋಸ್‌ಯುತ್ತ ನೀರನ್ನು ನೀಡುತ್ತಿದ್ದೆವು. ಆನೆ ಮರಿ ಸದ್ಯ ಆರೋಗ್ಯವಾಗಿದೆ. ಆರೋಗ್ಯ ದೃಷ್ಟಿಯಿಂದ ಮರಿಯಾನೆಯನ್ನು ತಜ್ಞರ ಸಲಹೆಯಂತೆ ದುಬಾರೆ ಆನೆ ಕ್ಯಾಪಿಂಗೆ ವರ್ಗಾವಣೆ ಮಾಡಲಾಗಿದೆ.

ಅಂತೂ ಮೂರು ದಿನಗಳ ಬಳಿಕ ತಾಯಿಯಿಂದ ಬೇರ್ಪಟ್ಟ ಮರಿಯಾನೆ ದುಬಾರೆಯ ಸಾಕಾನೆ ಕ್ಯಾಂಪ್ ಕಡೆಗೆ ಕಣ್ಣೀರೊಂದಿಗೆ ಪ್ರಯಾಣ‌ ಬೆಳೆಸಿದೆ. ಕ್ಯಾಂಪ್‌ಗೆ ಹೋಗುವಾಗಲೂ ವಾಹನ ಹತ್ತಲು ನಿರಾಕರಿಸಿದ ಆನೆ ಹತ್ತಿದ ಮೇಲೂ ಜನರತ್ತಲೇ ಬರಲು ಪ್ರಯತ್ನ ಮಾಡುತ್ತಿದ್ದ ದೃಶ್ಯ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿತು.

ಇದನ್ನೂ ಓದಿ : Elephant Behaviour : ಕೆರೆಗೆ ಬಿದ್ದು ರಕ್ಷಿಸಲ್ಪಟ್ಟ ಮರಿಯಾನೆಗೆ ಮನುಷ್ಯರ ಮೇಲೇ ಪ್ರೀತಿ; ಕಾಡಾನೆ ಹಿಂಡು ಸೇರಲು ಒಪ್ಪದೆ ಸಮಸ್ಯೆ!

Exit mobile version