ಚಾಮರಾಜನಗರ: ತಾಯಿಯಿಂದ ಬೇರ್ಪಟ್ಟ ಆ ಆನೆ ಮರಿ ವಸ್ತುಶಃ ಕಣ್ತಪ್ಪಿಸಿಕೊಂಡ ಪುಟ್ಟ ಮಗುವಿನಂತೆ ಅಳುತ್ತಿತ್ತು. ಒಮ್ಮೆ ಕಲ್ಲಿನ ನಡುವೆ ಓಡುತ್ತಾ ಜಾರಿ ಬೀಳುತ್ತಿತ್ತು. ಇನ್ನೊಮ್ಮೆ ನೀರಿನ ಕಡೆಗೆ ಧಾವಿಸಿ ಧುತ್ತನೆ ನಿಲ್ಲುತ್ತಿತ್ತು. ಯಾರಾದರೂ ಅಪಾಯ ಮಾಡಬಹುದೇ ಎಂದು ಅಳುಕುತ್ತಿತ್ತು… ಇಂಥ ಸಂಕಷ್ಟದಲ್ಲಿದ್ದ ಆನೆ ಮರಿಯನ್ನು ಊರಿನವರು ರಕ್ಷಿಸಿ (Elephant calf rescued) ಮತ್ತೆ ಅಮ್ಮನ ಮಡಿಲು ಸೇರಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇಂಥಹುದೊಂದು ಘಟನೆ ನಡೆದಿದ್ದು ತಮಿಳುನಾಡಿನ ಪಾಲಾರ್ ಅರಣ್ಯ ಪ್ರದೇಶದ ಮೆಟ್ಟೂರು ಅಣೆಕಟ್ಟಿನ ಹಿನ್ನೀರಿನಲ್ಲಿ. ಕರ್ನಾಟಕಕ್ಕೆ ಹೊಂದಿಕೊಂಡಿರುವ ಭಾಗ ಇದಾಗಿದ್ದು, ಆನೆ ಮರಿಯನ್ನು ರಕ್ಷಿಸಿ ತಾಯಿಯ ಜತೆ ಸೇರಿಸಿದ್ದು ಕನ್ನಡಿಗರೇ.
ಮೆಟ್ಟೂರು ಡ್ಯಾಂ ಬಳಿ ಈ ಮರಿಯಾನೆ ಅತ್ತಿಂದಿತ್ತ ಭಯದಿಂದ ಓಡಾಡುತ್ತಿತ್ತು. ಎಲ್ಲಿಗೆ ಹೋಗುವುದೆಂದು ದಿಕ್ಕು ಕಾಣದೆ ಇದೆ ಎನ್ನುವುದು ಅದರ ಓಡಾಟದಿಂದ ಗೊತ್ತಾಗುತ್ತಿತ್ತು. ಅದು ಒಮ್ಮೊಮ್ಮೆ ತುಂಬಿದ ಹಿನ್ನೀರಿನ ಕಡೆಗೂ ಹೋಗುತ್ತಿತ್ತು, ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಒಟ್ಟಾಗಿ ಏನಾದರೂ ಮಾಡಲೇಬೇಕು ಎಂದು ನಿರ್ಧರಿಸಿದರು.
ಆನೆ ಕಲ್ಲುಗಳ ನಡುವೆ ಎಡವಿ ಬೀಳುವುದು. ಮಕ್ಕಳು ಅಮ್ಮಾ ಎಂದಂತೆ ಘೀಳಿಡುವುದು, ನೀರಿನ ಬದಿಗೆ ಹೋಗುವುದು… ಹೀಗೆ ಮಾಡಿದಾಗಲೆಲ್ಲ ಜನರ ಆತಂಕವಂತೂ ಜೋರಾಗುತ್ತಿತ್ತು. ಈ ನಡುವೆ ಅದು ನೀರಿನ ಬಳಿ ಹೋಗಿ ಕೆಸರಲ್ಲಿ ಸಿಕ್ಕಿ ಹಾಕಿಕೊಂಡರೆ, ನೀರಿನಲ್ಲಿ ಮುಳುಗಿದರೆ ಎಂದು ಯೋಚಿಸಿದಾಗ ಆತಂಕವಾಗುತ್ತಿತ್ತು. ಹಾಗಂತ ಏಕಾಏಕಿಯಾಗಿ ಜನ ಸೇರಿದರೆ ಅದು ಭಯಗೊಂಡು ನೀರಿಗೆ ಹಾರುವ ಅಪಾಯವೂ ಇತ್ತು. ಕಲ್ಲಿನ ನಡುವೆ ಬಿದ್ದು ಗಾಯಗೊಳ್ಳುವ ಸಾಧ್ಯತೆಯೂ ಇತ್ತು.
ಇದೆಲ್ಲವನ್ನೂ ಗಮನಿಸಿ ಅಲ್ಲಿನ ಯುವಕರು ಅತ್ಯಂತ ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ನಿಭಾಯಿಸಿದರು. ಒಬ್ಬ ಯುವಕ ನಿಧಾನವಾಗಿ ಆನೆ ಮರಿಯ ಬಳಿಗೆ ಹೋಗಿ ಅದಕ್ಕೆ ವಿಶ್ವಾಸ ತುಂಬಿ, ಪ್ರೀತಿಯಿಂದ ಮೈದಡವಿ ಬಳಿಕ ನಿಧಾನಕ್ಕೆ ದಡದಿಂದ ಮೇಲೆ ಕರೆದುಕೊಂಡು ಬಂದರು.
ನಿಜವಾಗಿ ಆಗಿದ್ದೇನೆಂದರೆ ತಾಯಿಯಾನೆ ಹಿನ್ನೀರು ದಾಟಿ ಆಚೆ ಕಡೆಗೆ ಹೋಗಿ ಆಗಿತ್ತು. ಮರಿಯಾನೆ ಮಾತ್ರ ಕರ್ನಾಟಕದ ಕಡೆಗಿನ ದಡದಲ್ಲಿ ಉಳಿದುಬಿಟ್ಟಿತ್ತು. ಅದು ಅಮ್ಮ ಹೋದ ದಾರಿಯಲ್ಲಿ ಹೋಗುತ್ತೇನೆ ಎಂದು ಹೊರಟು ಭಯಗೊಂಡು ನಿಲ್ಲುತ್ತಿತ್ತು.. ಅಂತೂ ಕೊನೆಗೆ ಊರಿನವರು ಸೇರಿ ಮರಿಯಾನೆಯನ್ನು ನಿಧಾನಕ್ಕೆ ಹಿನ್ನೀರು ದಾಟಿಸಿ ತಾಯಿಯ ಮಡಿಲು ಸೇರಿಸಿದರು. ಇದಕ್ಕೆ ತಮಿಳುನಾಡು ಅರಣ್ಯ ಸಿಬ್ಬಂದಿ ಕೂಡಾ ಸಹಕರಿಸಿದರು. ಮಹದೇಶ್ವರ ಬೆಟ್ಟ ನಿವಾಸಿಗಳ ಈ ಸಾಹಸ, ಸಹಾಯವನ್ನು ಮರಿಯಾನೆಯಂತೂ ಮರೆಯಲಾರದು!
ಇದನ್ನೂ ಓದಿ Elephant Conservationist : ಐದು ಕೋಟಿ ರೂಪಾಯಿ ಆಸ್ತಿಯನ್ನು ಆನೆಗಳಿಗೆ ವಿಲ್ ಬರೆದ ಇಮಾಮ್!