Site icon Vistara News

Elephant Census: ಆನೆ ಗಣತಿ ವರದಿ ಬಿಡುಗಡೆ; ರಾಜ್ಯದಲ್ಲಿ 2017ರ ಸಮೀಕ್ಷೆಗಿಂತ 350 ಆನೆ ಹೆಚ್ಚಳ

Elephants in forest

ಬೆಂಗಳೂರು: ರಾಜ್ಯದ ಆನೆಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. 2017ರಲ್ಲಿ ರಾಜ್ಯದಲ್ಲಿ ಸುಮಾರು 6049 ಆನೆಗಳಿದ್ದವು. ಈ ಬಾರಿ ಗಣತಿಯ ವೇಳೆ 6,395 ಆನೆಗಳಿವೆ ಎಂದು ಅಂದಾಜು ಮಾಡಲಾಗಿದ್ದು, ಸುಮಾರು 350 ಆನೆಗಳು (Elephant Census) ಹೆಚ್ಚಳವಾಗಿದೆ.

ಈ ಬಗ್ಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಮಾಹಿತಿ ನೀಡಿದ್ದಾರೆ. ವಿಕಾಸಸೌಧದ ಕಚೇರಿಯಲ್ಲಿ ಆನೆಗಳ ಗಣತಿಯ ವರದಿ ಬಿಡುಗಡೆ ಮಾಡಿದ ಅವರು, ಆನೆಗಳು ಬಲಿಷ್ಠ ವನ್ಯಜೀವಿಗಳಾದರೂ ಭಾರತ ಸೇರಿ ವಿಶ್ವಾದ್ಯಂತ ಅಪಾಯದಲ್ಲಿವೆ. ಅವಸಾನದ ಅಂಚಿನಲ್ಲಿರುವ ಆನೆಗಳನ್ನು ಸಂರಕ್ಷಿಸುವ ಸಲುವಾಗಿ, ಆನೆಗಳಿಗೂ ನೆಮ್ಮದಿಯಿಂದ ಬದುಕಲು ಅವುಗಳ ಆವಾಸಸ್ಥಾನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು 2012ರ ಆಗಸ್ಟ್ 12 ರಿಂದ ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಆನೆಗಳ ದಿನದಂದು ದೇಶದಲ್ಲಿ ಆನೆಗಳ ಸಂಖ್ಯೆ ಹೆಚ್ಚಳವಾಗಿದೆಯೇ ಅಥವಾ ಇಳಿಮುಖವಾಗಿದೆಯೇ ಎಂದು ತಿಳಿಯಲು ಆನೆಗಳ ಗಣತಿಯನ್ನು ಪ್ರತೀ ಐದು ವರ್ಷಗಳಿಗೊಮ್ಮೆ ಮಾಡಲಾಗುತ್ತದೆ. ಈ ಹಿಂದೆ ಆನೆ ಗಣತಿ 2017 ರಲ್ಲಿ ನಡೆದಿತ್ತು. ಬಳಿಕ 2022ರಲ್ಲಿ ಆನೆ ಗಣತಿಯನ್ನು ಅಖಿಲ ಭಾರತ ಹುಲಿ ಗಣತಿಯ ಭಾಗವಾಗಿ ಮಾಡಲು ಪ್ರಯತ್ನಿಸಲಾಯಿತು. ಆದರೆ, ಈ ಸಮೀಕ್ಷೆಯು ಮಾದರಿ ಬ್ಲಾಕ್‌ ಏಣಿಕೆ (Sample Block Count) ಮತ್ತು ಆನೆಗಳ ಸಂಖ್ಯೆ ಸ್ವರೂಪದ (Population Structure) ಮೌಲ್ಯ ಮಾಪನವನ್ನು ಒಳಗೊಂಡಿರಲಿಲ್ಲ. ಈ ವಿಧಾನ ಆನೆಗಳ ಗಣತಿ ಮತ್ತು ಸಂಖ್ಯಾ ಸ್ವರೂಪ ಅಂದರೆ ಲಿಂಗ ಮತ್ತು ವಯಸ್ಸಿನ ವರ್ಗೀಕರಣ ಮಾಡಲು ಬಹಳ ಮುಖ್ಯವಾಗಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ | DK Shivakumar : ಬಾರ್‌ ಕೌನ್ಸಿಲ್‌ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಿಂದ ಡಿ.ಕೆ ಶಿವಕುಮಾರ್‌ ಹೆಸರು ಡಿಲೀಟ್‌

ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ಮೂರು ರಾಜ್ಯಗಳ ಮುಂದಾಳತ್ವದೊಂದಿಗೆ 2023ರ ಮೇ 17 ರಿಂದ ಮೇ 19ರವರೆಗೆ ಏಕಕಾಲದಲ್ಲಿ ಆನೆಗಳ ಗಣತಿ ನಡೆಸಲಾಯಿತು. ಅದೇ ದಿನಾಂಕದಂದು ಆಂಧ್ರ ಪ್ರದೇಶದಲ್ಲೂ ಸಹ ಇದೇ ರೀತಿಯ ಗಣತಿ ಕಾರ್ಯವನ್ನು ನಡೆಸಲಾಯಿತು ಎಂದು ವಿವರಿಸಿದರು.

ಈ ಗಣತಿಯ ಸ್ವರೂಪ, ಕ್ಷೇತ್ರ ಸಿಬ್ಬಂದಿಗೆ ತರಬೇತಿ, ಗಣತಿ ಫಲಿತಾಂಶಗಳ ವಿಶ್ಲೇಷಣೆ ಹಾಗೂ ವರದಿ ತಯಾರಿಕೆಯಲ್ಲಿ ಪ್ರೊ. ಆರ್‌. ಸುಕುಮಾರ್‌ ಅವರ ನೇತೃತ್ವದ ಭಾರತೀಯ ವಿಜ್ಞಾನ ಸಂಸ್ಥೆಯ (IISC) ತಾಂತ್ರಿಕ ನೆರವಿನೊಂದಿಗೆ ಕರ್ನಾಟಕ ಅರಣ್ಯ ಇಲಾಖೆಯು ಆನೆಗಳ ಗಣತಿಯನ್ನು ನಡೆಸಲಾಗಿದೆ. ರಾಜ್ಯದ 32 ವಿಭಾಗಗಳಿಂದ 3400ಕ್ಕೂ ಹೆಚ್ಚು ಸಿಬ್ಬಂದಿ ಈ ಆನೆಗಳ ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದರು.

ಮೂರು ವಿಧಾನದಲ್ಲಿ ಆನೆ ಗಣತಿ

ಅ) ನೇರ ಏಣಿಕೆ ಅಥವಾ ಬ್ಲಾಕ್‌ ಏಣಿಕೆ (ಮೇ 17, 2023) (Direct Count): ಈ ವಿಧಾನದಲ್ಲಿ 5.0 ಚದರ ಕಿ.ಮೀ ವ್ಯಾಪ್ತಿಯ ವಿವಿಧ ಮಾದರಿ ಬ್ಲಾಕ್‌ ಗಳಲ್ಲಿ ಆನೆಗಳ ನೇರ ಏಣಿಕೆಯನ್ನು ನಡೆಸಲಾಯಿತು ಮತ್ತು ಒಟ್ಟು ಬೀಟ್‌ಗಳ ಸಂಖ್ಯೆಯ ಸುಮಾರು ಶೇಕಡ 30 ರಿಂದ 50 ರಷ್ಟು ಒಳಗೊಂಡಿತ್ತು.

ಆ) ಟ್ರಾಂಜೆಕ್ಟ್‌ ಸಮೀಕ್ಷೆ ಅಥವಾ ಲದ್ದಿ ಏಣಿಕೆ ವಿಧಾನ (ಮೇ 18, 2023) (Dung Count): ಈ ವಿಧಾನದಲ್ಲಿ 2 ಕಿ.ಮೀ ಉದ್ದದ ಟ್ರಾಂಜೆಕ್ಟ್‌ ರೇಖೆಗಳಲ್ಲಿ ಸಮೀಕ್ಷೆ ನಡೆಸಿ, ಆನೆಗಳ ಲದ್ದಿ ರಾಶಿಗಳ ಸಂಖ್ಯೆಯನ್ನು ಏಣಿಸಲಾಯಿತು. ಈ ಅಂಕಿ ಅಂಶದ ಮಾದರಿಗಳ ಮೂಲಕ ಆನೆಗಳ ಸಂಖ್ಯೆಯ ಮಾಹಿತಿ ಪಡೆಯಲು ಸದರಿ ದತ್ತಾಂಶವನ್ನು ಸಂಸ್ಕರಿಸಲಾಗುತ್ತಿದೆ ಮತ್ತು ಸಧ್ಯದಲ್ಲೆ ಫಲಿತಾಂಶ ದೊರೆಯಲಿದೆ.

ಇ) ವಾಟರ್‌ ಹೋಲ್‌ ಏಣಿಕೆ (ಮೇ 19, 2023) (Waterhole Count): ಆನೆಗಳು ನಿಯಮಿತವಾಗಿ ಭೇಟಿ ನೀಡುವ ವಾಟರ್‌ ಹೋಲ್‌ಗಳು ಮತ್ತು ಇತರೆ ಸ್ಥಳಗಳಲ್ಲಿ ಆನೆಗಳನ್ನು ನೇರವಾಗಿ ನೋಡಿ ಏಣಿಸುವ ಕಾರ್ಯ ನಡೆಸಲಾಯಿತು. ಈ ವಿಧಾನದಲ್ಲಿ ಆನೆಗಳ ಚಲನವಲನ, ವಯಸ್ಸಿನ ವರ್ಗಗಳು, ಗಂಡು ಹೆಣ್ಣು ಅನುಪಾತ ಇತ್ಯಾದಿಗಳನ್ನು ದಾಖಲಿಸಲಾಗಿದೆ.

ಇದನ್ನೂ ಓದಿ | Arecanut Price : ಭೂತಾನ್‌ ಅಡಿಕೆಯಿಂದ ಬೆಳೆಗಾರರು ಹೆದರಬೇಕಿಲ್ಲ; ಆರಗ ಜ್ಞಾನೇಂದ್ರ ಹೇಳಿದ್ದೇನು?

ರಾಜ್ಯದ 32 ವಿಭಾಗಗಳಲ್ಲಿ ಆನೆಗಳ ಗಣತಿ ಕಾರ್ಯವನ್ನು ನಡೆಸಲಾಗಿದ್ದು, ಈ ಸಮೀಕ್ಷೆಯಲ್ಲಿ 23 ವಿಭಾಗಗಳಲ್ಲಿ ಆನೆಗಳು ಕಂಡುಬಂದಿವೆ. ಸಮೀಕ್ಷೆಯ ದಿನದಂದು ನೇರವಾಗಿ ಏಣಿಸಿದ ಒಟ್ಟು ಆನೆಗಳ ಸಂಖ್ಯೆ-2219 ಆಗಿತ್ತು. ಈ 23 ವಿಭಾಗಗಳಲ್ಲಿ ಇರುವ 18975 ಚದರ ಕಿ.ಮೀ ಪ್ರದೇಶದ ಪೈಕಿ 6104 ಚದರ ಕಿ.ಮೀ ಪ್ರದೇಶದಲ್ಲಿ ಈ ಸಮೀಕ್ಷೆಯನ್ನು ನಡೆಸಲಾಯಿತು.

ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರದೇಶವನ್ನು ಸಮೀಕ್ಷೆಗೆ ಒಳಪಡಿಸಿರುವುದರಿಂದ ಈ ಸಮೀಕ್ಷೆ ಮತ್ತು ವರದಿಯು ಹೆಚ್ಚು ನಿಖರ ಮತ್ತು ವಿಶ್ವಾಸಾರ್ಹವಾಗಿದೆ.

ಚಾಮರಾಜನಗರ ಜಿಲ್ಲೆಗೆ ಅಗ್ರಸ್ಥಾನ

ಚಾಮರಾಜನಗರ: ಅರಣ್ಯ ಇಲಾಖೆಯು ಆನೆ ಗಣತಿ ವರದಿ ಬಿಡುಗಡೆ ಮಾಡಿದ್ದು, ಆನೆಗಳ ಸಂಖ್ಯೆಯಲ್ಲಿ ಚಾಮರಾಜನಗರ ಜಿಲ್ಲೆಗೆ ಅಗ್ರಸ್ಥಾನ ಲಭಿಸಿದೆ. ರಾಜ್ಯದಲ್ಲಿ ಒಟ್ಟು 6,395 ಆನೆಗಳಿವೆ ಎಂದು ಅಂದಾಜಿಸಲಾಗಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಮೊದಲ ಸ್ಥಾನ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ದ್ವಿತೀಯ ಸ್ಥಾನ ಲಭಿಸಿದೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಮೊದಲ ಸ್ಥಾನ, ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ವನ್ಯಜೀವಿ ಅಭಯಾರಣ್ಯಕ್ಕೆ (ಬಿಆರ್‌ಟಿ) ತೃತೀಯ ಹಾಗೂ ಮಲೆ ಮಹದೇಶ್ವರ ವನ್ಯಜೀವಿ ಧಾಮ ನಾಲ್ಕನೇ ಸ್ಥಾನ ಪಡೆದಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ 1116, ಬಿಆರ್‌ಟಿ ವನ್ಯಜೀವಿ ಅಭಯಾರಣ್ಯದಲ್ಲಿ 484, ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ 557 ಆನೆಗಳು ವಾಸಿಸುತ್ತಿವೆ.

2023ರ ಮೇ 17ರಿಂದ 19ರ ವರೆಗೆ ನಡೆದ ಆನೆ ಗಣತಿ ವರದಿ ಬಿಡುಗಡೆ ಮಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ

Exit mobile version