Site icon Vistara News

Elephant death : ಲಾರಿ ಡಿಕ್ಕಿ ಹೊಡೆದು ಮೂರು ಕಾಡಾನೆಗಳ ದಾರುಣ ಸಾವು

Elephant death

#image_title

ಕೋಲಾರ: ಕಾಡಾನೆಗಳು ನಾಡಿಗೆ ಲಗ್ಗೆ (Elephant attack) ಇಡುತ್ತಿರುವುದರಿಂದ ಜನರಿಗೆ ತೊಂದರೆ ಆಗುತ್ತಿರುವುದು ಮಾತ್ರವಲ್ಲ, ಸ್ವತಃ ಅವುಗಳ ಪ್ರಾಣಕ್ಕೇ ಸಂಚಕಾರ ಉಂಟಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ದಾಟಲು ಮುಂದಾದ ಮೂರು ಆನೆಗಳು ಲಾರಿ ಡಿಕ್ಕಿ ಹೊಡೆದು ಪ್ರಾಣ ಕಳೆದುಕೊಂಡ (Elephant death) ಘಟನೆಯೊಂದು ನಡೆದಿದೆ.

ಬೆಂಗಳೂರಿನಿಂದ ತಿರುಪತಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಮೂರು ಆನೆಗಳು ಪ್ರಾಣ ಕಳೆದುಕೊಂಡಿವೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಮಂಡಲ ಬಳಿ ತಡ ರಾತ್ರಿ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಕಾಡಾನೆಗಳು ರಸ್ತೆ ದಾಟುವಾಗ ಲಾರಿ ಡಿಕ್ಕಿ ಹೊಡೆದಿದೆ.

ರಸ್ತೆ ಅಪಘಾತದಲ್ಲಿ ಮೂರು ಆನೆಗಳು ಪ್ರಾಣ ಕಳೆದುಕೊಂಡಿರುವುದನ್ನು ಅರಣ್ಯ ಸಂರಕ್ಷಣಾಧಿಕಾರಿ ಚೈತನ್ಯಕುಮಾರ್ ದೃಢಪಡಿಸಿದ್ದಾರೆ. ಕೋಲಾರ ಗಡಿಗೆ ಹೊಂದಿಕೊಂಡ ಪಲಮನೇರು ಸಮೀಪದ ಜಗಮರ್ಲ ಅರಣ್ಯ ಪ್ರದೇಶ ಬಳಿ ಈ ಸಾವು ಸಂಭವಿಸಿದ್ದಾಗಿ ಅವರು ಹೇಳಿದರು.

ತರಕಾರಿ ಲಾರಿ ಡಿಕ್ಕಿ ಹೊಡೆದು ಅವಘಡ

ಪಲಮನೇರು ಕಡೆಯಿಂದ ಚೆನ್ನೈ ಕಡೆಗೆ ವೇಗವಾಗಿ ಬರುತ್ತಿದ್ದ ತರಕಾರಿ ಲಾರಿ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದ್ದಾಗಿ ತಿಳಿದುಬಂದಿದೆ. ರಸ್ತೆ ದಾಟುತ್ತಿದ್ದ ಆನೆಗಳಿಗೆ ತರಕಾರಿ ಲಾರಿ ಬಡಿದಿದೆ.

ಮೂರು ಆನೆಗಳು ರಸ್ತೆ ದಾಟುತ್ತಿದ್ದ ವೇಳೆ ಒಂದು ಆನೆಗೆ ಲಾರಿ ನೇರವಾಗಿ ಡಿಕ್ಕಿ ಹೊಡೆದಿದೆ. ಇನ್ನೂ ಎರಡು ಆನೆಗಳು ಧಾವಿಸುವ ವೇಗದಲ್ಲಿ ಕ್ರ್ಯಾಶ್ ಬ್ಯಾರಿಯರ್, ತರಕಾರಿಗಳಿಗೆ ಬಡಿದು ಸಾವನ್ನಪ್ಪಿವೆ ಎಂದು ಹೇಳಲಾಗಿದೆ. ಚಾಲಕ ವಾಹನ ಬಿಟ್ಟು ಓಡಿ ಹೋಗಿದ್ದಾನೆ.

ತಿರುಪತಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಆನೆಗಳು ಕೌಂಡಿನ್ಯ ಅಭಯಾರಣ್ಯದಿಂದ ಹೊರಬಿದ್ದು ರಸ್ತೆ ದಾಟುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ವಾಹನ ಚಾಲಕನನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದರು.

ರಾಮನಗರ ಬಳಿ ರೈತರ ನಿದ್ದೆಗೆಡಿಸಿದ್ದ ಮತ್ತೊಂದು ಪುಂಡಾನೆ ಸೆರೆ

ಚನ್ನಪಟ್ಟಣ ತಾಲೂಕಿನ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ರೈತರ ನಿದ್ದೆಗೆಡಿಸಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯಲಾಗಿದೆ. ಅಭಿಮನ್ಯು ಅಂಡ್ ಟೀಂ ಪುಂಡಾನೆಯನ್ನು ಸೆರೆ ಹಿಡಿಯುವ ಸಾಹಸಿಕ ಕೆಲಸವನ್ನು ಮಾಡಿದೆ.

ರಾಮನಗರದಲ್ಲಿ ಸೆರೆ ಸಿಕ್ಕ ಪುಂಡಾನೆ

ಅರಣ್ಯ ಇಲಾಖೆಗೆ ತಲೆನೋವಾಗಿದ್ದ ಪುಂಡಾನೆ ಸೆರೆಗೆ ಕಳೆದ ಐದು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿತ್ತು. ಇತ್ತೀಚೆಗಷ್ಟೇ ಒಂದು ಪುಂಡಾನೆ ಸೆರೆಹಿಡಿದಿದ್ದ ಅರಣ್ಯ ಇಲಾಖೆ ಈಗ ಎರಡನೇ ಆನೆಯನ್ನು ಹಿಡಿಯಲು ಸಫಲವಾಗಿದೆ.

ರಾಷ್ಟ್ರೀಯ ಹೆದ್ದಾರಿ ಅಡ್ಡಗಟ್ಟಿದ ಆನೆ, ಮರಿಯಾನೆ; ಗಂಟೆಗಟ್ಟಲೆ ತಲೆಬೇನೆ!

ಚಾಮರಾಜನಗರ: ಇತ್ತೀಚೆಗೆ ಚಾಮರಾಜನಗರ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ಬಳಿಯ ರಾಷ್ಟ್ರೀಯ ಹೆದ್ದಾರಿಯನ್ನು ಆನೆ ಹಾಗೂ ಮರಿಯಾನೆಯೊಂದು ಅಡ್ಡಗಟ್ಟಿ ಮನಸೋ ಇಚ್ಛೆ ಓಡಾಡಿ ಟ್ರಾಫಿಕ್‌ ಜಾಮ್‌ ಆಗಲು ಕಾರಣವಾಗಿತ್ತು.

ಹಾಸನೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಪ್ರಸಂಗ ನಡೆದಿದೆ. ಆನೆಯೊಂದು ಕಾಡಿನಿಂದ ಆರಾಮವಾಗಿ ಹೆದ್ದಾರಿಯತ್ತ ಹೆಜ್ಜೆ ಇಟ್ಟಿದೆ. ಈ ವೇಳೆ ಸಾಕಷ್ಟು ವಾಹನಗಳು ಅಲ್ಲಿದ್ದವು. ಆನೆಗಳು ಬಂದೊಡನೆ ಯಾರೂ ಸಹ ಮುಂದೆ ಹೋಗುವ ದುಃಸ್ಸಾಹಸಕ್ಕೆ ಕೈ ಹಾಕಲಿಲ್ಲ. ಆನೆ ಈಗ ಹೋಗುತ್ತದೆ, ಆಗ ಹೋಗುತ್ತದೆ ಎಂದು ಕಾದವರೇ ಹೆಚ್ಚು. ಆದರೆ, ಹೀಗೆ ಕಾಯುತ್ತಾ ಕುಳಿತಾಗ ಟ್ರಾಫಿಕ್‌ ಜಾಮ್‌ ಸಹ ಆಗಿದೆ. ಕಿ.ಮೀ. ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಲಾರಿಯತ್ತ ಆಗಮಿಸಿದ ಆನೆ, ಮರಿಯಾನೆ

ಇದನ್ನೂ ಓದಿ: Elephant killed : 20 ವರ್ಷದ ಹೆಣ್ಣು ಕಾಡಾನೆಯನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು

Exit mobile version