ಮಡಿಕೇರಿ: ಮನುಷ್ಯನ ಮನಸ್ಥಿತಿ ಎಷ್ಟು ಕಠೋರ ಅನ್ನುವುದಕ್ಕೆ ಕೊಡಗಿನಲ್ಲಿ ನಡೆದ ಹೆಣ್ಣು ಕಾಡಾನೆಯೊಂದರ ಹತ್ಯೆ (Elephant Killed) ಸಾಕ್ಷಿಯಾಗಿದೆ. ಶನಿವಾರ ರಾತ್ರಿ ಆಹಾರ ಅರಸಿ ಕುಶಾಲನಗರ (Kushalanagara) ಸಮೀಪ ನಾಡಿಗೆ ಬಂದಿದ್ದ ಹೆಣ್ಣಾನೆ ರಾತ್ರಿ ತೋಟವೊಂದನ್ನು ಪ್ರವೇಶಿಸಿತ್ತು. ಬಳಿಕ ಅದು ಪತ್ತೆಯಾಗಿದ್ದು ಹೆಣವಾಗಿ. ದುಷ್ಕರ್ಮಿಗಳು ಸಿಡಿಸಿದ ಗುಂಡು ಆ ಹೆಣ್ಣಾನೆಯನ್ನು ಕೊಂದು ಕೆಡವಿತ್ತು.
ಸುಮಾರು 18-20 ವರ್ಷದ ಈ ಕಾಡಾನೆಯನ್ನು ಕಟುಕರು ತೋಟದ ತುಂಬ ಅಟ್ಟಾಡಿಸಿ ಮೂರು ಗುಂಡುಗಳನ್ನು ಹಾರಿಸಿ ಕೊಂದು ಹಾಕಿದ್ದಾರೆ. ತೋಟದಲ್ಲಿ ಆಗಿರುವ ಅವಾಂತರಕ್ಕೆ ಅಲ್ಲಿ ಸಾಕ್ಷಿಗಳು ಸಿಗುತ್ತಿವೆ.
ಅಷ್ಟಕ್ಕೂ ಕೊಡಗಿನಲ್ಲಿ ಆನೆ ಮತ್ತು ಮಾನವ ಸಂಘರ್ಷ (Human- Elephant Conflict) ಹೊಸತೇನೂ ಅಲ್ಲ. ಇತ್ತೀಚೆಗಂತೂ ಅದು ತೀವ್ರ ಅನ್ನುವ ಮಟ್ಟಕ್ಕೆ ಹೋಗಿದೆ. ಕೆಲವು ತಿಂಗಳ ಹಿಂದಷ್ಟೇ ಇಲ್ಲಿ ಆನೆಯೊಂದು ಅಜ್ಜ ಮತ್ತು ಮೊಮ್ಮಗನನ್ನು ಒಂದೇ ದಿನ ಕೊಂದು ಹಾಕಿತ್ತು. ಇದರ ನಡುವೆ ಹಲವು ಆನೆಗಳ ಸಾವೂ ಇಲ್ಲಿ ಸದ್ದಿಲ್ಲದೆ ಮುಚ್ಚಿ ಹೋಗಿದೆ. ಕಾಡು ಕಡಿದು ಕಾಫಿ ತೋಟಗಳನ್ನಾಗಿ ಮಾಡಿದ್ದು ತಪ್ಪೋ? ಮನುಷ್ಯರ ಬದುಕೂ ಅನಿವಾರ್ಯ ಎನ್ನುವುದರ ಪ್ರತೀಕವೋ ಅಂತೂ ತಮ್ಮ ವಾಸ ಸ್ಥಾನವನ್ನು ಆಕ್ರಮಿಸಿದ ಮನುಷ್ಯನ ವಿರುದ್ಧ ಆನೆಗಳು ಸೇಡು ತೀರಿಸಿಕೊಂಡಿದ್ದು ನಿಜ. ಕೆಲವೊಮ್ಮೆ ಸಹಜ ಎಂಬ ನೆಲೆಯಲ್ಲಿ ಕಾಡಿನಿಂದ ನೇರವಾಗಿ ಊರಿಗೆ ಪ್ರವೇಶ ಮಾಡಿ ಕಕ್ಕಾಬಿಕ್ಕಿಯಾಗಿ ಅವಾಂತರ ಸೃಷ್ಟಿಯಾಗಿದ್ದೂ ಇದೆ.
ಈ ನಡುವೆ, ಭಾನುವಾರ ಕುಶಾಲನಗರ ತಾಲ್ಲೂಕಿನ ಬಾಳುಗೋಡು ಹಾಗೂ ರಸುಲ್‌ಪುರ ಗ್ರಾಮದ ತೋಟದಲ್ಲಿ ನಡೆದ ಆನೆ ಹತ್ಯಾಕಾಂಡ ಕೇವಲ ಆನೆಯೊಂದರ ಕೊಲೆ ಎಂಬುದಕ್ಕೆ ಸೀಮಿತವಾಗದೆ ಹೃದಯವಂತರ, ಪ್ರಾಣಿ ಪ್ರಿಯರನ್ನು ಹಲವು ಕಾರಣಗಳಿಗಾಗಿ ಮರುಗುವಂತೆ ಮಾಡಿದೆ
ಹೊಟ್ಟೆಯಲ್ಲಿತ್ತು ಪುಟ್ಟ ಮರಿ
ಶನಿವಾರ ರಾತ್ರಿ ಬಾಳುಗೋಡು ಪರಿಸರದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ರಾತ್ರಿ ಯಾವುದೋ ತೋಟಕ್ಕೆ ಹೋಗಿತ್ತು. ಬಳಿಕ ಅದು ಸಿಕ್ಕಿದ್ದು ಹೆಣವಾಗಿ. ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಧಾವಿಸಿದ್ದಾರೆ. ಇದು ಗುಂಡು ಹೊಡೆದು ಮಾಡಿದ ಕೊಲೆಯಾಗಿರುವ ಕಾರಣ ದಾಖಲೆಗಾಗಿ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿದೆ.
ಕಾಫಿ ತೋಟದ ನಡುವೆ ಬಿದ್ದಿದ್ದ ಕಾಡಾನೆಯ ಹೊಟ್ಟೆಯನ್ನು ಅಲ್ಲೇ ಬಗೆದು ನೋಡಿದಾಗ ಮಮ್ಮಲ ಮರುಗುವ ಸರದಿ ವೈದ್ಯರದ್ದಾಗಿತ್ತು. ಯಾಕೆಂದರೆ, ಹಾಗೆ ಅಲ್ಲಿ ಗುಂಡು ತಿಂದು ಪ್ರಾಣ ಕಳೆದುಕೊಂಡ ಆ ಹೆಣ್ಣಾನೆ ಒಂಟಿಯಾಗಿರಲಿಲ್ಲ. ಬದಲಾಗಿ ಅದರ ಹೊಟ್ಟೆಯಲ್ಲಿ ಒಂದು ಪುಟ್ಟ ಮರಿಯೂ ಬೆಳೆಯುತ್ತಿತ್ತು.
ಪುಟ್ಟ ಕಂದನನ್ನು ಹೊಟ್ಟೆಯಲ್ಲಿ ಹೊತ್ತು ಆಹಾರ ಅರಸಿಕೊಂಡು ತೋಟಕ್ಕೆ ಬಂದಿದ್ದ ಆನೆ ಅದಾಗಿತ್ತು. ಇದೀಗ ತಾಯಿಯ ಮರಣದ ನಂತರ ಹೊಟ್ಟೆಯಲ್ಲಿದ್ದ ಮಗು ಕೂಡ ಹೊರಗಿನ ಪ್ರಪಂಚ ನೋಡುವ ಮುನ್ನವೇ ಇಹಲೋಕ ತ್ಯಜಿಸಿದೆ.
ಕುಶಾಲನಗರ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ವನ್ಯಜೀವಿ ವೈದ್ಯರ ಮೂಲಕ ಅದರ ಮರಣೋತ್ತರ ಪರೀಕ್ಷೆ ನಡೆಸಿದಾಗ ಮೃತ ಹೆಣ್ಣಾನೆಯ ಹೊಟ್ಟೆಯಲ್ಲಿ ಗಂಡು ಮರಿ ಪತ್ತೆಯಾಗಿದೆ.
ಇದನ್ನು ಕಂಡ ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಕಣ್ಣೀರು ಹಾಕಿದರು. ಇನ್ನು ಈ ತಾಯಿ ಮಗುವಿನ ಸಾವಿಗೆ ಕಾರಣರಾದ ಕಟುಕರ ವಿರುದ್ಧ ಸೂಕ್ತ ಕ್ರಮವಾಗಬೇಕು ಅಂತ ಪ್ರಾಣಿಪ್ರಿಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Elephant killed : 20 ವರ್ಷದ ಹೆಣ್ಣು ಕಾಡಾನೆಯನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು