Site icon Vistara News

Elephant attack | ಹಾಸನದಲ್ಲಿ ಆನೆ ದಾಳಿ: ದೇವರ ದರ್ಶನ ಮಾಡಿ ಬರುತ್ತಿದ್ದ ಯುವಕ ದಾರುಣ ಮೃತ್ಯು

ane dali

ಹಾಸನ: ಹಾಸನ ಜಿಲ್ಲೆಯಲ್ಲಿ ಆನೆಗಳ ಮಾರಣಾಂತಿಕ ದಾಳಿ (Elephant attack) ಮುಂದುವರಿದಿದೆ. ಮಂಗಳವಾರ ಮುಂಜಾನೆ ಆನೆಯೊಂದರ ದಾಳಿಗೆ ಯುವಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತಪಟ್ಟ ಯುವಕನನ್ನು ಮನು (34) ಎಂದು ಗುರುತಿಸಲಾಗಿದೆ.

ಮಂಗಳವಾರ ಬೆಳಗ್ಗೆ ದೇವಾಲಯದಲ್ಲಿ ಪೂಜೆ ಮುಗಿಸಿ ವಾಪಸಾಗುವ ವೇಳೆ ಈ ದಾರಿ ಮಧ್ಯೆ ಆನೆ ದಾಳಿ ಮಾಡಿದ್ದು, ಯಾವ ಕಡೆಗೂ ಓಡಿ ಹೋಗಲು ಸಾಧ್ಯವಾಗದೆ ನಡು ರಸ್ತೆಯಲ್ಲಿ ಬಿದ್ದಿದ್ದಾನೆ. ಆನೆ ಯುವಕನ ತಲೆಗೇ ಕಾಲಿಟ್ಟು ಕೊಂದು ಹಾಕಿದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಗ್ರಾಮಸ್ಥರ ಆಕ್ರೋಶ
ಹೆಬ್ಬನಹಳ್ಳಿ ಗ್ರಾಮಕ್ಕೆ ಆನೆಗಳ ದಾಳಿ ನಿರಂತರವಾಗಿದ್ದು, ಈ ಗ್ರಾಮದಲ್ಲಿ ಇದುವರೆಗೆ ೮೭ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸರಕಾರ ಮತ್ತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬಾರದೆ ಮೃತದೇಹ ಎತ್ತುವುದಿಲ್ಲ ಎಂದು ಘೋಷಿಸಿದ್ದಾರೆ.

ನಾವು ಕಾಡಿನಲ್ಲಿ ಮನೆ ಮಾಡಿಕೊಂಡಿಲ್ಲ. ಕಾಡಿನಲ್ಲಿ ನಡೆದಿರುವ ಘಟನೆಯೂ ಇದಲ್ಲ. ನಮ್ಮ ಹಿಡುವಳಿ ಭೂಮಿಗೆ ನುಗ್ಗಿ ಈ ಕೃತ್ಯ ನಡೆಸಿದೆ. ನಮಗೆ ರಕ್ಷಣೆ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದೌಡಾಯಿಸಿದ್ದಾರೆ.

ನಿನ್ನೆ ಚಿರತೆ ದಾಳಿಗೆ ಯುವಕ ಬಲಿ
ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಸೋಮವಾರ ಚಿರತೆ ದಾಳಿಗೆ ಮಂಜುನಾಥ್ (20) ಎಂಬ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿದ್ದ. ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದ. ಹೋಗುವಾಗಲೋ, ಬರುವಾಗಲೋ ಚಿರತೆ ಅವನ ಮೇಲೆ ದಾಳಿ ಮಾಡಿದ್ದು, ಯುವಕ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.

ಇದನ್ನೂ ಓದಿ | Leopard attack | ದೇವಸ್ಥಾನಕ್ಕೆ ಹೋಗಿದ್ದ ಪದವಿ ವಿದ್ಯಾರ್ಥಿ ಮೇಲೆ ಚಿರತೆ ದಾಳಿ, ಯುವಕ ಸ್ಥಳದಲ್ಲೇ ಬಲಿ

Exit mobile version