ಲೋಹಿತ್ ಎಂ.ಆರ್, ಮಡಿಕೇರಿ
ವರ್ಷದ ಹಿಂದೆ ಬಂಡಿಪುರ ಅರಣ್ಯಕ್ಕೆ ಬಿಡಲಾಗಿದ್ದ ಸಾಕಾನೆ ಮರಳಿ ತನ್ನ ಗೂಡಿಗೆ ಸೇರುವ ಮೂಲಕ ಅಚ್ಚರಿ ಮೂಡಿಸಿದೆ. ಈ ಆನೆ ಮಾವುತ ಕಾವಾಡಿಗರ ಪ್ರೀತಿ ಅರಸಿ ಬರೋಬ್ಬರಿ ನಾಲ್ಕು ಸಾವಿರ ಕಿ.ಮೀ ಸುತ್ತಿ ನಾಲ್ವರು ಸ್ನೇಹಿತರೊಂದಿಗೆ ಮತ್ತೆ ಹುಟ್ಟೂರು ದುಬಾರೆಯಲ್ಲಿ ಪ್ರತ್ಯಕ್ಷವಾಗಿದೆ.
ಹೌದು, ಹೀಗೊಂದು ದೃಶ್ಯ ಕಂಡು ಬಂದಿರುವುದು ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಲ್ಲಿ. 2016ರಲ್ಲಿ ಈ ಆನೆಯನ್ನು ಕುಶಾಲನಗರ ಅರಣ್ಯ ವ್ಯಾಪ್ತಿಯಿಂದ ಹಿಡಿದು ತರಲಾಗಿತ್ತು. ಆತನನ್ನು ಇದೇ ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸಿ ಕುಶ ಎಂದು ನಾಮಕರಣ ಮಾಡಲಾಗಿತ್ತು.
ಕೆಲ ದಿನಗಳಿಂದ ಆತನಿಗೆ ಇಲ್ಲಿ ಸಂಗಾತಿಯ ಪ್ರೀತಿ ಕಾಡತೊಡಗಿತ್ತು. ಹೀಗಾಗಿ ಆತ ಮತ್ತೆ ಶಿಬಿರದಿಂದ ತಪ್ಪಿಸಿಕೊಂಡು ಕಾಡು ಸೇರಿದ. ಆತನಿಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು, ಮಾವುತರು, ಕಾವಾಡಿಗಳು ಸಾಕಷ್ಟು ಶೋಧ ನಡೆಸಿದ ಬಳಿಕ ಆತ ಸೆರೆ ಸಿಕ್ಕಿದ್ದ. ಆದರೆ ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆ ಆನೆಯನ್ನು ಅರಣ್ಯಕ್ಕೆ ಬಿಡುವಂತೆ ಸರ್ಕಾರಕ್ಕೆ ಒತ್ತಾಯಿಸಿತ್ತು. ಹೀಗಾಗಿ ಸರ್ಕಾರದ ನಿರ್ದೇಶನದಂತೆ 2021ರ ಜೂನ್ ಮೊದಲ ವಾರದಲ್ಲಿ ಕುಶನನ್ನು ರಾತ್ರೋರಾತ್ರಿ ಲಾರಿಯ ಮೂಲಕ ಕರೆದೊಯ್ದು ಬಂಡೀಪುರ ಅರಣ್ಯ ವ್ಯಾಪ್ತಿಯ ಮೂಲೆಹೊಳೆ ಎಂಬಲ್ಲಿ ಬಿಡಲಾಗಿತ್ತು. ಆಗ ಆನೆ ಸಾಕಿದ್ದ ಮಾವುತರು ಕಾವಾಡಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಅನುಭವಿಸಿದ್ದ ನೋವು ಅಷ್ಟಿಷ್ಟಲ್ಲ.
ಇದನ್ನೂ ಓದಿ | ಅರಣ್ಯ ಇಲಾಖೆ ಸೆರೆ ಹಿಡಿದ ಕೆಲ ಹೊತ್ತಿನಲ್ಲೇ ಮೃತಪಟ್ಟ ಹೆಣ್ಣಾನೆ
ವಿಧಿ ಇಲ್ಲದೆ ಸರ್ಕಾರದ ಆದೇಶ ಪಾಲಿಸಿದ್ದ ಅಧಿಕಾರಿಗಳು ಕೊನೆಗೂ ಆನೆಯನ್ನು 400 ಕಿ.ಮೀಟರ್ ದೂರದ ಬಂಡಿಪುರ ಕಾಡಿಗೆ ಬಿಟ್ಟು ಬಂದಿದ್ದರು. ಬಂಡಿಪುರದ ಮೂಲೆಹೊಳೆ ಅರಣ್ಯಕ್ಕೆ ಕುಶನನ್ನು ಬಿಟ್ಟು ಬಂದಾಗ ಆತ ತಮ್ಮವರಿಗಾಗಿ ಹುಡುಕಾಡಿದ್ದು ಅಷ್ಟಿಷ್ಟಲ್ಲ. ಕೇವಲ ಒಂದೇ ಒಂದು ವಾರವಷ್ಟೇ ಅದು ಆ ವ್ಯಾಪ್ತಿಯಲ್ಲಿ ಇತ್ತು. ಬಳಿಕ ತನ್ನವರಿಗಾಗಿ ಹುಡುಕಾಟ ಆರಂಭಿಸಿದ್ದ ಕುಶ ಕರ್ನಾಟಕ ಬಿಟ್ಟು ಕೇರಳದತ್ತ ಪ್ರಯಾಣ ಬೆಳೆಸಿದ್ದ. ನಂತರ ಮತ್ತೆ ಅಲ್ಲಿಂದ ನಾಗರಹೊಳೆ ವ್ಯಾಪ್ತಿಗೆ ಶಿಫ್ಟ್ ಆದ. ಹೀಗೆ ನಿತ್ಯ ತನ್ನವರನ್ನು ಹುಡುಕಾಡುತ್ತಲೇ ಬರೋಬ್ಬರಿ ಮೂರೂವರೆ ಸಾವಿರದಿಂದ ನಾಲ್ಕು ಸಾವಿರ ಕಿ.ಮೀ ಅರಸುತ್ತಲೇ ಅಲೆದಾಡಿತ್ತು. ಈಗ ಕೊನೆಗೂ ತಾನು ಹುಟ್ಟಿ ಬೆಳೆದ ಜಾಗಕ್ಕೆ ಹಿಂತಿರುಗಿರುವ ಕುಶ ಆನೆಯು ದುಬಾರೆ ಸಾಕಾನೆ ಶಿಬಿರ ತಲುಪಿದೆ. ಒಂದು ವರ್ಷ 7 ದಿನಗಳ ಬಳಿಕ ಈತ ಕುಶಾಲನಗರ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಾಣಿಕೊಂಡಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ.
ಕುಶ ಒಬ್ಬನೇ ಇಲ್ಲಿಗೆ ಎಂಟ್ರಿ ಕೊಟ್ಟಿಲ್ಲ. ತನ್ನೊಂದಿಗೆ ಮೂರು ಹೆಣ್ಣಾನೆ, ಒಂದು ಗಂಡಾನೆಯನ್ನು ಕರೆದುಕೊಂಡು ಬಂದಿದ್ದಾನೆ. ನಾಲ್ಕು ಸಾವಿರ ಕಿ. ಮೀಟರ್ ಹುಡುಕಾಡುತ್ತ ಬಂದಿರುವುದು ಅಚ್ಚರಿ ಮೂಡಿಸಿದೆ. ಅಳವಡಿಸಿದ್ದ ರೇಡಿಯೊ ಕಾಲರ್‌ನಲ್ಲಿ ಆನೆಯ ಎಲ್ಲ ಚಲನವಲನಗಳು ಟ್ರ್ಯಾಕ್ ಆಗಿವೆ.
ಮಾವುತ, ಕಾವಾಡಿಗರ ಪ್ರೀತಿ ಅರಸಿ ಸಾವಿರಾರು ಕಿ. ಮೀಟರ್ ಕ್ರಮಿಸಿ ಬಂದ ಆನೆಗೆ ಸರ್ಕಾರದ ನಿಯಮ ಅಡ್ಡಗಾಲು ಹಾಕಿದೆ. ಸರ್ಕಾರದ ನಿಯಮದ ಪ್ರಕಾರ ಅರಣ್ಯ ಇಲಾಖೆ ಅದನ್ನು ಹತ್ತಿರಕ್ಕೆ ಸೇರಿಸುತ್ತಿಲ್ಲ. ಹೀಗಾಗಿ ತಮ್ಮವರಿಗಾಗಿ ಕುಶ ಕಾಡಂಚಿನಲ್ಲೆ ಅಲೆದಾಡುತ್ತಿದ್ದಾನೆ. ಸರ್ಕಾರದ ಮುಂದಿನ ಆದೇಶ ಏನು ಬರುತ್ತದೆಯೊ? ಕುಶನಿಗೆ ಮತ್ತೆ ಮಾವುತ, ಕಾವಾಡಿಗರ ಪ್ರೀತಿ ಸಿಗುವುದೋ ಎನ್ನುವುದನ್ನು ಕಾದು ನೋಡಬೇಕಿದೆ. ಮನುಷ್ಯರು ತಮ್ಮ ಬಗ್ಗೆ ತೋರುವ ಪ್ರೀತಿಯನ್ನು ಪ್ರಾಣಿಗಳು ಎಂದಿಗೂ ಮರೆಯುವುದಿಲ್ಲ ಎಂಬುದು ಕುಶ ಆನೆಯ ಮೂಲಕ ಮತ್ತೆ ಸಾಬೀತಾಗಿದೆ.
ಇದನ್ನೂ ಓದಿ | ಮಕ್ಕಳ ಕಥೆ: ಆನೆ ಬಾಲ ಹಿಡಿದು ಸ್ವರ್ಗಕ್ಕೆ ಹೋದ ಗೋಪಾಲ