ಚಿಕ್ಕಮಗಳೂರು: ಶಕ್ತಿ ಯೋಜನೆ (Shakti Scheme) ಜಾರಿಗೆ ಬಂದ ಮೇಲೆ ಮಹಿಳೆಯರ ಓಡಾಟ ಎಂದಿಗಿಂತ ತುಸು ಹೆಚ್ಚಿದೆ. ಉಚಿತ ಪ್ರಯಾಣದ (Free Bus Service) ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ವೀಕೆಂಡ್ ಬಂದರೆ ಸಾಕು ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳೂ ಸೇರಿದಂತೆ ಇನ್ನಿತರ ಕಡೆ ಕೆಂಪು ಬಸ್ ಏರಿ ಹೊರಟು ಬಿಡುತ್ತಿದ್ದಾರೆ. ಈ ಯೋಜನೆ ಜಾರಿಗೆ 14ನೇ ದಿನಕ್ಕೆ ಕಾಲಿಟ್ಟಿದ್ದು, ಇಲ್ಲಿಯವರೆಗೆ ಮಹಿಳೆಯರು ಪ್ರಯಾಣಿಸಿದ ಒಟ್ಟು ಮೌಲ್ಯ 166 ಕೋಟಿ ರೂಪಾಯಿಗೂ ಹೆಚ್ಚಾಗಿದೆ. ಈ ನಡುವೆ ಮೂಡಿಗೆರೆ ತಾಲೂಕಿನ ಕೊಲ್ಲಿಬೈಲ್ ಗ್ರಾಮದಲ್ಲಿ ಸರ್ಕಾರಿ ಬಸ್‌ಗೆ ಆನೆಯೊಂದು ಅಡ್ಡ ಬಂದಿದ್ದು, ಪ್ರಯಾಣಿಕರ ಗಾಬರಿಗೆ ಕಾರಣವಾಗಿದೆ. ಆದರೆ, ಎಲ್ಲರ ಕಿರುಚಾಟ ಕೇಳಿ ಆನೆ ಅಲ್ಲಿಂದ ಕಾಲ್ಕಿತ್ತಿದೆ. ಈ ವಿಡಿಯೊ ವಾಟ್ಸಪ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Video Viral) ಆಗಿದೆ.
ಈ ವಿಡಿಯೊದಲ್ಲಿ ಆನೆಯನ್ನು ಕಂಡ ನೆಟ್ಟಿಗರು ತರಹೇವಾರು ಕಮೆಂಟ್ ಮಾಡುತ್ತಿದ್ದಾರೆ. ಬಹುಶಃ ಈ ಆನೆಯೂ ಉಚಿತ ಬಸ್‌ಗಾಗಿ ಕಾಯುತ್ತಾ ಇರಬೇಕು. ಒಳಗೆ ಸೀಟ್ ಸಿಗುತ್ತದೆಯೋ? ಇಲ್ಲವೋ ಎಂದು ನೋಡಲು ಹೋದಾಗ ಸಹ ಪ್ರಯಾಣಿಕರು ಕಿರುಚಾಡಿದ್ದನ್ನು ಕಂಡು ಸಹವಾಸವೇ ಸಾಕಪ್ಪಾ ಎಂದು ಓಡಿಹೋಗಿರಬೇಕು. ಈ ಮಹಿಳೆಯರು ಸೀಟ್ ಬಿಟ್ಟು ಕೊಡಬಹುದಿತ್ತು? ಆದರೆ, ಸೀಟ್ ಬಿಟ್ಟುಕೊಡದೆ ಕಿರುಚಾಡಿದ್ದಾರೆ ಎಂದೆಲ್ಲ ಕಮೆಂಟ್‌ಗಳನ್ನು ಮಾಡಿದ್ದಾರೆ.
ಚಿಕ್ಕಮಗಳೂರು-ಮೂಡಿಗೆರೆ ರಸ್ತೆಯ ಕೊಲ್ಲಿಬೈಲ್ ಬಳಿಯ ರಸ್ತೆ ಮೇಲೆ ಕಾಡಾನೆಯೊಂದು ನಿಂತಿತ್ತು. ಈ ವೇಳೆ ಅಲ್ಲಿಗೆ ಬಸ್ ಸಹ ಬಂದಿದೆ. ಬಸ್ ಬಂದಿದ್ದನ್ನು ಕಂಡ ಆನೆಯು ಸೀದಾ ಬಸ್‌ನತ್ತ ರಾಜ ಗಾಂಭೀರ್ಯವಾಗಿ ನಡೆದುಕೊಂಡು ಬಂದಿದೆ. ಹೀಗೆ ಆ ಆನೆಯು ಹತ್ತಿರ ಹತ್ತಿರಕ್ಕೆ ಬಂದಿದೆ.
ಬಸ್ಸಿಗೆ ಅಡ್ಡ ಬಂದ ಆನೆ; ಇಲ್ಲಿದೆ ನೋಡಿ ವಿಡಿಯೊ
ಇದನ್ನೂ ಓದಿ: Free Bus Service: ಹೆಚ್ಚಿದ ನಾರಿ ಶಕ್ತಿ! 166 ಕೋಟಿ ರೂಪಾಯಿ ಮೀರಿ ಮುನ್ನುಗ್ಗುತ್ತಿರುವ ಶಕ್ತಿ ಸ್ಕೀಂ!
ಇತ್ತ ಒಳಗೆ ಕುಳಿತಿರುವ ಪ್ರಯಾಣಿಕರಿಗೆ ಆತಂಕವಾಗಿದೆ. ಒಳಗಿರುವ ಮಹಿಳೆಯರು ಕಿರುಚಾಡಲಾರಂಭಿಸಿದ್ದಾರೆ. ಆಗ ಅಲ್ಲೇ ಇದ್ದ ಸಹ ಪ್ರಯಾಣಿಕರೊಬ್ಬರು, ಆ ಆನೆ ಏನೂ ಮಾಡುವುದಿಲ್ಲ. ಯಾರೂ ಕಿರುಚಾಡಬೇಡಿ. ಎಲ್ಲರೂ ಶಾಂತತೆಯಿಂದ ಇರಿ ಎಂದು ಹೇಳಿದ್ದಾರೆ. ಅಷ್ಟರಲ್ಲಿ ಆ ಆನೆ ಸಹ ಅಲ್ಲಿಂದ ಬಸ್ ಪಕ್ಕದಲ್ಲಿಯೇ ಹಾದು ಓಡಿ ಹೋಗಿದೆ.