Site icon Vistara News

Elephant revenge | ಸ್ಥಳಾಂತರಕ್ಕೆ ಸಿಟ್ಟು: 6 ತಿಂಗಳ ಬಳಿಕ ಅದೇ ಮನೆಯನ್ನು ಹುಡುಕಿ ಬಂದು ದಾಂಧಲೆ ಮಾಡಿದ ಆನೆ

Elephant returns

ಹಾಸನ: ಹಾವಿನ ರೋಷ ಹನ್ನೆರಡು ವರುಷ ಅಂತ ಕೇಳಿದ್ದೇವೆ. ಆದರೆ, ಆನೆಗೂ ಅಂತಹುದೇ ಒಂದು ಸೇಡಿನ ಗುಣವಿದೆಯಾ (Elephant revenge) ಎಂಬ ಪ್ರಶ್ನೆ ಎದ್ದುಬಂದಿದೆ. ಇದಕ್ಕೆ ಕಾರಣವಾಗಿರುವುದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ನಡೆದ ಒಂದು ಘಟನೆ.

ಕೆಸಗುಲಿ ಗ್ರಾಮದಲ್ಲಿ ಆನೆಗಳ ಹಾವಳಿ ವಿಪರೀತ. ಇಲ್ಲಿನ ಮನೆಯೊಂದಕ್ಕೆ ಆನೆಯೊಂದು ಪದೇಪದೆ ದಾಳಿ ಮಾಡುತ್ತಿತ್ತು. ಇದರಿಂದ ಬೇಸತ್ತ ಮನೆಯವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಆನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಿತ್ತು. ಆರು ತಿಂಗಳ ಹಿಂದೆ ಕೊನೆಯ ಬಾರಿಗೆ ದಾಳಿ ಮಾಡಿದ್ದ ಆನೆಯನ್ನು ಮೂರು ತಿಂಗಳ ಹಿಂದೆ ಹುಡುಕಿ ಸ್ಥಳಾಂತರ ಮಾಡಲಾಗಿತ್ತು. ಅದನ್ನು ನೂರಾರು ಕಿಲೋಮೀಟರ್‌ ದೂರದ ಕಾಡಿನಲ್ಲಿ ಬಿಟ್ಟು ಬರಲಾಗಿತ್ತು. ಈಗ ನೋಡಿದರೆ ಅದೇ ಆನೆ ಬುಧವಾರ ರಾತ್ರಿ ಅದೇ ಮನೆಯನ್ನು ಹುಡುಕಿ ಬಂದು ದಾಳಿ ಮಾಡಿದೆ.

ರಾತ್ರಿ ಆನೆ ದಾಳಿ ನಡೆದ ಬಳಿಕ ಮನೆ ಬಳಿ ಸೇರಿದ ಜನರು

ಮತ್ತೆ ಬಂದು ದಾಂಧಲೆ
ಸಕಲೇಶಪುರ ತಾಲೂಕಿನ ಕೆಸಗುಲಿ ಗ್ರಾಮದ ಗಿರೀಶ್‌ ಎಂಬವರ ಮನೆಯೇ ಆನೆ ಪದೇಪದೆ ಟಾರ್ಗೆಟ್‌ ಮಾಡುತ್ತಿದ್ದ ಜಾಗ. ಹೀಗಾಗಿ ಅದನ್ನು ಮೂರು ತಿಂಗಳ ಹಿಂದೆ ಸೆರೆ ಹಿಡಿದು ನೂರಾರು ಕಿ.ಮೀ. ದೂರದ ಮಲೆಮಹದೇಶ್ವರ ಬೆಟ್ಟಕ್ಕೆ ಒಯ್ದು ಬಿಟ್ಟು ಬರಲಾಗಿತ್ತು. ಆದರೆ, ಅದೇ ಆನೆ ಬುಧವಾರ ರಾತ್ರಿ ಮರಳಿ ಬಂದು ದಾಳಿ ದಾಳಿ ಮಾಡಿದೆ.

ಕಿಟಕಿ ಗಾಜು ಒಡೆದ ಆನೆ

ಒಂಟಿ ಸಲಗದ ಆರ್ಭಟಕ್ಕೆ ಮನೆಯ ಬಾಗಿಲು ಕಿಟಕಿಗಳೆಲ್ಲಾ ಪುಡಿ ಪುಡಿಯಾಗಿವೆ. ಮುಂಜಾನೆ ಎರಡು ಗಂಟೆಯ ಹೊತ್ತಿಗೆ ಆನೆ ಏಕಾಏಕಿಯಾಗಿ ದಾಳಿ ಮಾಡಿದೆ. ಮನೆ ಮಂದಿಯೆಲ್ಲ ನಿದ್ರೆಯಲ್ಲಿದ್ದಾಗ ಬಂದಿದ್ದ ಆನೆ ದಾಳಿ ಮಾಡುತ್ತಿದ್ದಂತೆಯೇ ಮನೆಯವರು ಎಚ್ಚೆತ್ತು ಗಮನಿಸಿದ್ದಾರೆ. ಅದೇ ಆನೆ ಎನ್ನುವುದನ್ನು ಗುರುತಿಸಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಆನೆಗಳು ಹೊಲ ಗದ್ದೆಗಳಿಗೆ ನುಗ್ಗುತ್ತವೆ. ಈ ಆನೆ ಮನೆಯನ್ನು ಟಾರ್ಗೆಟ್‌ ಮಾಡಿದ್ದರಿಂದ ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ.

ಇದನ್ನೂ ಓದಿ | Elephant attack | ಹುಲ್ಲು ಕೊಯ್ಯಲು ಹೋದ ಮಹಿಳೆಯರ ಮೇಲೆ ಕಾಡಾನೆ ದಾಳಿ: ಒಬ್ಬರು ಸ್ಥಳದಲ್ಲೇ ಮೃತ್ಯು

Exit mobile version