Site icon Vistara News

Elephant trapped : ಮೂರು ತಿಂಗಳಿನಿಂದ ಸತಾಯಿಸುತ್ತಿರುವ 10 ವರ್ಷದ ಗಂಡಾನೆ ಕೊನೆಗೂ ಹನಿ ಟ್ರ್ಯಾಪ್‌ಗೆ ಬಿತ್ತು!

Elephant trap

#image_title

ತೀರ್ಥಹಳ್ಳಿ: ಪಟ್ಟಣದ ಕುರುವಳ್ಳಿ ರಾಮೇಶ್ವರ ದೇವಸ್ಥಾನದ ಬಳಿ ಡಿಸೆಂಬರ್‌ 31ರ ಮುಂಜಾನೆ ಕಾಣಿಸಿಕೊಂಡು ಕಳೆದ ಮೂರು ತಿಂಗಳಿನಿಂದ ಸತಾಯಿಸುತ್ತಿದ್ದ 10 ವರ್ಷ ಪ್ರಾಯದ ಗಂಡು ಕಾಡಾನೆಯನ್ನು ಅರಣ್ಯ ಇಲಾಖೆ ಕೊನೆಗೂ ಸೆರೆ (Elephant trapped) ಹಿಡಿದಿದೆ.

ಹಾರೋಗೊಳಿಗೆ, ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗೆರೆ, ಅಮ್ತಿ, ಮಳೂರು, ಬಳಗಟ್ಟೆ, ಕೆರೆಕೊಪ್ಪ ಸುತ್ತಮುತ್ತಲಿನ ಸುಮಾರು 320 ಹೆಕ್ಟೇರ್‌ ಕಿರು ಅರಣ್ಯ ಪ್ರದೇಶದಲ್ಲಿ ಆನೆ ಮೂರು ತಿಂಗಳಿನಿಂದ ಬೀಡುಬಿಟ್ಟಿತ್ತು.

ಸುತ್ತಲಿನ ರೈತರ ತೋಟಗಳ ಬೆಳೆ ಹಾನಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆನೆ ಹಿಡಿಯುವಂತೆ ಅಗ್ರಹಿಸಿದ್ದರು. ಇಲ್ಲಿಯವರೆಗೆ ಈ ಆನೆ ಯಾವುದೇ ಜೀವ ಹಾನಿ ಮಾಡಿರಲಿಲ್ಲವಾದರೂ ಬೆಳೆ ಹಾನಿ ಮಾಡಿತ್ತು. ವಿಶೇಷ ಎಂದರೆ ಈ ಆನೆ ಹೆಚ್ಚಾಗಿ ಜನನಿಬಿಡ ಪ್ರದೇಶದಲ್ಲಿಯೇ ಹಾಜರು ಹಾಕುತ್ತಿತ್ತು.
ಹಾಗಾಗಿ ಹಿಡಿಯುವುದು ಅನಿವಾರ್ಯ ಆಗಿತ್ತು.

ಸಿಕ್ಕಿಬಿತ್ತು ಕಾಡಾನೆ

ಈ ಹಿನ್ನೆಲೆಯಲ್ಲಿ ಮಾರ್ಚ್‌ 24ರಂದು ಆನೆ ಹಿಡಿಯುವ ಕಾರ್ಯಾಚರಣೆ ಆರಂಭಗೊಂಡಿತ್ತು. ಆನೆ ಹಿಡಿಯಲು ಸೆಣಬು, ಚೈನ್‌, ಅರಿವಳಿಕೆ ಮದ್ದು, ಕ್ರೇನ್‌, ಸಾಕಾನೆ, ಮಚಾನ್ ಮುಂತಾದ ಅಗತ್ಯತೆಗಳನ್ನು ಸಿದ್ಧಪಡಿಸಿದ್ದರು. ಆನೆ ಹೆಜ್ಜೆ ಗುರುತು ಇರುವ ಪ್ರದೇಶದ ಯಾವುದು ಎಂದು ಗುರುತಿಸಲು ಸಿಬ್ಬಂದಿ ಮೊದಲು ಕೂಂಬಿಂಗ್‌ ಮಾಡಿಕೊಂಡಿದ್ದರು. ನಂತರ ಸಾಕಾನೆಗಳ ಸಹಾಯದಿಂದ ಆನೆಗೆ ಡಾಟ್‌ (ಶೂಟ್‌ ಮೂಲಕ ಅರಿವಳಿಕೆ ನೀಡುವುದು) ಮಾಡುವ ಪ್ರಯತ್ನ ನಡೆಸಿದ್ದರು.

ಆದರೆ ಈ ಗಂಡಾನೆ ವೇಗವಾಗಿ ನಾಪತ್ತೆಯಾಗುತ್ತಿದ್ದ ಕಾರಣ ತಕ್ಷಣಕ್ಕೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಗುರುವಾರ ಸಂಜೆ ಸುಮಾರು 6.30ರಿಂದ 7 ಗಂಟೆ ಸುಮಾರಿಗೆ ಆನೆಗೆ ಮೊದಲ ಡಾಟ್‌ ನೀಡಲಾಗಿತ್ತು. ಕೆಲವು ನಿಮಿಷಗಳ ನಂತರ ಮತ್ತೊಂದು ಬೂಸ್ಟರ್‌ ಡಾಟ್‌ ನೀಡಿ ಆನೆಯ ಕಾಲುಗಳನ್ನು ಕಟ್ಟಲಾಗಿತ್ತು. ಶುಕ್ರವಾರ ಬೆಳಿಗ್ಗೆ ಕ್ರೇನ್‌ ಸಹಾಯದಿಂದ ಆನೆಯನ್ನು ಲಾರಿಗೆ ಹತ್ತಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಪಶು ವೈದ್ಯರಾದ ಚಾಮರಾಜನಗರದ ಡಾ. ಮುಜೀಬ್‌ ರೆಹಮಾನ್‌, ಬಂಡೀಪುರದ ಡಾ. ವಸೀಮ್‌, ಶಿವಮೊಗ್ಗದ ಡಾ. ವಿನಯ್‌, ಮೃಗಾಲಯದ ವೈದ್ಯ ಡಾ. ಮುರುಳಿ, ಶಾರ್ಪ್‌ ಶೂಟರ್‌ ಡಾ. ಅಕ್ರಮ್‌ ಕಾಡಾನೆಯನ್ನು ಸೆರೆ ಹಿಡಿಯಲು ವೈದ್ಯಕೀಯ ತಂಡವಾಗಿ ಕಾರ್ಯ ನಿರ್ವಹಿಸಿದ್ದರು.

ಕೊನೆಗೂ ಸಿಕ್ಕಿಬಿದ್ದ ಕಾಡಾನೆ

ಸಕ್ರೇಬೈಲು ಆನೆ ಬಿಡಾರದ 4 ಆನೆಗಳಾದ ಭಾನುಮತಿ, ಸಾಗರ್, ಬಾಲಣ್ಣ, ಬಹದ್ದೂರ್‌, ನಾಲ್ವರು ಮಾವುತರು, ಎಂಟು ಮಂದಿ ಕಾವಾಡಿಗಳು, ತೀರ್ಥಹಳ್ಳಿ, ಮೇಗರವಳ್ಳಿ, ಮಂಡಗದ್ದೆ ವಲಯಾರಣ್ಯದ ಸಿಬ್ಬಂದಿ, ಎಸಿಎಫ್‌ ಪ್ರಕಾಶ್‌ ಹಾಗೂ ವನ್ಯಜೀವಿ ವಿಭಾಗದ ಸಹಕಾರದಲ್ಲಿ ಆನೆಯನ್ನು ಸೆರೆಹಿಡಿಯಲಾಗಿದೆ ಎಂದು ಡಿಎಫ್‌ಒ ಶಿವಶಂಕರ್‌ ತಿಳಿಸಿದ್ದಾರೆ.

ಸಾಕು ಹೆಣ್ಣಾನೆ ಭಾನುಮತಿ ಬಳಸಿ ಕಾಡಲ್ಲಿರುವ ಆನೆಯನ್ನು ಸೆಳೆಯುವ ತಂತ್ರವನ್ನು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯೋಗ ಮಾಡಿದ್ದಾರೆ. ಹನಿ ಟ್ರ್ಯಾಪ್‌ಗಾಗಿ ಹೆಣ್ಣಾನೆಯನ್ನು ಕಾಡಾನೆ ಓಡಾಡುವ ಸ್ಥಳಗಳಲ್ಲಿ ಕಟ್ಟಲಾಗುತ್ತದೆ. ವಾಸನೆ ಗ್ರಹಿಸಿ ಸುತ್ತಲ ಪ್ರದೇಶಲ್ಲಿ ಹೆಣ್ಣಾನೆ ಇರುವುದನ್ನು ಗಂಡಾನೆಗಳು ಗ್ರಹಿಸುತ್ತವೆ.

ಇದೇ ರೀತಿ ಮಧ್ಯ ಕಾಡಿನಿಂದ ಡಾಟ್‌ಗೆ ಅನುಕೂಲವಾಗುವ ಕಡೆಗೆ ಹೆಣ್ಣಾನೆಯನ್ನು ಓಡಾಡಿಸಿ ಒಂದು ಪ್ರದೇಶದಲ್ಲಿ ಕಟ್ಟುತ್ತಾರೆ. ಆನೆ ಬರುವ ಸಾಧ್ಯತೆ ಇದ್ದರೆ ವೈದ್ಯರ ತಂಡ ಮಚಾನ್‌ ನಿರ್ಮಿಸಿ ರಾತ್ರಿ ಕಾವಲು ಕಾಯುತ್ತಾರೆ. ಕಾಡಾನೆ ಕಂಡು ಬಂದ ತಕ್ಷಣ ಅರವಳಿಕೆ ನೀಡಿ ಸೆರೆ ಹಿಡಿಯಲಾಗುತ್ತದೆ. ಈಗ ಇಲ್ಲಿ ಸೆರೆ ಹಿಡಿದ ಕಾಡಾನೆಯನ್ನು ನಾಗರಹೊಳೆ ಅಭಯಾರಣ್ಯದಲ್ಲಿ ಬಿಡಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.

ಇದನ್ನೂ ಓದಿ : Elephant calf rescued : ತಾಯಿಯಿಂದ ಬೇರ್ಪಟ್ಟು ಡ್ಯಾಂ ಬಳಿ ಬಂದಿದ್ದ ಮರಿಯಾನೆ, ಮತ್ತೆ ಹಿಂಡಿಗೆ ಸೇರಿಸಿದ ಜನ

Exit mobile version