Site icon Vistara News

Elephant death : ಸೊಂಡಿಲಿಗೆ ಗಾಯವಾಗಿ ಕಷ್ಟಪಡುತ್ತಿದ್ದ ಐದು ವರ್ಷದ ಗಂಡಾನೆ ಮೃತ್ಯು

Elephant death

#image_title

ಹುಬ್ಬಳ್ಳಿ: ಸೊಂಡಿಲಿಗೆ ಗಾಯವಾಗಿ ನೋವು ಅನುಭವಿಸುತ್ತಿದ್ದ ಐದು ವರ್ಷದ ಗಂಡು ಆನೆಯೊಂದು ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಪಂ ವ್ಯಾಪ್ತಿಯ ಮಸಳಿಕಟ್ಟಿ ಅರಣ್ಯ ಪ್ರದೇಶದಲ್ಲಿ ಮೃತಪಟ್ಟಿದೆ (Elephant death).

ಮುಂಡಗೋಡ ತಾಲೂಕಿನ ಅತ್ತಿವೇರಿ ಅರಣ್ಯ ಪ್ರದೇಶದಲ್ಲಿ ಗಾಯಗೊಂಡಿದ್ದ ಆನೆಗೆ ಚಿಕಿತ್ಸೆ ನೀಡಲು ಪ್ರಯತ್ನಿಸಲಾಗಿತ್ತು. ಆದರೆ ಅಲ್ಲಿಂದ ತಪ್ಪಿಸಿಕೊಂಡಿದ್ದ ಆನೆ ಕಲಘಟಗಿ ತಾಲೂಕಿನ ಅರಣ್ಯಕ್ಕೆ ಬಂದಿತ್ತು. ಸೊಂಡಿಲು ಬಳಿ ಗಾಯಗೊಂಡಿದ್ದ ಆನೆಗೆ ಆಹಾರ ಸೇವಿಸಲು ಕಷ್ಟಪಡುತ್ತಿತ್ತು. ಇದನ್ನು ಗಮನಿಸಿದ‌ ಅರಣ್ಯ ಸಿಬ್ಬಂದಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದರು.

ಮೃತ ಆನೆ ಸುಮಾರು ಐದು ವರ್ಷದ ಗಂಡು ಸಲಗವಾಗಿದ್ದು ಸೊಂಡಿಲಿಗೆ ಗಾಯ ಮಾಡಿಕೊಂಡಿತ್ತು. ಸಿಬ್ಬಂದಿ ಚಿಕಿತ್ಸೆ- ಆರೈಕೆ ನೀಡಿದ್ದರು. ಇನ್ನೂ ಹೆಚ್ಚಿನ. ಚಿಕಿತ್ಸೆಗೆ ಗುರುವಾರ ತಜ್ಞ ವೈದ್ಯರ ತಂಡ ಬರಬೇಕಿತ್ತು. ಅಷ್ಟರಲ್ಲಾಗಲೇ ಬಳಲಿದ್ದ ಆನೆ ಅಸುನೀಗಿದೆ ಎಂದು ವಲಯ ಅರಣ್ಯ ಅಧಿಕಾರಿ ಎಸ್.ಎಂ. ಸಂತೋಷ ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದ ಆನೆ ಹಿಂಡು, ಫೋಟೊ ತೆಗೆಯಲು ಮುಂದಾದ ಯುವಕ ಸಾವು

ಆನೇಕಲ್: ಕೆಲವೊಮ್ಮೆ ಮನುಷ್ಯನ ಅತಿಯಾದ ಉತ್ಸಾಹವೇ ಮೃತ್ಯುವಿಗೆ ಆಹ್ವಾನ ನೀಡುತ್ತದೆ ಎಂಬ ಮಾತು ಸುಳ್ಳಲ್ಲ. ರಾಜ್ಯದ ತಮಿಳುನಾಡು ಗಡಿ ಭಾಗದಲ್ಲಿ ಕಾಡಾನೆ ಹಿಂಡಿನ (Elephant attack) ಫೋಟೊ ತೆಗೆಯಲು ಹೋಗಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ತಮಿಳುನಾಡು-ಕರ್ನಾಟಕ ಗಡಿ ಭಾಗದಲ್ಲಿ ಕಾಡಾನೆಗಳ ಉಪಟಳ ಜೋರಾಗಿದೆ. ಕೃಷ್ಣಗಿರಿ ಸಮೀಪದ ಸಪ್ಪನಿಪಟ್ಟಿ ಹೆದ್ದಾರಿ ಬಳಿ ಕಾರೊಂದು ಸಾಗಿ ಹೋಗುತ್ತಿದ್ದಾಗ ಆನೆಗಳ ಹಿಂಡೊಂದು ಏಕಾಏಕಿಯಾಗಿ ಹೆದ್ದಾರಿಗೆ ನುಗ್ಗಿ ಕಾರಿನ ಮೇಲೆ ದಾಳಿ ನಡೆಸಿದೆ. ಕಾಡಾನೆಗಳ ದಾಳಿಗೆ ಕಾರು ಸಂಪೂರ್ಣ ಜಖಂ ಆಗಿದೆ. ಆದರೆ, ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದೆರಡು ದಿನಗಳಿಂದ ಸುತ್ತಮುತ್ತಲಿನ ಗ್ರಾಮಗಳ ಬಳಿ ಕಾಡಾನೆಗಳು ಬೀಡುಬಿಟ್ಟಿವೆ. ಇವುಗಳು ಆಗಾಗ ಹೆದ್ದಾರಿಗೆ ಬಂದು ದಾಂಧಲೆ ಎಬ್ಬಿಸುತ್ತಿವೆ. ಈ ನಡುವೆ ಅಪಘಾತದ ಬಳಿಕ ಆನೆಗಳು ಪಕ್ಕದ ತೋಟಕ್ಕೆ ನುಗ್ಗಿದ್ದವು. ಆಗ ಅಲ್ಲಿನ ಯುವಕನೊಬ್ಬ ಅವುಗಳ ಫೋಟೊ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ಆನೆಗಳು ತಿರುಗಿಬಿದ್ದಿದ್ದು, ಆತನ ಮೇಲೆ ದಾಳಿ ಮಾಡಿವೆ. ರಾಮ್‌ ಕುಮಾರ್‌ ಎಂಬ ಯುವಕನ ಮೇಲೆ ದಾಳಿ ಮಾಡಿದಾಗ ಆತ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.

ಈ ಭಾಗದಲ್ಲಿ ಆನೆಗಳ ಓಡಾಟ ಜೋರಾಗಿದ್ದು, ಜನರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಅನಿವಾರ್ಯತೆ ಇದೆ. ಆದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Elephant Conservationist : ಐದು ಕೋಟಿ ರೂಪಾಯಿ ಆಸ್ತಿಯನ್ನು ಆನೆಗಳಿಗೆ ವಿಲ್​ ಬರೆದ ಇಮಾಮ್​!

Exit mobile version