ಬೆಂಗಳೂರು: ಎಲಿಫೆಂಟ್ ವಿಸ್ಪರರ್ಸ್ (Elephant Whisperers) ಎಂಬ ಆಸ್ಕರ್ ಪ್ರಶಸ್ತಿ ವಿಜೇತ ಡಾಕ್ಯುಮೆಂಟರಿ ಈಗ ಜಗದ್ವಿಖ್ಯಾತ. ಪ್ರಾಣಿ ಮತ್ತು ಮನುಷ್ಯನ ನಡುವಿನ ಬಾಂಧವ್ಯವನ್ನು ಅತ್ಯಪೂರ್ವವಾಗಿ ಕಟ್ಟಿಕೊಟ್ಟ ದೃಶ್ಯ ಕಾವ್ಯ. ಬೊಮ್ಮನ್ ಮತ್ತು ಬೆಳ್ಳಿ ಸೇರಿಕೊಂಡು ರಘು ಮತ್ತು ಅಮ್ಮು ಎಂಬ ಎರಡು ಆನೆಗಳನ್ನು ಮಕ್ಕಳಂತೆ ಪೋಷಿಸಿದ ಕಥೆ ಎಲ್ಲರ ಭಾವಕೋಶಗಳಲ್ಲಿ ಅನಭೂತಿಯನ್ನು ಸೃಷ್ಟಿಸಿದೆ. ಆನೆಗಳ ಜತೆಗೆ ಅವರ ಬದುಕು, ಆನೆಗಳು ಈ ಇಬ್ಬರು ವ್ಯಕ್ತಿಗಳ ಜತೆಗೆ ಹೊಂದಿಕೊಂಡ ರೀತಿ, ತೋರಿಸಿದ ಪ್ರೀತಿ ನೋಡುವಾಗ ಎಷ್ಟೇ ಅವುಡುಗಚ್ಚಿದರೂ ಕಣ್ಣಾಲಿಗಳು ತುಂಬುತ್ತವೆ.
ಈ ಕಾರ್ತಿಕಿ ಗೊನ್ವಾಲ್ವಿಸ್ ಅವರು ರೂಪಿಸಿದ ಡಾಕ್ಯುಮೆಂಟರಿಯ ಪಾತ್ರಧಾರಿಗಳಾದ ಬೊಮ್ಮನ್ ಮತ್ತು ಬೆಳ್ಳಿ ಈಗ ಸೂಪರ್ ಸ್ಟಾರ್‌ಗಳಾಗಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಮುದುಮಲೈಯಲ್ಲಿ ಈ ಜೋಡಿಯನ್ನು ಭೇಟಿ ಮಾಡಿದ್ದಾರೆ. ಹಾಗಿದ್ದರೆ ಈ ಜೋಡಿ ಮೊದಲ ಬಾರಿ ಜತೆಯಾಗಿದ್ದು ಎಲ್ಲಿ? ಈಗ ಬದುಕು ಹೇಗಿದೆ? ಹಲವು ಕುತೂಹಲಗಳಿಗೆ ಇಲ್ಲಿದೆ ಉತ್ತರ.
ಬೊಮ್ಮನ್ ಮತ್ತು ಬೆಳ್ಳಿ ಇಬ್ಬರಿಗೂ ಈಗ ವಯಸ್ಸು 54. ಅವರು ಕೇರಳ ಮತ್ತು ತಮಿಳುನಾಡಿನಲ್ಲಿ ವಾಸವಾಗಿರುವ ಕಾಟ್ಟು ನಾಯಕನ್ ಎಂಬ ಆದಿವಾಸಿ ಜನಾಂಗಕ್ಕೆ ಸೇರಿದವರು. ಅಂದರೆ ಇವರು ಕಾಡಿನ ನಾಯಕರು. ನೀಲಗಿರಿಯ ಮುದುಮಲೈ ಅರಣ್ಯ ಭಾಗದ ಸಾಂಪ್ರದಾಯಿಕ ಬುಡಕಟ್ಟು ಜನಾಂಗ ಇವರದು.
ಬೊಮ್ಮನ್ ಆನೆಗಳನ್ನು ಪಳಗಿಸುವ ಮಾಹುತರ ಕುಟುಂಬದಿಂದ ಬಂದವನು. ಅಪ್ಪ ತೀರಿಕೊಂಡ ಮೇಲೆ ಆ ಕೆಲಸಕ್ಕೆ ಬೊಮ್ಮನ್ ತಲೆ ಕೊಟ್ಟ. ಬೊಮ್ಮನ್‌ಗೆ ಒಂದು ವಿಶೇಷವಾದ ಗ್ರಹಣ ಶಕ್ತಿ ಇತ್ತು. ಅವನಿಗೆ ಆನೆಗಳ ಪುಟ್ಟ ಮರಿಗಳು ಎಲ್ಲದರೂ ಸಿಕ್ಕಿ ಹಾಕಿಕೊಂಡಿದ್ದರೆ, ಹಿಂಡಿನಿಂದ ಬೇರೆಯಾಗಿದ್ದರೆ ಗೊತ್ತಾಗುತ್ತಿತ್ತು. ಅದೆಷ್ಟೋ ಮರಿಗಳನ್ನು ಅವನು ರಕ್ಷಿಸಿದ್ದ. ಹೀಗಾಗಿ ಅವನು ತಮಿಳುನಾಡಿನ ಅರಣ್ಯ ಇಲಾಖೆಯ ಫೇವರಿಟ್!
ಬೊಮ್ಮನ್ ಅರಣ್ಯ ಇಲಾಖೆಯಲ್ಲಿ ಚಿಲ್ಲರೆ ಪಲ್ಲರೆ ಕೆಲಸಗಳನ್ನು ಮಾಡುತ್ತಿದ್ದ. ಅವನ ದಿಕ್ಕಿಲ್ಲದ ಬದುಕೇ ಕಾರಣವಾಗಿ ಕಟ್ಟಿಕೊಂಡಿದ್ದ ಹೆಂಡತಿಯೂ ಬಿಟ್ಟುಹೋಗಿದ್ದಳು. ಆದರೆ, ಯಾವಾಗ ರಘು ಎಂಬ ಆನೆ ಅವನ ಬದುಕಿಗೆ ಬಂತೋ ಅಲ್ಲಿಂದ ಬದುಕಿನಲ್ಲಿ ಏನೋ ಪಾಸಿಟೀವ್ ಬದಲಾವಣೆ ಕಾಣಿಸಲು ಶುರುವಾಯಿತು.
ಅದು 2017. ಉತ್ತರ ತಮಿಳುನಾಡಿನ ಕೃಷ್ಣಗಿರಿಯ ಸಮೀಪದ ಪುಟ್ಟ ಊರು ಡೆಂಕಣಿಕೋಟ್ಟೈಯ ಅರಣ್ಯಾಧಿಕಾರಿಗಳಿಗೆ ಒಂದು ಪುಟ್ಟ ಆನೆ ಮರಿ ಸಿಕ್ಕಿತ್ತು. ಹಿಂದಿನಿಂದ ತಪ್ಪಿಸಿಕೊಂಡಿದ್ದ ಈ ಆನೆ ಮರಿಯನ್ನು ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು. ಅದನ್ನು ಬೊಮ್ಮನ್ ಇದ್ದ ಆನೆ ಶಿಬಿರಕ್ಕೆ ತರಲಾಯಿತು. ಭಯದಿಂದ ನಡುಗುತ್ತಿದ್ದ ಈ ಆನೆಮರಿಯನ್ನು ಬೊಮ್ಮನ್ ಕೈಗೆ ಒಪ್ಪಿಸಲಾಯಿತು.
ಈ ನಡುವೆ ಈ ಪುಟ್ಟ ಮರಿಗೆ ಬೊಮ್ಮನ್ ಮಾತ್ರ ಸಾಕಾಗುವುದಿಲ್ಲ. ಅದನ್ನು ತಾಯಿ ಮಮತೆಯಿಂದ ನೋಡಿಕೊಳ್ಳಲು, ಮಾನಸಿಕವಾದ ಬೆಂಬಲ ನೀಡಲು ಒಬ್ಬ ಹೆಣ್ಮಗಳೂ ಬೇಕು, ಎಂದು ಅಧಿಕಾರಿಗಳು ತೀರ್ಮಾನಿಸಿದರು. ಆಗ ಎಂಟ್ರಿ ಕೊಟ್ಟವರೇ ಬೆಳ್ಳಿ! ಬೆಳ್ಳಿ ಬೊಮ್ಮನ್‌ಗೆ ಸಹಾಯಕಿಯಾದರು.
ಬೆಳ್ಳಿ ಎಂದರೆ ಸೆನ್ನನ್ ಎಂಬ ಇನ್ನೊಬ್ಬ ಅರಣ್ಯ ಇಲಾಖೆ ಸಿಬ್ಬಂದಿಗೆ ಸಹಾಯ ಮಾಡುತ್ತಿದ್ದ ವ್ಯಕ್ತಿ. ವನ್ಯಜೀವಿಗಳ ಗಣತಿಯಲ್ಲಿ ಅವನು ಸಹಾಯ ಮಾಡುತ್ತಿದ್ದ. ಸೆನ್ನನ್ ಮತ್ತು ಬೆಳ್ಳಿ ದಂಪತಿಗೆ ಮೂವರು ಮಕ್ಕಳು. ಒಬ್ಬ ಮಗ ಮತ್ತು ಇಬ್ಬರು ಪುತ್ರಿಯರು.
ಅದೊಂದು ದಿನ ಸೆನ್ನನ್ ಚಿರತೆ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದ. ಸೆನ್ನನ್ ಕಾಡಿನಲ್ಲಿ ಒಂದು ಮರದಡಿಯಲ್ಲಿ ನಿಂತುಕೊಂಡಿದ್ದ. ಆ ಮರದ ಗೆಲ್ಲಿನಲ್ಲಿ ಚಿರತೆ ಇದ್ದದ್ದು ಅವನಿಗೆ ಗೊತ್ತೇ ಇರಲಿಲ್ಲ. ಚಿರತೆ ಜಿಗಿದು ಬಂದು ಅವನ ಕೊರಳಲ್ಲೇ ಹಿಡಿದು ಅಲ್ಲೇ ಕೊಂದು ಹಾಕಿತ್ತು.
ಮಕ್ಕಳು ಸಣ್ಣ ವಯಸ್ಸಿನಲ್ಲಿದ್ದಾಗಲೇ ಸೆನ್ನನ್ ನಿಧನನಾಗಿದ್ದ. ಹೀಗಾಗಿ ಮಕ್ಕಳ ಲಾಲನೆ ಪಾಲನೆಯ ಜವಾಬ್ದಾರಿಯೂ ಬೆಳ್ಳಿಯ ಹೆಗಲೇರಿತ್ತು. ಬೆಳ್ಳಿಯ ಒಬ್ಬ ಮಗಳು ಅದ್ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮತ್ತೊಬ್ಬ ಮಗಳು ಮಂಜು ಮದುವೆಯಾಗಿ ಗಂಡ ಮತ್ತು ಮಗಳ ಜತೆ ಮುದುಮಲೈಯಲ್ಲಿ ವಾಸವಾಗಿದ್ದಾಳೆ. ದೊಡ್ಡ ಮಗ ಕಾಲನ್ ಸೆನ್ನನ್ ತೇಪಕ್ಕಾಡು ಆನೆ ಶಿಬಿರದಲ್ಲಿ ಅರಣ್ಯ ಇಲಾಖೆಯಡಿ ಕೆಲಸ ಮಾಡುತ್ತಿದ್ದಾನೆ.
ಆನೆ ಮರಿಗಳ ಜತೆ ಇವರ ಪ್ರೀತಿಯೂ ಬೆಳೆಯಿತು
2017ರಲ್ಲಿ ಬಂದ ರಘುವನ್ನು ಬೊಮ್ಮನ್ ಮತ್ತು ಬೆಳ್ಳಿ ಪ್ರೀತಿಯಿಂದ ನೋಡಿಕೊಂಡರು. ಬೆಳ್ಳಿ ಆನೆಯ ಆರೈಕೆಯಲ್ಲಿ ತನ್ನೆಲ್ಲ ದುಃಖ ಮರೆತರೆ ಬೊಮ್ಮನ್ ಪಾಲಿಗೆ ರಘುವೇ ಮಗ ಎಲ್ಲ. ಅದರ ನಡುವೆ 2019ರಲ್ಲಿ ಅಮ್ಮು ಎಂಬ ಇನ್ನೊಂದು ಆನೆ ಮರಿ ಈ ಕುಟುಂಬವನ್ನು ಸೇರಿಕೊಳ್ಳುತ್ತದೆ. ರಘು ಮತ್ತು ಅಮ್ಮುವನ್ನು ಮಕ್ಕಳಂತೆ ಪ್ರೀತಿಸುತ್ತಾ ಇರುವ ನಡುವೆಯೇ ಇತ್ತ ಬೊಮ್ಮನ್ ಮತ್ತು ಬೆಳ್ಳಿ ನಡುವೆಯೂ ಪ್ರೀತಿ ಹುಟ್ಟಿಕೊಳ್ಳುತ್ತದೆ. ಹಾಗೆ ಅದು ಬೆಳೆಯುತ್ತಾ ಮದುವೆಯಾಗುತ್ತಾರೆ.
ಬೊಮ್ಮನ್ ಮಾಹುತನಾಗಿ ಆನೆಗಳ ಬದುಕನ್ನು ಮೊದಲೇ ಅರ್ಥ ಮಾಡಿಕೊಂಡಿದ್ದ. ಆದರೆ, ಬೆಳ್ಳಿಗೆ ಇದೆಲ್ಲವೂ ಹೊಸತೆ. ಬೊಮ್ಮನ್‌ನನ್ನು ನೋಡಿಕೊಂಡು ಆಕೆ ಆನೆಮರಿಗಳನ್ನು ಮಕ್ಕಳಂತೆ ನೋಡಿಕೊಳ್ಳಲು ಶುರು ಮಾಡಿದರು. ಅವರಿಬ್ಬರೂ ರಘು ಮತ್ತು ಅಮ್ಮುವಿಗೆ ಹಾಲು ಕುಡಿಸಿದರು. ಪಶುವೈದ್ಯರು ಹೇಳಿದಂತೆ ರಾಗಿ ಮುದ್ದೆ ತಿನ್ನಿಸಿದರು. ಎರಡೂ ಆನೆಗಳನ್ನು ವಾಕಿಂಗ್‌ಗೆ ಕರೆದುಕೊಂಡು ಹೋದರು, ಕಾಡಿನೊಳಗೆ ನಡೆಸಿದರು, ತರಬೇತಿ ನೀಡಿದರು. ಜ್ವರ ಬಂದಾಗ, ಅನಾರೋಗ್ಯವಾದಾಗ ಮಕ್ಕಳಂತೆ ಪೊರೆದರು.
ಆನೆಗಳು ಕೂಡಾ ಅವರನ್ನು ಅಪ್ಪ-ಅಮ್ಮನಿಗಿಂತಲೂ ಹೆಚ್ಚಾಗಿ ಪ್ರೀತಿಸಿದವು, ಮುದ್ದಿಸಿದವು, ಕಿಲಾಡಿ ಮಾಡಿದವು. ಅಪ್ಪ-ಅಮ್ಮನ ಜತೆ ಮಕ್ಕಳು ಹಠ ಮಾಡುವಂತೆ ಇವೂ ಮಾಡಿದವು. ಬೊಮ್ಮನ್ ಮತ್ತು ಬೆಳ್ಳಿ ಇವರ ಆಟಗಳನ್ನು ನೋಡುತ್ತಾ ನೋಡುತ್ತಾ ತಾವೇ ಅವುಗಳಿಗ ತಂದೆ-ತಾಯಿ ಆದರು. ಆದರೆ, ಆನೆಗಳನ್ನು ಸಣ್ಣ ಮರಿಗಳಿದ್ದಾಗ ಬೆಳೆಸುವುದಷ್ಟೇ ಇವರ ಕೆಲಸ. ದೊಡ್ಡವಾದ ಮೇಲೆ ಆನೆಗಳ ಕ್ಯಾಂಪ್‌ಗಳಿಗೆ ಕಳುಹಿಸಲೇಬೇಕು. ಹಾಗೆ ರಘು ಮತ್ತು ಅಮ್ಮುವನ್ನು ಬಿಟ್ಟುಕೊಟ್ಟಾಗ ಅವರಿಬ್ಬರು ಪಟ್ಟ ಸಂಕಟ ಅಷ್ಟಿಷ್ಟಲ್ಲ. ಆದರೆ, ಈಗಲೂ ಇವರಿಬ್ಬರೂ ಆನೆ ಕ್ಯಾಂಪ್‌ಗೆ ಹೋದರೆ ಅವುಗಳೆರಡೂ ಓಡೋಡಿ ಬರುತ್ತವಂತೆ.
ಈಗ ಬೊಮ್ಮನ್ ಮತ್ತು ಬೆಳ್ಳಿ ತಮ್ಮ ಪಾಡಿಗೆ ತಾವಿದ್ದಾರೆ. ಯಾರೋ ಫೋನ್ ಮಾಡಿ ಅಭಿನಂದಿಸುತ್ತಾರೆ, ಸನ್ಮಾನಕ್ಕೆ ಕರೆಯುತ್ತಾರೆ. ಈಗ ಪ್ರಧಾನಿಯೇ ಬಂದಿದ್ದಾರೆ. ಇಷ್ಟೆಲ್ಲ ಇದ್ದರೂ ಅವರಿಗೆ ಬೇಕು ಅನಿಸೋದು ರಘು ಅಥವಾ ಅಮ್ಮುವಿನಂಥ ಒಂದು ಪುಟ್ಟ ಆನೆ ಮರಿ ಮಾತ್ರ!
ಇದನ್ನೂ ಓದಿ : ವಿಸ್ತಾರ Explainer: ಆಸ್ಕರ್ ಪಡೆದ The Elephant Whisperers: ಕಾಡು, ಆನೆ, ಮಾನವರ ಬಾಂಧವ್ಯದ ದೃಶ್ಯಕಾವ್ಯ