ಚಾಮರಾಜನಗರ: ಚಾಮರಾಜನಗರ, ಮೈಸೂರು, ಹಾಸನ, ಕೊಡಗು ಸೇರಿದಂತೆ ಹಲವು ಕಡೆಗಳಲ್ಲಿ ಆನೆಗಳ ಉಪಟಳ (Elephant Attack) ಪ್ರಕರಣಗಳು ಹೆಚ್ಚುತ್ತಲೇ ಇವೆ. ಕಾಡಿನಿಂದ ನಾಡಿಗೆ ಬರುವ ಇವುಗಳು ಕಂಡ ಕಂಡಲ್ಲಿ ದಾಳಿ ನಡೆಸುತ್ತಲೇ ಇರುತ್ತವೆ. ಇನ್ನು ಕೆಲವು ಕಡೆ ರಸ್ತೆಗಳ ಮೇಲೆ ಬರುವ ಇವುಗಳು ಭಾರಿ ಉಪಟಳವನ್ನು ಕೊಡುತ್ತವೆ. ಈಗ ಚಾಮರಾಜನಗರ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ಬಳಿಯ ರಾಷ್ಟ್ರೀಯ ಹೆದ್ದಾರಿಯನ್ನು ಆನೆ ಹಾಗೂ ಮರಿಯಾನೆಯೊಂದು ಅಡ್ಡಗಟ್ಟಿ ಮನಸೋ ಇಚ್ಛೆ ಓಡಾಡಿವೆ. ಇದು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಲು ಕಾರಣವಾಗಿದೆ.
ಹಾಸನೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಪ್ರಸಂಗ ನಡೆದಿದೆ. ಆನೆಯೊಂದು ಕಾಡಿನಿಂದ ಆರಾಮವಾಗಿ ಹೆದ್ದಾರಿಯತ್ತ ಹೆಜ್ಜೆ ಇಟ್ಟಿದೆ. ಈ ವೇಳೆ ಸಾಕಷ್ಟು ವಾಹನಗಳು ಅಲ್ಲಿದ್ದವು. ಆನೆಗಳು ಬಂದೊಡನೆ ಯಾರೂ ಸಹ ಮುಂದೆ ಹೋಗುವ ದುಃಸ್ಸಾಹಸಕ್ಕೆ ಕೈ ಹಾಕಲಿಲ್ಲ. ಆನೆ ಈಗ ಹೋಗುತ್ತದೆ, ಆಗ ಹೋಗುತ್ತದೆ ಎಂದು ಕಾದವರೇ ಹೆಚ್ಚು. ಆದರೆ, ಹೀಗೆ ಕಾಯುತ್ತಾ ಕುಳಿತಾಗ ಟ್ರಾಫಿಕ್ ಜಾಮ್ ಸಹ ಆಗಿದೆ. ಕಿ.ಮೀ. ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿವೆ.
ಇದನ್ನೂ ಓದಿ: Weather report: ಗಳಿಗೆಗೊಂದು ವಾತಾವರಣ; ಏರಲಿದೆ ತಾಪಮಾನ, ಇರಲಿದೆ ಗುಡುಗು ಮಳೆ
ಆದರೆ, ಆನೆ ಮಾತ್ರ ತನ್ನ ಮರಿಯೊಂದಿಗೆ ಒಂದೊಂದೇ ವಾಹನವನ್ನು ದಾಟಿ ಬಂದಿದೆ. ಕೊನೆಗೊಂದು ತರಕಾರಿ ಲಾರಿಯೊಂದರ ಪಕ್ಕ ನಿಂತು ತರಕಾರಿ ತಿನ್ನಲು ಶುರು ಮಾಡಿದೆ. ಆಗ ತರಕಾರಿ ಮೂಟೆಗಳನ್ನು ಹೊತ್ತಿರುವ ಲಾರಿಯ ಚಾಲಕ ಸಹ ಒಂದು ಉಪಾಯ ಮಾಡಿದ್ದಾನೆ. ಮೆಲ್ಲಗೆ ಅಲ್ಲಿಂದ ಇನ್ನೊಂದು ಬದಿಗೆ ತನ್ನ ಲಾರಿಯನ್ನು ಚಲಾಯಿಸಿದ್ದಾನೆ. ಹಾಗೆ ಮಾಡುತ್ತಿದ್ದಂತೆ ಆ ಆನೆ ಸಹ ಲಾರಿಯನ್ನು ಹಿಂಬಾಲಿಸಿದೆ.
ಮತ್ತೊಂದು ಪಕ್ಕಕ್ಕೆ ಆತ ಜಾಗವನ್ನು ಮಾಡಿಕೊಟ್ಟ ಕಾರಣ ಇತ್ತ ಸಾಲು ಸಾಲಾಗಿ ನಿಂತಿದ್ದ ಕಾರಿನ ಸಹಿತ ಉಳಿದ ವಾಹನಗಳು ತಡ ಮಾಡದೇ ಜಾಗ ಖಾಲಿ ಮಾಡಿದವು. ಕೊನೆಗೆ ತರಕಾರಿ ಹೊತ್ತ ಲಾರಿ ಸಹ ಅಲ್ಲಿಂದ ಮುಂದೆ ಸಾಗಿದೆ.
ಇದನ್ನೂ ಓದಿ: Monsoon Season : ಏನು ನಿನ್ನ ಹನಿಗಳ ಲೀಲೆ… ಭಾರತದಲ್ಲಿ ಮುಂಗಾರು ಸೃಷ್ಟಿ ಹೇಗೆ? ಮಳೆ ವ್ಯಾಪಿಸುವುದು ಯಾವ ರೀತಿ?
ಕಾರಿನಲ್ಲಿದ್ದವರಿಗೆ ಪುಕು ಪುಕು
ಇದಕ್ಕೂ ಮೊದಲು ಆನೆ ಹಾಗೂ ಮರಿಯು ತರಕಾರಿ ಲಾರಿಯತ್ತ ಬರುತ್ತಿದ್ದಾಗ ಎದುರಿಗೆ ಕೇವಲ 50 ಮೀಟರ್ ದೂರದಲ್ಲಿದ್ದ ಕಾರಿನವರಿಗೆ ಭಯ ಶುರುವಾಗಿದೆ. ಎಲ್ಲಿ ಆನೆಯು ತಮ್ಮ ಕಾರಿನತ್ತ ದಾಳಿ ಮಾಡಿಬಿಡುತ್ತದೆಯೋ ಎಂಬ ಆತಂಕ ಎದುರಾಗಿದೆ. ಈ ಸಮಯದಲ್ಲಿ ಆನೆಗೆ ತರಕಾರಿ ಕಂಡಿದ್ದರಿಂದ ತರಕಾರಿ ಮೂಟೆಯತ್ತ ತನ್ನ ಸೊಂಡಿಲನ್ನು ಒಡ್ಡಿದೆ. ಇಷ್ಟಾದ ಮೇಲೆ ಕಾರಿನವರು ಒಂದು ಮಟ್ಟಿಗೆ ನಿರಾಳರಾದರು. ಇದೇ ವೇಳೆ ತರಕಾರಿ ಲಾರಿ ಚಾಲಕ ಪಕ್ಕಕ್ಕೆ ಲಾರಿಯನ್ನು ಒಯ್ದಿದ್ದರಿಂದ ಎಲ್ಲರೂ ಬಚಾವಾಗಿ ತೆರಳಿದ್ದಾರೆ.