ಕುರುಗೋಡು(ಬಳ್ಳಾರಿ ಜಿಲ್ಲೆ): ಜಿಲ್ಲೆಯ ಕುರುಗೋಡು ಸಮೀಪದ ಎಮ್ಮಿಗನೂರಿನ ಜಡೇಸಿದ್ದೇಶ್ವರ ಹಳ್ಳದಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವುದರಿಂದ ಎಮ್ಮಿಗನೂರು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಎಮ್ಮಿಗನೂರಿನ ಸಮೀಪದಲ್ಲಿಯೇ ಹಳ್ಳ ಇರುವುದರಿಂದ ಅಲ್ಲಿನ ಜನರು ಮತ್ತು ಹುಡುಗರು ಹಳ್ಳದ ದಂಡೆಗೆ ಹೋಗುತ್ತಿರುತ್ತಾರೆ. ಹಳ್ಳದ ಮೂಲಕವೇ ರೈತರು ಮತ್ತು ಕೃಷಿ ಕಾರ್ಮಿಕರು ಜಮೀನುಗಳಿಗೆ ತೆರಳಬೇಕಾಗಿರುವುದರಿಂದ ಮತ್ತಷ್ಟು ಆತಂಕಗೊಳ್ಳುವಂತಾಗಿದೆ. ಜಾನುವಾರುಗಳಿಗೆ ಹಳ್ಳದಲ್ಲಿ ನೀರು ಕುಡಿಸಲು ಹೋಗಲು ಭಯಗೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ಹಳ್ಳವು ತುಂಬಿ ಹರಿಯುತ್ತಿದೆ. ಕಳೆದ ಒಂದು ವಾರದಿಂದಲೇ ಹಳ್ಳದಲ್ಲಿ ಮೊಸಳೆ ಕಂಡು ಬಂದಿದೆ. ಶುಕ್ರವಾರ ಹಳ್ಳದ ಸಮೀಪಕ್ಕೆ ಹೋದಾಗ ಮೊಸಳೆ ಇರುವುದು ಮೊಬೈಲ್‌ನಲ್ಲಿ ಗ್ರಾಮಸ್ಥರು ವಿಡಿಯೊ ಮಾಡಿಕೊಂಡಿದ್ದು ವೈರಲ್ ಆಗಿದೆ.
ಪ್ರತಿವರ್ಷವು ಮಳೆ ಬಂದು ಹಳ್ಳ ಹರಿದಾಗ ಮೊಸಳೆಗಳು ಪ್ರತ್ಯಕ್ಷವಾಗುತ್ತಿರುತ್ತವೆ. ಕಳೆದ ವರ್ಷ ಗ್ರಾಮದ ನಾಯಕರ ಹುಲುಗಪ್ಪ ಆಡುಗಳನ್ನು ಮೇಯಿಸಲು ಹೋದಾಗ ಆಡನ್ನು ಮೊಸಳೆ ತಿಂದಿತ್ತು. ಹಳ್ಳದ ಸಮೀಪಕ್ಕೆ ಹೋದರೆ ಜನರ ಜೀವಕ್ಕೆ ಅಪಾಯ ಎಂದು ಗ್ರಾಮಸ್ಥರು ಭಯಭೀತರಾಗಿದ್ದು, ಅರಣ್ಯ ಇಲಾಖೆಯವರು ಮೊಸಳೆಗಳನ್ನು ಸೆರೆಹಿಡಿಯಲು ಮುಂದಾಗಬೇಕೆಂದು ಎಮ್ಮಿಗನೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ | ಮೊಸಳೆ ಎಳೆದೊಯ್ದಿದ್ದ ವ್ಯಕ್ತಿಯ ಮೃತದೇಹ ಪತ್ತೆ