Site icon Vistara News

NPS News : ಎನ್‌ಪಿಎಸ್‌ ರದ್ದಿನಿಂದ ಸರ್ಕಾರಕ್ಕೆ ಹೊರೆಯಾಗದು; ವೇತನ ಆಯೋಗದ ಮುಂದೆ NPS ನೌಕರರ ವಾದ

nps employees 7th Pay Commission

nps

ಬೆಂಗಳೂರು: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ (ಓಪಿಎಸ್‌) ಜಾರಿಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು (NPS News) ೭ನೇ ವೇತನ ಆಯೋಗಕ್ಕೆ (7th Pay Commission) ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘ ಮನವಿ ಸಲ್ಲಿಸಿದೆ.

ನೌಕರರಿಂದ ಮಾಹಿತಿ ಹಾಗೂ ಸಲಹೆಗಳನ್ನು ಪಡೆಯಲು ಆಯೋಗವು ಪ್ರಕಟಿಸಿರುವ ಪ್ರಶ್ನಾವಳಿಗೆ ಉತ್ತರ ನೀಡಿರುವ ನೌಕರರ ಸಂಘ, ಓಪಿಎಸ್‌ ಜಾರಿಯಿಂದ ಸರ್ಕಾರಕ್ಕೆ ಹೊರೆಯಾಗುತ್ತದೆ ಎಂಬ ವಾದವನ್ನು ತಳ್ಳಿಹಾಕಿ, ಇದಕ್ಕೆ ಅಗತ್ಯವಾಗಿರುವ ದಾಖಲೆಗಳನ್ನು ಒದಗಿಸಿದೆ.

ನೂತನ ಪಿಂಚಣಿ ವ್ಯವಸ್ಥೆಯು ಸರ್ಕಾರ ಹಾಗೂ ಸರ್ಕಾರಿ ನೌಕರರ ನಡುವೆ ಇರುವ ಸಂಬಂಧವನ್ನು ದೂರ ಮಾಡುತ್ತಿದೆ. ಈ ಅವೈಜ್ಞಾನಿಕವಾದ ಯೋಜನೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿರುವ ಎನ್‌ಪಿಎಸ್‌ ನೌಕರರ ಸಂಘ, ಈಗಾಗಲೇ ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್‌, ಪಂಚಾಬ್‌ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳು ಎನ್‌ಪಿಎಸ್‌ ಯೋಜನೆಯನ್ನು ರದ್ದು ಪಡಿಸಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಲು ಮತ್ತು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಶಿಫಾರಸು ಮಾಡಿ ಎಂದು ಒತ್ತಾಯಿಸಿದೆ.

ಎನ್‌ಪಿಎಸ್‌ ನೌಕರರನ್ನು ಇಬ್ಭಾಗವಾಗಿಸಿದೆ

ರಾಜ್ಯದ ಬಹುತೇಕ ಶಾಸಕರುಗಳು ಈ ಯೋಜನೆಯನ್ನು ರದ್ದುಪಡಿಸಲು ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕಲ್ಯಾಣ ರಾಜ್ಯ ಪರಿಕಲ್ಪನೆಯ ಸಾಕಾರಕ್ಕಾಗಿ ಯಾವುದೇ ಆಳುವ ಸರ್ಕಾರಗಳು ನೌಕರನ ಹಿತರಕ್ಷಣೆಯನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಬೇಕು. ಈ ಯೋಜನೆಯು ಸರ್ಕಾರಿ ನೌಕರರನ್ನು ಇಬ್ಭಾಗ ಮಾಡಿದ್ದು, ಇದು ಸಂವಿಧಾನ ಬದ್ಧ ಸಮಾನ ಹಕ್ಕಿನ ಉಲ್ಲಂಘನೆಯಾಗಿದೆ ಎಂದಿರುವ ಎನ್‌ಪಿಎಸ್‌ ನೌಕರರ ಸಂಘ, ಎನ್‌ಪಿಎಸ್‌ ಯೋಜನೆ ಸರ್ಕಾರಿ ನೌಕರನೋರ್ವ ಸರ್ಕಾರದ ಸಮಾಜಮುಖಿ ಯೋಜನೆಗಳನ್ನು ಜನಸಾಮಾನ್ಯರಿಗೆ ದೊರಕಿಸಿಕೊಡುವಲ್ಲಿ ಸೇವಾ ಮನೋಭಾವವನ್ನು ಮಾರ್ಪಡಿಸಿ ಸ್ವಾರ್ಥಕ್ಕೆ ಪ್ರೇರೇಪಣೆ ನೀಡುವಂತಿದೆ. ಇದು ಸಾರ್ವಜನಿಕ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುತ್ತದೆ ಎಂದು ಗಮನ ಸೆಳೆದಿದೆ.

ಹಲವು ದೇಶಗಳಲ್ಲಿ ಎನ್‌ಪಿಎಸ್‌ ವಿಫಲ

ಈ ಯೋಜನೆಯು ಪ್ರಪಂಚದ ಅನೇಕ ದೇಶಗಳಲ್ಲಿ ವಿಫಲಗೊಂಡಿರುವ ಪಿಂಚಣಿ ಯೋಜನೆಯಾಗಿದ್ದು, ಫ್ರಾನ್ಸ್‌, ಸ್ಪೇನ್‌, ಗ್ರೀಸ್‌, ಡೆನ್ಮಾರ್ಕ್‌, ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಈ ಯೋಜನೆಯಡಿ ಹೂಡಿರುವ ನೌಕರರ ಹಣವು 2008 ರಲ್ಲಿ ಉಂಟಾದ ಷೇರು ಮಾರುಕಟ್ಟೆ ಕುಸಿತದಿಂದ ಸಂಪೂರ್ಣ ನಷ್ಟ ಹೊಂದಿರುತ್ತವೆ. ನೌಕರರ ಹಾಗೂ ಜನಸಾಮಾನ್ಯರ ಹಣವನ್ನು ಹೂಡಿಕೆ ಮಾಡಿದ್ದ ಕಂಪನಿಗಳು ದಿವಾಳಿಯಾಗಿವೆ. (ಉದಾ: ಅಮೆರಿಕದ ಜನರಲ್‌ ಇನ್ಸೂರೆನ್ಸ್‌ ಕಂಪನಿ ಲಿಮಿಟೆಡ್‌) ಇದರಿಂದಾಗಿ ಅಲ್ಲಿನ ನೌಕರರು ಪಿಂಚಣಿ ಹಣ, ವಿಮೆ ಹಣ ಹಾಗೂ ಉಳಿತಾಯದ ಹಣವನ್ನು ಸಂಪೂರ್ಣವಾಗಿ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ ಎಂದು ಸಂಘವು ಮನವಿಯಲ್ಲಿ ಹೇಳಿದೆ.

ನಮ್ಮ ದೇಶದ ಜಿಡಿಪಿಯ ಬಹುಪಾಲು ಹಣ ನೌಕರರಿಗೆ ನೀಡುವ ವೇತನ ಮತ್ತು ಪಿಂಚಣಿಗೆ ಹೋಗುತ್ತದೆ ಎಂಬ ಅಂಶವನ್ನೇ ಆಧಾರವಾಗಿಟ್ಟು, ಎನ್‌ಪಿಎಸ್‌ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಲಾಗುತ್ತದೆ. ಆದರೆ ವಾಸ್ತವವಾಗಿ ಇದು ಸತ್ಯಕ್ಕೆ ದೂರವಾದ ಮಾತಾಗಿದೆ. ವಿವಿಧ ರಾಷ್ಟಗಳಲ್ಲಿ ನೌಕರರಿಗೆ ನೀಡುವ ವೇತನ ಮತ್ತು ಪಿಂಚಣಿಗೆ ಜಿಡಿಪಿಯ ಪಾಲು ಇಂತಿದೆ; ಬ್ರೆಜಿಲ್‌ ಶೇ. 5, ಚೀನಾ ಶೇ. 10.6, ಇಟಲಿ ಶೇ.14.2, ಉಕ್ರೇನ್‌ ಶೇ. 15.4, ಅಮೇರಿಕದಲ್ಲಿ ಶೇ. 33 ರಷ್ಟಾಗಿದ್ದು, ಇಲ್ಲಿ ವೃದ್ಯಾಪ್ಯ ಸಂಬಂಧಿ ಸಾಮಾಜಿಕ ಆರ್ಥಿಕ ಭದ್ರತೆಗಾಗಿ ಇದನ್ನು ಮೀಸಲಿರಿಸಲಾಗಿದೆ. ಆದರೆ ಭಾರತ ಶೇ.0.93 ಮಾತ್ರ. ಸರ್ಕಾರವು ವೇತನ ಹಾಗೂ ಪಿಂಚಣಿಗಾಗಿ ವೆಚ್ಚ ಮಾಡುವ ಒಟ್ಟು ಮೊತ್ತದಲ್ಲಿ ಸರ್ಕಾರದ ವಿಧಾನಮಂಡಲ ಸದಸ್ಯರ ಹಾಗೂ ಕೇಂದ್ರ ಸೇವೆಗೆ ಸೇರಿರುವ ಅಧಿಕಾರಿಗಳ (ಐಎಎಸ್‌, ಐಪಿಎಸ್‌) ವೇತನ ಹಾಗೂ ಪಿಂಚಣಿಯು ಸೇರಿರುತ್ತದೆ ಎಂದು ಎನ್‌ಪಿಎಸ್‌ ನೌಕರರ ಸಂಘವು ಆಯೋಗದ ಗಮನ ಸೆಳೆದಿದೆ.

ಸರ್ಕಾರಕ್ಕೆ ಹೊರೆಯ ಮಾತೇ ಇಲ್ಲ

ಎನ್‌ಪಿಎಸ್‌ ಯೋಜನೆಯನ್ನು ರದ್ದುಪಡಿಸಿ, ಓಪಿಎಸ್‌ ಜಾರಿಗೆ ತರುವುದರಿಂದ ತಕ್ಷಣಕ್ಕೆ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆಯಾಗುತ್ತದೆ ಎಂಬ ಅಭಿಪ್ರಾಯವಿದೆ. ಆದರೆ ಈ ಯೋಜನೆಯಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಪ್ರಯೋಜನವಾಗಿರುವುದಿಲ್ಲ ಎಂದು ವಾದಿಸಿರುವ ನೌಕರರ ಸಂಘ ಇದನ್ನು ಹೀಗೆ ಸಮರ್ಥಿಸಿಕೊಂಡಿದೆ.

ರಾಜ್ಯ ಸರ್ಕಾರಕ್ಕಿದೆ ರದ್ದಿನ ಅಧಿಕಾರ

ಪಿಎಫಆರ್‌ಡಿಎ ಕಾಯ್ದೆಯ ಕಲಂ 12(5) ರಲ್ಲಿ ಎನ್‌ಪಿಎಸ್‌ ಯೋಜನೆಯನ್ನು ಅಳವಡಿಸಿಕೊಳ್ಳುವ ಅಥವಾ
ಬಿಡುವ ಸಂಪೂರ್ಣ ಅಧಿಕಾರವನ್ನು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿರುತ್ತದೆ. ಜೊತೆಗೆ ಕೇಂದ್ರ ಸರ್ಕಾರವು ಸಂಘದ ಮನವಿಗೆ ನೀಡಿರುವ ಸೃಷ್ಟೀಕರಣದಲ್ಲಿ ಇದೆ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದೆ ಎಂದು ಎನ್‌ಪಿಎಸ್‌ ನೌಕರರ ಸಂಘ ದಾಖಲೆ ಒದಗಿದೆ.

ಈ ಯೋಜನೆಯು ನೌಕರರ ಸಂಧ್ಯಾಕಾಲದ ಬದುಕಿಗೆ ಸಾಮಾಜಿಕ ಆರ್ಥಿಕ ಭದ್ರತೆಯನ್ನು ನೀಡದೇ ಇರುವುದರಿಂದ ಈ ಯೋಜನೆಯನ್ನು ರದ್ದುಗೊಳಿಸುವಂತೆ ನಿರಂತರ ಹೋರಾಟವನ್ನು ನಡೆಸಲಾಗಿದೆ ಎಂದು ಎನ್‌ಪಿಎಸ್‌ ನೌಕರರ ಸಂಘವು ತಾನು ಇದುವರೆಗೆ ನಡೆಸಿದ ಹೋರಾಟದ ಕುರಿತು ವಿವರಿಸಿದೆ.

ಇದನ್ನೂ ಓದಿ : 7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Exit mobile version