ಬೆಂಗಳೂರು: ಪ್ರವಾಹ ಪೀಡಿತ ಪ್ರದೇಶ ಮಹದೇವಪುರದಲ್ಲಿ ಬುಲ್ಡೋಜರ್ ಗರ್ಜಿಸಿದೆ. ಸೋಮವಾರ ಒತ್ತುವರಿದಾರರಿಗೆ ಬಿಬಿಎಂಪಿ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದು, ಒತ್ತುವರಿ ತೆರವು ಕಾರ್ಯಾಚರಣೆ (Encroachment) ಭರದಿಂದ ಸಾಗಿದೆ.
ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ ಸುರಿದ ಮಳೆಯಿಂದ ಪ್ರವಾಹ ಸೃಷ್ಟಿಯಾಗಿ ಜನರು ಬೀದಿಗೆ ಬೀಳುವಂತಾಯಿತು. ಮುಳುಗಡೆಯಾದ ಬೆಂಗಳೂರು ದೇಶದ ರಾಜಧಾನಿವರೆಗೂ ಚರ್ಚೆಗೆ ಗ್ರಾಸವಾಗಿತ್ತು. ಪ್ರವಾಸ ಸೃಷ್ಟಿಗೆ ಕಾರಣವನ್ನು ಹುಡುಕಿದಾಗ ರಾಜಕಾಲುವೆ ಒತ್ತುವರಿ ಎಂದು ತಿಳಿದು ಬಂದಿತ್ತು.
ರಾಜಕಾಲುವೆ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಅಪಾರ್ಟ್ಮೆಂಟ್, ಮನೆಗಳು, ಅಂಗಡಿಗಳನ್ನು ಕಟ್ಟಿಸಿಕೊಂಡಿದ್ದವರಿಗೆ ಇಲಾಖೆಯು ಬುಲ್ಡೋಜರ್ ಮೂಲಕ ಶಾಕ್ ಕೊಟ್ಟಿದೆ. ಅಕ್ರಮವಾಗಿ ಸರ್ಕಾರದ ಜಾಗವನ್ನು ಕಬಳಿಸಿದ ಮನೆಗಳಿಗೆ ಬುಲ್ಡೋಜರ್ ಸಹಾಯದೊಂದಿಗೆ ಕಾಂಪೌಂಡ್, ಗೋಡೆಗಳನ್ನು ನೆಲಸಮ ಮಾಡಲಾಗಿದೆ.
25ಕ್ಕೂ ಹೆಚ್ಚು ಮನೆ ನೆಲಸಮ
ಚಿನ್ನಪ್ಪನಹಳ್ಳಿಯಿಂದ ಮುನೇನಕೊಳಲುವರೆಗೆ 25ಕ್ಕೂ ಹೆಚ್ಚು ಮನೆಗಳು ಒತ್ತುವರಿ ಮಾಡಿಕೊಂಡಿದ್ದವು. ಆ ಪ್ರದೇಶಗಳೆಲ್ಲ ತೆರವು ಕಾರ್ಯಾಚರಣೆ ನಡೆದಿದೆ. 5 ಅಡಿಯ ಬೃಹತ್ ರಾಜಕಾಲುವೆಯ ಮೇಲೆ ಮೆಡಿಕಲ್ ಸ್ಟೋರ್, ಶಾಪಿಂಗ್ ಕಾಂಪ್ಲೆಕ್ಸ್, ಮನೆಗಳು ನಿರ್ಮಾಣವಾಗಿದ್ದವು. ಅವುಗಳನ್ನು ಕೆಡವಿ ಹಾಕಲಾಯಿತು.
ಸ್ಥಳೀಯರ ವಿರೋಧ
ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕೆಲ ಸ್ಥಳೀಯರಿಂದ ವಿರೋಧ ವ್ಯಕ್ತವಾಯಿತು. ರಾಜಕಾಲುವೆಯನ್ನು ನಾವು ಒತ್ತುವರಿ ಮಾಡಿಕೊಂಡಿಲ್ಲ. ದೊಡ್ಡವರನ್ನು ಉಳಿಸಲು ಹೋಗಿ, ನಮ್ಮನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮುನೇನಕೊಳಲು ಭಾಗದ ಸ್ಪೈಸ್ ಗಾರ್ಡನ್ ಬಳಿ 20 ಕಟ್ಟಡಗಳು, ಚಿನ್ನಪ್ಪನಹಳ್ಳಿಯಲ್ಲಿ 5 ಕಟ್ಟಡ ಒತ್ತುವರಿಯಾಗಿದೆ. ಒತ್ತುವರಿಯಾದ ಜಾಗದಲ್ಲಿ ಬೃಹತ್ ನೀರುಗಾಲುವೆಯ ಕಾಂಪೌಂಡ್ ಕಟ್ಟಿಕೊಂಡು, ರಾಜಕಾಲುವೆಯನ್ನು ಉಳಿಸಲು ಪಾಲಿಕೆ ಮುಂದಾಗಿದೆ. ಒತ್ತುವರಿಯಾದ ಜಾಗದಲ್ಲಿ ಕೆಲ ಮನೆಯವರು ಜಾಗ ಖಾಲಿ ಮಾಡಿಲ್ಲ. ಅಂತಹವರಿಗೆ ಕಂದಾಯ ಇಲಾಖೆ ಮತ್ತೆ ನೋಟಿಸ್ ನೀಡಿ, 7 ದಿನಗಳ ಕಾಲಾವಕಾಶ ನೀಡಲಿದೆ. ಬಳಿಕ ಮತ್ತೆ ತೆರವು ಕಾರ್ಯಾಚರಣೆ ಶುರುವಾಗಲಿದೆ. ಈ ತೆರವು ಕಾರ್ಯಾಚರಣೆಯ ವೆಚ್ಚವನ್ನ ಪಾಲಿಕೆಯೇ ಆರಂಭದಲ್ಲಿ ಭರಿಸಲಿದ್ದು, ಆ ನಂತರ ಮನೆ ಮಾಲೀಕರಿಂದ ವಸೂಲಿ ಮಾಡಲಿದೆ.
ಒತ್ತುವರಿಯಾದ ಜಾಗವನ್ನು ಪಾಲಿಕೆಯ ಅಧಿಕಾರಿಗಳು ಸಂಪೂರ್ಣವಾಗಿ ಕೆಡವದೇ, ಪ್ರಭಾವಿಗಳ ಪ್ರಭಾವದಿಂದ ಅರ್ಧ ಕೆಡವಿ ಬಿಟ್ಟಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಅಪಾರ್ಟ್‌ಮೆಂಟ್, ದೊಡ್ಡ ಮನೆಗಳನ್ನು ಬಿಟ್ಟು, ಸಣ್ಣಪುಟ್ಟ ಮನೆಯನ್ನು ಕೆಡವಿದ್ದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Encroachment | ಒತ್ತುವರಿದಾರರಿಗೆ ಶಾಕ್; ರೈನ್ ಬೋ ಡ್ರೈವ್ ನಿವಾಸಿಗಳಿಗೆ ಮನೆ ತೆರವು ನೋಟಿಸ್!