ಬೆಂಗಳೂರು: “ವಿಥೌಟ್ ನೋಟಿಸ್, ವಿಥೌಟ್ ಮಾರ್ಕಿಂಗ್ ಹೇಗೆ ಡೆಮಾಲಿಷ್ ಮಾಡ್ತೀರಾ? ಈ ಜಾಗ ಶಾಸಕರದ್ದು ಅಂತ ಗೊತ್ತಿದ್ರೂ, ನೀವು ಡೆಮಾಲಿಷ್ ಮಾಡ್ತೀರಾ? ನಿಮಗೆಷ್ಟು ಧೈರ್ಯ?” ಹೀಗೆ ಶಾಂತಿನಗರ ಶಾಸಕ ಹ್ಯಾರಿಸ್ ಅವರ ಆಪ್ತ ಸಹಾಯಕ ರಮೇಶ್ ಎಂಬುವವರು ಒತ್ತುವರಿ ತೆರವು (Rajakaluve Encroachment) ಮಾಡಲು ಬಂದ ಬಿಬಿಎಂಪಿ ಅಧಿಕಾರಿಗಳಿಗೆ ಧಮ್ಕಿ ಹಾಕಿದ ರೀತಿ.
ಬಿಬಿಎಂಪಿಯಿಂದ ಎರಡನೇ ದಿನವಾದ ಮಂಗಳವಾರವೂ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಇದರ ಭಾಗವಾಗಿ ಪಾಪ ರೆಡ್ಡಿ ಲೇಔಟ್‌ನಲ್ಲಿದ್ದ ಹ್ಯಾರಿಸ್ ಪುತ್ರ ನಲಪಾಡ್‌ಗೆ ಸೇರಿದ ಜಾಗದ ತೆರವು ವಿಚಾರವಾಗಿ ಭಾರಿ ಗೊಂದಲ ಹಾಗೂ ವಿವಾದ ಸೃಷ್ಟಿಯಾಗಿದೆ. ಈ ಸಂಬಂಧ ತೆರವು ಕಾರ್ಯಾಚರಣೆಗೆ ಬಂದ ಬಿಬಿಎಂಪಿ ಅಧಿಕಾರಿಗಳಿಗೆ ಅಡ್ಡಿಪಡಿಸಿದ ಪ್ರಸಂಗ ನಡೆದಿದೆ.
ಹ್ಯಾರಿಸ್ ಪಿಎ ಧಮ್ಕಿ
ಕಾರ್ಯಾಚರಣೆಗೆ ಬಂದ ಬಿಬಿಎಂಪಿ ಅಧಿಕಾರಿಗಳಿಗೆ ರಮೇಶ್ ಬೆದರಿಕೆ ಹಾಕಿದ್ದಾರೆ. “ನೋಟಿಸ್ ನೀಡದೆ, ಮಾರ್ಕಿಂಗ್ ಮಾಡದೇ ಹೇಗೆ ಡೆಮಾಲಿಷ್ ಮಾಡುತ್ತೀರಿ? ನಮಗೆ ಮೊದಲು ನೋಟಿಸ್ ನೀಡಿ, ಬಳಿಕ ನಮ್ಮ ದಾಖಲೆಗಳನ್ನು ಪರಿಶೀಲಿಸಬೇಕು” ಎಂದು ಅವಾಜ್ ಹಾಕಿದ್ದಾರೆ. ಅಲ್ಲದೆ, ಮುಂದುವರಿದು ಮಾತನಾಡಿ, “ಇದು ಶಾಸಕರ ಮನೆ ಎಂದು ಗೊತ್ತಿದ್ದರೂ ಬಂದಿದ್ದೀರಾ? ನಿಮಗೆಷ್ಟು ಧೈರ್ಯ” ಎಂದು ಸಹ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಜತೆಗೆ ಡೆಮಾಲಿಷ್ ನಿಲ್ಲಿಸುವಂತೆ ಪೊಲೀಸರಿಗೂ ಅವಾಜ್ ಹಾಕಿದ್ದಾರೆ.
ಫೋನ್ ಕಾಲ್‌ಗೆ ಒತ್ತುವರಿ ತೆರವು ವಾಪಸ್
ಪಾಪ ರೆಡ್ಡಿ ಲೇಔಟ್‌ನಲ್ಲಿ ಶಾಸಕ ಹ್ಯಾರಿಸ್ ಪುತ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಅವರಿಗೆ ಸೇರಿದ ನಲಪಾಡ್ ಅಕಾಡೆಮಿಯ ಜಾಗ ಇದಾಗಿತ್ತು. ಕಾರ್ಯಾಚರಣೆಗೆ ಬಂದಾಗ ಒಂದು ಸುತ್ತಿನ ಮಾತಿನ ಚಕಮಕಿ ಆಗಿದೆ. ಬಳಿಕ ಒತ್ತುವರಿ ತೆರವು ಅರ್ಧಕ್ಕೆ ನಿಂತಿದೆ. ಬಿಬಿಎಂಪಿ ಅಧಿಕಾರಿಗಳ ಸಹಿತ ಪೊಲೀಸರು ಸ್ಥಳದಲ್ಲಿಯೇ ನಿಂತಿದ್ದರು. ಆದರೆ, ಇದೇ ವೇಳೆ ಬಿಬಿಎಂಪಿ ಅಧಿಕಾರಿಗಳಿಗೆ ಕಾಂಗ್ರೆಸ್ ಶಾಸಕರಿಂದ ಕರೆ ಬಂದಿದ್ದೆ ತಡ, ಕೇವಲ 10 ನಿಮಿಷಗಳಲ್ಲಿ ಒತ್ತುವರಿ ನಿಲ್ಲಿಸಿ ಅಧಿಕಾರಿಗಳು ಕಾಲ್ಕಿತ್ತಿದ್ದಾರೆ. ಇದು ಸಾರ್ವಜನಿಕ ಆಕ್ರೋಶಕ್ಕೂ ಕಾರಣವಾಗಿದ್ದು, ಬಡ ಜನರಿಗೆ ಒಂದು ನ್ಯಾಯ, ಬಡ ಜನರಿಂದ ಆಯ್ಕೆಯಾಗಿ ಹೋಗಿರುವವರಿಗೆ ಇನ್ನೊಂದು ನ್ಯಾಯವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ | ಮಹದೇವಪುರದಲ್ಲಿ ಇಂದೂ ಮುಂದುವರಿಯಲಿದೆ ಆಪರೇಷನ್ ಬುಲ್ಡೋಜರ್, ಎಲ್ಲೆಲ್ಲಿ ಒತ್ತುವರಿ?